ಸುದ್ದಿ

ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ರಾಜ್ಯ ಮಟ್ಟದ ಕಲಾ ಕೌಸ್ತುಭ ಪ್ರಶಸ್ತಿ ಪ್ರಧಾನ

ಬೆಂಗಳೂರು: ಬೆಂಗಳೂರಿನ ಮಲ್ಲತ್ತಹಳ್ಳಿಯ ಕಲಾಗ್ರಾಮದಲ್ಲಿ ಕಲಾ ಕೌಸ್ತುಭ ಟ್ರಸ್ಟ್ ಉದ್ಘಾಟನೆ ಮತ್ತು ಪತ್ರಕರ್ತರು ಹಾಗೂ ನಿರ್ದೇಶಕರಾದ ದಿವಂಗತ ಪಿ.ಸಾಯಿಬಾಬಾ ಸಿರಿವಾರ ರವರ ಸ್ಮರಣಾರ್ಥವಾಗಿ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ರಾಜ್ಯ ಮಟ್ಟದ ಪ್ರಶಸ್ತಿ ಪ್ರಧಾನ ಸಮಾರಂಭವನ್ನು ಹಿರಿಯ ಕಲಾವಿದರಾದ ಶರಣಪ್ಪ ಒಡ್ಡಿಗೇರಿ ಉದ್ಘಾಟನೆ ಮಾಡಿದರು.

ಕಾರ್ಯಕ್ರಮದಲ್ಲಿ ಹುಬ್ಬಳ್ಳಿಯ ಶ್ರೀ ಗುರು ಆಧ್ಯಾತ್ಮ ಆಶ್ರಮ ನಿರಂತರ ದಾಸೋಹ ಮಠದ ಶ್ರೀ ಅವಧೂತ ಮಹರ್ಷಿ ಸಿದ್ದಾರ್ಥ ಸ್ವಾಮೀಜಿ ದಿವ್ಯಸಾನಿಧ್ಯ ವಹಿಸಿದ್ದರು.
ಸಾಮೂಹಿಕ ನಾಯಕತ್ವದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ಜಿಲ್ಲಾಧ್ಯಕ್ಷ ವಿದ್ಯಾಸಾಗರ್ ಮಾತನಾಡಿ, ಭಾರತ ಮಾತೆ ಮಗನಾಗಿ ರೈತನಿದ್ದಾನೆ. ಕಲೆಗೂ ಹಳ್ಳಿಗೂ ಬಾಂಧವ್ಯವಿದೆ. ಹಳ್ಳಿಗಳಲ್ಲಿ ಕಲೆಗಳು ಅರಳಿ ಮುದುಡುತ್ತಿವೆ. ಹಳ್ಳಿಗಳಲ್ಲಿರುವ ಪ್ರತಿಭಾವಂತರನ್ನು ಗುರುತಿಸುವ ಕೆಲಸವನ್ನು ಸರ್ಕಾರ ಮಾಡಬೇಕಾಗಿದೆ. ಕೆಲವು ಕಲಾವಿದರು ಪಟ್ಟಣದಲ್ಲಿ ಬೆಳೆಯುತ್ತಿದ್ದಾರೆ. ಹಳ್ಳಿಯ ಹೆಣ್ಣು ಮಕ್ಕಳು ಪಟ್ಟಣ ಪ್ರದೇಶಕ್ಕೆ ಬಂದು ಸವಾಲುಗಳನ್ನು ಎದುರಿಸಿ ಕಲೆಯನ್ನು ಪ್ರದರ್ಶನ ಮಾಡುವ ಮೂಲಕ ಪೂರ್ಣಿಮಾ ಪವಾರ್ ಅವರು ಇತರೆ ಹೆಣ್ಣು ಮಕ್ಕಳಿಗೆ ಮಾದರಿಯಾಗಿದ್ದಾರೆ. ಕಲೆಯೂ ಹಳ್ಳಿ ಮತ್ತು ಪಟ್ಟಣಕ್ಕೂ ನಿರಂತರವಾಗಿ ಹರಿದಾಡಬೇಕು. ನಮ್ಮನ್ನಾಳುವ ಸರ್ಕಾರಗಳು ಕಲಾವಿದರಿಗೆ, ಪತ್ರಕರ್ತರಿಗೆ ವಿಶೇಷ ಯೋಜನೆಗಳನ್ನು ಜಾರಿಗೆ ತಂದು ಅವರಿಗೆ ಬದುಕು ಕಟ್ಟಿಕೊಡಬೇಕು ಎಂದು ಹೇಳಿದರು.

ಹಿರಿಯ ಪತ್ರಕರ್ತ ಚನ್ನವೀರ ಸಗರನಾಳ್ ಮಾತನಾಡಿ, ದಿನನಿತ್ಯ ಸುದ್ದಿಗಳ ಮೂಲ ಹುಡುಕುವ ಪತ್ರಕರ್ತರು ಒತ್ತಡದಲ್ಲಿ ಇರುತ್ತಾರೆ. ಪತ್ರಕರ್ತರಲ್ಲೂ ಪ್ರತಿಭಾವಂತರಿದ್ದಾರೆ ಅವರಲ್ಲೂ ಕಲೆ ಇದೆ. ಅದನ್ನು ಗುರುತಿಸುವ ಕೆಲಸವಾಗಬೇಕು. ಪತ್ರಕರ್ತರಿಗೆ ನಿರಂತರವಾಗಿ ಕಲಿಕೆ ಇರುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ಪತ್ರಕರ್ತರ ಮೌಲ್ಯ ಕುಸಿಯುತ್ತಿದೆ. ನಮ್ಮ ಮೌಲ್ಯಗಳನ್ನು ನಾವೇ ಉಳಿಸಿಕೊಳ್ಳಬೇಕಾಗಿದೆ. ಪತ್ರಕರ್ತರಿಗೆ ಸತ್ಯ, ನಿಷ್ಠೆ, ಪ್ರಾಮಾಣಿಕತೆ ಇರಬೇಕು. ನಮ್ಮೊಳಗಿನ ಕಲೆಯನ್ನು ಕಂಡುಕೊಂಡು ಹೊರ ಹಾಕಬೇಕು. ಇಲ್ಲದಿದ್ದಲ್ಲಿ ಕಲೆ ನಶಿಸಿಹೋಗುತ್ತದೆ. ಸಿನಿಮಾ ರಂಗ ಶೋಚನೀಯವಾಗಿದೆ. ಹಳ್ಳಿಗಳಲ್ಲಿ ಮಾತ್ರ ನಾಟಕಗಳು ಇನ್ನೂ ಜೀವಂತವಾಗಿವೆ. ಬಣ್ಣದ ಬದುಕಿನಲ್ಲಿರುವ ಕಲಾವಿದರಿಗೆ ಸರ್ಕಾರಗಳು, ಸಂಘ, ಸಂಸ್ಥೆಗಳು ಪ್ರೋತ್ಸಾಹಿಸುವ ಕೆಲಸ ಮಾಡಬೇಕು. ನಮ್ಮಲ್ಲಿ ಬಡ ಪತ್ರಕರ್ತರು ಇದ್ದಾರೆ ಅವರನ್ನು ಗುರುತಿಸಿ ಅವರಿಗೆ ವಿಶೇಷ ಅನುದಾನ ನೀಡುವ ಕೆಲಸ ಆಗಬೇಕು. ಇತ್ತೀಚಿನ ದಿನಗಳಲ್ಲಿ ಅವಕಾಶಗಳು ಸಿಗದೇ ಕಲಾವಿದರು ಮೊಬೈಲ್ ನಲ್ಲಿ ತಮ್ಮ ಪ್ರತಿಭೆಯನ್ನು ಹೊರ ಚೆಲ್ಲುತ್ತಿದ್ದಾರೆ. ಅಂತಹ ಕಲಾವಿದರಿಗೆ ಸೂಕ್ತ ವೇದಿಕೆಗಳನ್ನು ಸರ್ಕಾರ ಕಲ್ಪಿಸಿ ಕೊಡಬೇಕಾಗಿದೆ. ಕಲೆ ಮಾರಾಟ ಮಾಡಲು ಸಾಧ್ಯವಿಲ್ಲ. ಆದರೆ , ಅದರಿಂದ ಕಲಾವಿದರು ಬದುಕು ಕಟ್ಟಿಕೊಳ್ಳಬಹುದು ಎಂದು ತಿಳಿಸಿದರು.
ಇನ್ನೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ 15 ಸಾಧಕರಿಗೆ ರಾಜ್ಯ ಮಟ್ಟದ ಕಲಾ ಕೌಸ್ತುಭ ಪ್ರಶಸ್ತಿ ನೀಡಿ ಗೌರವಿಸಲಾಯಿತು. ವಿವಿಧ ಕಲಾತಂಡಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲಾಯಿತು. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ ಕಲಾತಂಡಗಳಿಗೆ ಪ್ರಶಸ್ತಿ ಪತ್ರವನ್ನು ನೀಡಿ ಅಭಿನಂದಿಸಲಾಯಿತು.

ಈ ಸಂದರ್ಭದಲ್ಲಿ ಸಾಮೂಹಿಕ ನಾಯಕತ್ವದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ಜಿಲ್ಲಾಧ್ಯಕ್ಷ ವಿದ್ಯಾಸಾಗರ್, ಕಲಾ ಕೌಸ್ತುಭ ಟ್ರಸ್ಟ್ ಅಧ್ಯಕ್ಷೆ ಪೂರ್ಣಿಮಾ ಪವಾರ್, ಹಿರಿಯ ಕಲಾವಿದರಾದ ಶೈಲಶ್ರೀ ಸುದರ್ಶನ್, ಲಕ್ಷ್ಮೀ ಭಟ್, ಡ್ರಾಮಾ ಜೂನಿಯರ್ ಮೆಂಟರ್ ಗಣಪತಿಗೌಡ, ಯೋಗ ಶಿಕ್ಷಕಿ ಸೌಜನ್ಯ, ಸಾಹಿತಿ ಉಜ್ಜನಿ ರುದ್ರಪ್ಪ, ರೈತ ಸಂಘದ ತಾಲ್ಲೂಕು ಅಧ್ಯಕ್ಷ ಸತೀಶ್ , ಗುರುರಾಜ್ ಕೆ.ಭಾರದ್ವಾಜ, ಕೊಟ್ರೇಶ್ , ಸೇರಿದಂತೆ ಹಲವರು ಭಾಗವಹಿಸಿದ್ದರು.

ವರದಿ : ಸಿ ಎಂ ಸುಗಂಧರಾಜು tv8kannada ಬೆಂಗಳೂರು

Related Articles

Leave a Reply

Your email address will not be published. Required fields are marked *

Back to top button