ಲಿಂಗಸುಗೂರು | ಐತಿಹಾಸಿಕ ಪ್ರವಾಸಿ ಮಂದಿರ ಶಿಥಿಲಗೊಂಡು ಅನಾಥ ಸ್ಥಿತಿಯಲ್ಲಿ ಸ್ಥಳೀಯ ನಾಗರಿಕರ ಆಕ್ರೋಶ

ರಾಯಚೂರು: ಶತಮಾನದ ಅವಧಿಯಲ್ಲಿ ಬಂದು ಹೋಗುವ ಪ್ರತಿನಿಧಿಗಳು, ಸಚಿವರು, ಅಧಿಕಾರಿಗಳಿಗೆ ಭವ್ಯ ಆತಿಥ್ಯ ನೀಡುತ್ತಿದ್ದ ಐತಿಹಾಸಿಕ ಪ್ರವಾಸಿ ಮಂದಿರ ಶಿಥಿಲಗೊಂಡು ಅನಾಥ ಸ್ಥಿತಿಯಲ್ಲಿದೆ. ಮೇಲುಸ್ತುವಾರಿ, ನಿರ್ವಹಣೆ ನಿರ್ಲಕ್ಷ್ಯದಿಂದ ಐತಿಹಾಸಿಕ ಕುರುಹುಗಳು ಕಣ್ಮರೆಯಾಗುತ್ತಿವೆ ಎಂಬುದು ನಾಗರಿಕರ ಆಕ್ರೋಶ.
ತಾಲ್ಲೂಕು ಆಡಳಿತ ಕಚೇರಿಗಳ ನೂರೊಂದು ಬಾಗಿಲು ಬಂಗಲೆ, ತಿಪ್ಪಣ್ಣ ಮಾಸ್ತರ ಶಾಲೆ (ಕುದುರೆ ಪಾಗ), ಡಿವೈಎಸ್ಪಿ ಕಚೇರಿ, ಕ್ಲಬ್, ಹಳೆಯ ವಿಸಿಬಿ ಕಾಲೇಜು ಕಟ್ಟಡ, ಪ್ರವಾಸಿ ಮಂದಿರ, ಪೊಲೀಸ್ ಠಾಣೆ, ಸಿಪಿಐ ವಸತಿ ಗೃಹ ಕಟ್ಟಡ ಸೇರಿದಂತೆ ಗಚ್ಚಿನಿಂದ ನಿರ್ಮಾಣಗೊಂಡಿದ್ದ ಬೃಹತ್ ಬಂಗಲೆಗಳು ವರ್ಷದಿಂದ ವರ್ಷಕ್ಕೆ ಕಣ್ಮರೆ ಆಗುತ್ತ ಹೊರಟಿದ್ದು ಆಡಳಿತ ವ್ಯವಸ್ಥೆಯ ನಿರ್ಲಕ್ಷ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ.
ಬೇಸಿಗೆಯಲ್ಲಿ ತಂಪಾದ ಗಾಳಿ, ವಾತಾವರಣ ಕಲ್ಪಿಸುವ, ಮಳೆಗಾಲ ಮತ್ತು ಚಳಿಗಾಲದಲ್ಲಿ ಬೆಚ್ಚನೆ ವಾತಾವರಣ ಕಲ್ಪಿಸುವ ಕಟ್ಟಡಗಳೆಂದು ಕರೆಯಲಾಗುತ್ತದೆ. ನೂರೊಂದು ಬಾಗಿಲು ಬಂಗಲೆ ಹೊರತರುಪಡಿಸಿ ಬಹುತೇಕ ಬಂಗಲೆಗಳು ನೆಲಸಮಗೊಂಡಿವೆ. ಪ್ರವಾಸಿ ಮಂದಿರ ಸಂಪೂರ್ಣ ಶಿಥಿಲಗೊಂಡಿದ್ದು, ಯಾವೊಂದು ಐತಿಹಾಸಿಕ ಕಟ್ಟಡಗಳ ಸಂರಕ್ಷಣೆಗೆ ಮುಂದಾಗದಿರುವುದು ಇತಿಹಾಸ ಪ್ರಿಯರ ಕಣ್ಣಿಗೆ ಮಣ್ಣೆರಚಿದಂತಾಗಿದೆ.
ಪ್ರವಾಸಿ ಮಂದಿರ ಪ್ರವೇಶಿಸುವುದೇ ಒಂದು ಗಮ್ಮತ್ತು ಆಗಿತ್ತು. ಮೇಲಂತಸ್ತಿನಲ್ಲಿ ಹತ್ತಿ ಕುಳಿತರೆ ಇಡೀ ಪಟ್ಟಣದ ಸೌಂದರ್ಯ ಸವಿಯಬಹುದಾಗಿತ್ತು. ಒಂದು ಸಂದರ್ಭದಲ್ಲಿ ಚಲನಚಿತ್ರ, ರಂಗಭೂಮಿ ಕಲಾವಿದರು, ಐಎಎಸ್, ಎಪಿಎಸ್ ಅಧಿಕಾರಿಗಳು, ಸಚಿವರ ಆಕರ್ಷಣೀಯ ಕೇಂದ್ರವಾಗಿದ್ದ ಪ್ರವಾಸಿ ಮಂದಿರ ಇಂದು ಅಂತಹ ನೆನಪಿನಂಗಳದಿಂದ ಕಣ್ಮರೆಯಾಗುತ್ತಿರುವುದು ವಿಪರ್ಯಾಸ.
ಬೆಲೆಬಾಳುವ ಬಾಗಿಲು ಕಿಟಕಿಗಳು ಗೊರಲೆ ಹತ್ತಿವೆ. ಗಚ್ಚಿನ ಗೋಡೆ ಅಲ್ಲಲ್ಲಿ ಕಳಚಿ ಉದರುತ್ತಿದೆ. ಗಿಡ-ಮರ ಬೆಳೆದು ಗೋಡೆ, ಛತ್ತು ಕುಸಿಯುತ್ತಿವೆ. ಶಿಥಿಲ ಕಟ್ಟಡ ವೀಕ್ಷಿಸುವ ನಾಗರಿಕರು ಭವ್ಯ ಪ್ರವಾಸಿ ಮಂದಿರ ಸಂರಕ್ಷಣೆಗೆ ಸರ್ಕಾರ ಮುಂದಾಗಲಿಲ್ಲ. ಐತಿಹಾಸಿಕ ಕುರುಹುಗಳ ಸಂರಕ್ಷಣೆ ಮಾಡದಿರುವ ಬಗ್ಗೆ ಪಿಸುಮಾತಲ್ಲಿ ಹಿಡಿಶಾಪ ಹಾಕುತ್ತಾರೆ.
‘ವಿಶಾಲವಾದ ಪ್ರವಾಸಿಮಂದಿರ ಸ್ಥಳದಲ್ಲಿ ಸ್ಮಶಾನಮೌನದ ವಾತಾವರಣ. ಜನಜಂಗುಳಿಯಿಂದ ತುಂಬಿರುತ್ತಿದ್ದ ಪ್ರವಾಸಿ ಮಂದಿರ ರಕ್ಷಣೆ ಮಾಡಬೇಕಿತ್ತು. ಪಟ್ಟಣದ ಬಹುತೇಕ ಐತಿಹಾಸಿಕ ಬಂಗಲೆಗಳು ನೆಲಸಮಗೊಂಡಂತೆ ಇದೊಂದು ದಿನ ಕಣ್ಮರೆಯಾಗಲಿದೆ. ಹೋರಾಟಗಾರರಿಗೆ ರಕ್ಷಣೆ ನೀಡಿದ್ದ ಪ್ರವಾಸಿ ಮಂದಿರ ರಕ್ಷಣೆ ಆಗದಿರುವುದು ನೋವು ತಂದಿದೆ’ ಎಂದು ಬೇಸರ ವ್ಯಕ್ತಪಡಿಸುತ್ತಾರೆ ದಲಿತ ಹೋರಾಟಗಾರ ಲಿಂಗಪ್ಪ ಪರಂಗಿ.
‘ಸೂಕ್ತ ರಕ್ಷಣೆಗೆ ಸರ್ಕಾರಕ್ಕೆ ಶಿಫಾರಸು’
‘ನಾನು ಕೂಡ ಉಪ ವಿಭಾಗಾಧಿಕಾರಿಯಾಗಿ ಕೆಲವೇ ತಿಂಗಳ ಹಿಂದೆ ಅಧಿಕಾರ ವಹಿಸಿಕೊಂಡಿರುವೆ. ಐತಿಹಾಸಿಕ ಪ್ರವಾಸಿ ಮಂದಿರ ಸೇರಿದಂತೆ ಉಳಿದ ಕುರುಹುಗಳ ಮಾಹಿತಿ ಸ್ಪಷ್ಟವಾಗಿಲ್ಲ. ಯಾವುದೇ ಐತಿಹಾಸಿಕ ಸಂದೇಶ ಸಾರುವಂತ ಕುರುಹುಗಳು ಕಂಡುಬಂದಲ್ಲಿ ಪರಿಶೀಲಿಸಿ ಸೂಕ್ತ ರಕ್ಷಣೆಗೆ ಸರ್ಕಾರಕ್ಕೆ ಶಿಫಾರಸು ಮಾಡುವೆ’ ಎಂದು ಉಪ ವಿಭಾಗಾಧಿಕಾರಿ ಬಸವಣ್ಣೆಪ್ಪ ಕಲಶೆಟ್ಟರ್ ಪ್ರತಿಕ್ರಿಯಿಸಿದರು.
ವರದಿ : ಮುಸ್ತಾಫಾ tv8kannada ಲಿಂಗಸುಗೂರು