ಏಸಿಸಿ ಎಮರ್ಜಿಂಗ್ ಟೀಮ್ಸ್ ಏಷ್ಯಾ ಕಪ್-2024 ಸೆಮಿಫೈನಲ್ ನಲ್ಲಿ ಅಫ್ಘಾನ್ ಎದುರು ಟೀಂ ಇಂಡಿಯಾಗೆ ಸೊಲು.

ಅಫ್ಘಾನಿಸ್ತಾನ-ಎ ನಿಗದಿತ 20 ಓವರ್‌ನಲ್ಲಿ 4 ವಿಕೆಟ್ ಕಳೆದುಕೊಂಡು 206 ರನ್ ಕಲೆಹಾಕಿತ್ತು ಇದಕ್ಕೆ ಪ್ರತಿಯಾಗಿ 186 ರನ್ ಗಳಿಸುವ ಮೂಲಕ ಬರೋಬ್ಬರಿ 20 ರನ್ ಗಳ ಸೋಲು ಭಾರತ ತಂಡ ಅನುಭವಿಸಿತು.
ಅಫ್ಘಾನಿಸ್ತಾನ ಎ ಆರಂಭಿಕರ ಆರ್ಭಟ
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದ ಅಫ್ಘಾನಿಸ್ತಾನ -ಎ ತಂಡದ ಪರವಾಗಿ ಆರಂಭಿಕ ಆಟಗಾರರು ಅಬ್ಬರಿಸಿ ಬೊಬ್ಬಿರಿದರು. ಭಾರತ-ಎ ಬೌಲಿಂಗ್ ಅನ್ನು ಯಶಸ್ವಿಯಾಗಿ ಎದುರಿಸಿದ ಅಫ್ಘಾನಿಸ್ತಾನದ ಬ್ಯಾಟ್ಸ್‌ಮನ್‌ಗಳು ರನ್ ಮಳೆ ಸುರಿಸಿದರು. ಆರಂಭಿಕ ಬ್ಯಾಟ್ಸ್‌ಮನ್ ಜುಬಿದ್ ಅಕ್ಬರಿ 64 ಹಾಗೂ ಸೇದಿಕ್ಯುಲ್ಲಾ ಅತಲ್ 83 ಹಾಗೂ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ನಡೆಸಿದ ಕರಿಮ್ ಜನ್ನತ್ 41 ರನ್ ಗಳಿಸುವ ಮೂಲಕ ತಂಡದ ಮೊತ್ತವನ್ನು 200ರ ಗಡಿ ದಾಟಿಸಿದರು.
206 ರನ್ ಗಳ ಬಿಗ್ ಸ್ಕೋರ್
ಅಂತಿಮವಾಗಿ ಅಫ್ಘಾನಿಸ್ತಾನ-ಎ ತಂಡ ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು 206 ರನ್ ಗಳಿಸಿತು. ಭಾರತ-ಎ ಪರವಾಗಿ ರಸಿಖ್ ಸಲಾಮ್ 3, ಆಕಿಬ್ ಖಾನ್ 1 ವಿಕೆಟ್ ಪಡೆದುಕೊಂಡರೆ ಉಳಿದ ಯಾವುದೇ ಬೌಲರ್ ಕೂಡ ಅಫ್ಘಾನಿಸ್ತಾನ ಬ್ಯಾಟರ್‌ಗಳ ಅಬ್ಬರಕ್ಕೆ ಕಡಿವಾಣ ಹಾಕಲು ಸಾಧ್ಯವಾಗಲಿಲ್ಲ.
ಭಾರತ-ಎ ಆರಂಭಿಕ ಆಘಾತ
207 ರನ್‌ಗಳ ಬೃಹತ್ ಗುರಿ ಬೆನ್ನಟ್ಟಿದ ಭಾರತ ಎ ತಂಡಕ್ಕೆ ಆರಂಭಿಕ ಆಘಾತ ಎದುರಾಯಿತು. ಆರಂಭಿಕ ಆಟಗಾರರಾದ ಪ್ರಭ್‌ಸಮ್ರಾನ್ 19, ಸ್ಫೋಟಕ ಆಟಗಾರ ಅಭಿಷೇಕ್ ಶರ್ಮಾ 7 ರನ್ ಗಳಿಸಿ ನಿರಾಸೆ ಅನುಭವಿಸಿದರು. ನಂತರ ಬಂದ ನಾಯಕ ತಿಲಕ್ ವರ್ಮಾ 16 ರನ್‌ಗಳಿಸಿ ಪೆವಿಲಿಯನ್ ಸೇರಿಕೊಂಡರು. ನಂತರ ಬಂದ ಆಯುಷ್ ಬದೋಣಿ 31, ನೆಹಾಲ್ ವಡೇರಾ 20 ರನ್ ಗಳಿಸಿದರು.
ಇಂಡಿಯಾ-ಎ ತಂಡಕ್ಕೆ ಬರೋಬ್ಬರಿ 20 ರನ್‌ಗಳ ಸೋಲು
ಒಂದೆಡೆ ನಿತಂತರವಾಗಿ ವಿಕೆಟ್ ಉರುಳುತ್ತಿದ್ದರೂ ಕೂಡ ಇನ್ನೊಂದು ಕಡೆ ನಿರಾಯಾಸವಾಗಿ ಬ್ಯಾಟ್ ಬೀಸಿದ ರಮಣದೀಪ್ ಸಿಂಗ್ ಕೇವಲ 34 ಎಸೆತದಲ್ಲಿ 64 ರನ್ ಗಳಿಸಿದರು ಆದ್ರೂ ಕೂಡ ತಂಡವನ್ನು ಗೆಲುವಿನ ದಡ ಸೇರಿಸಲು ಸಾಧ್ಯವಾಗಲಿಲ್ಲ. ಅಂತಿಮವಾಗಿ ಇಂಡಿಯಾ-ಎ ತಂಡ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 186 ರನ್ ಗಳಿಸಲಷ್ಟೇ ಶಕ್ತವಾಯಿತು. ಅಫ್ಘಾನಿಸ್ತಾನ ಎ ಪರವಾಗಿ ಅಲ್ಲಾ ಘಾಜನ್ಫರ್ 2, ಅಬ್ದುಲ್ ರೆಹಮಾನ್ 2 ಹಾಗೂ ಶರಾಫುದ್ದೀನ್ ಅಶ್ರಫ್ 1 ವಿಕೆಟ್ ಪಡೆದು ಮಿಂಚಿದರು. ಅಂತಿಮವಾಗಿ ಎಸಿಸಿ ಎಮರ್ಜಿಂಗ್ ಟೀಮ್ಸ್ ಏಷ್ಯಾ ಕಪ್-2024 ಟ್ರೋಫಿ ಗೆಲ್ಲುವ ಕನಸು ಸೆಮಿ ಫೈನಲ್‌ನಲ್ಲೇ ಕಮರಿ ಹೋಯಿತು.

ವರದಿ : ಮಹಮ್ಮದ್ ಶಫಿ ಸ್ಪೋರ್ಟ್ಸ್ ಬ್ಯೂರೋ tv8kannada ಬೆಂಗಳೂರು