ವಿದೇಶ

ಭಾರತ ಸರಕಾರದ ವಿರುದ್ಧ ಕೇರ್ನ್ ಸಂಸ್ಥೆ ದಾಖಲಿಸಿದ್ದ ದಾವೆಗೆ ನ್ಯೂಯಾರ್ಕ್ ಕೋರ್ಟ್ ತಡೆ

ನ್ಯೂಯಾರ್ಕ್, ಸೆ.27 : ಅಂತರಾಷ್ಟ್ರೀಯ ಮಧ್ಯಸ್ಥಿಕೆ ನ್ಯಾಯಮಂಡಳಿಯ ತೀರ್ಪಿನ ಅನುಸಾರ ಅಮೆರಿಕದಲ್ಲಿ ಭಾರತದ ಏರ್ ಇಂಡಿಯಾ ಸಂಸ್ಥೆ ಹೊಂದಿರುವ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲು ಅನುವು ಮಾಡಬೇಕೆಂದು ಕೋರಿ ಬ್ರಿಟನ್ ಮೂಲದ ಕೇರ್ನ್ ಎನರ್ಜಿ ಸಂಸ್ಥೆ ದಾಖಲಿಸಿದ್ದ ದಾವೆಗೆ ನ್ಯೂಯಾರ್ಕ್ ಕೋಟ್ ತಡೆ ನೀಡಿದೆ.

ಈ ದಾವೆಯ ಮುಂದಿನ ವಿಚಾರಣೆಗೆ ತಡೆ ನೀಡಬೇಕೆಂದು ಕೇರ್ನ್ ಸಂಸ್ಥೆ ಹಾಗೂ ಏರಿಂಡಿಯಾ ಜಂಟಿಯಾಗಿ ಕೋರಿಕೆ ಸಲ್ಲಿಸಿದ್ದವು. ಇದೀಗ ನ್ಯಾಯಾಲಯದ ಹೊರಗೆ ಈ ವಿವಾದವನ್ನು ಪರಿಹರಿಸಲು ಅನುವು ಮಾಡಿಕೊಡುವ ಉದ್ದೇಶದಿಂದ ದಾವೆಯ ವಿಚಾರಣೆಗೆ ನವೆಂಬರ್ 18ರವರೆಗೆ ತಡೆ ನೀಡಿರುವುದಾಗಿನ್ಯೂಯಾರ್ಕ್ ಜಿಲ್ಲಾ ನ್ಯಾಯಾಲಯ ತಿಳಿಸಿದೆ.
ಕೇರ್ನ್, ವೊಡಾಫೋನ್ ಸಹಿತ 16 ಸಂಸ್ಥೆಗಳು ಪೂರ್ವಾನ್ವಯವಾಗುವಂತೆ ತೆರಿಗೆ ಪಾವತಿಸುವಂತೆ ಭಾರತ ಸರಕಾರ ಸೂಚಿಸಿತ್ತು. ಕೇರ್ನ್ ಸಂಸ್ಥೆಯೊಂದೇ 10,247 ಕೋಟಿ ತೆರಿಗೆ ಪಾವತಿಸಬೇಕಿತ್ತು. ಇದನ್ನು ಪ್ರಶ್ನಿಸಿ ಕೇರ್ನ್ ಅಂತರಾಷ್ಟ್ರೀಯ ನ್ಯಾಯಮಂಡಳಿಯಲ್ಲಿ ಅರ್ಜಿ ಸಲ್ಲಿಸಿತ್ತು. ಈ ಕಾನೂನು ಸಮರದಲ್ಲಿ ಕೇರ್ನ್ ಸಂಸ್ಥೆಗೆ ಗೆಲುವಾಗಿದ್ದು ಭಾರತ ಸರಕಾರ 1.2 ಬಿಲಿಯನ್ ಡಾಲರ್ ಮೊತ್ತ ಮರುಪಾವತಿಸುವ ಜೊತೆಗೆ ಬಡ್ಡಿ ಮತ್ತು ದಂಡ ತೆರುವಂತೆ ತೀರ್ಪು ನೀಡಿತ್ತು. ಈ ತೀರ್ಪನುನ ಭಾರತ ಸರಕಾರ ತಿರಸ್ಕರಿಸಿತ್ತು.
ಈ ಮಧ್ಯೆ, ದೇಶದಲ್ಲಿ ಪೂರ್ವಾನ್ವಯ ತೆರಿಗೆ ವಿಧಿಸುವ ನಿಯಮವನ್ನು ರದ್ದುಗೊಳಿಸುವ ನೂತನ ಕಾನೂನನ್ನು ರೂಪಿಸಲು ಭಾರತ ಸರಕಾರ ನಿರ್ಧರಿತು. ಈ ಕಾನೂನು ರೂಪುಗೊಂಡರೆ ಆಗ ಕೇರ್ನ್ ಮತ್ತಿತರ ಸಂಸ್ಥೆಗಳ ವಿರುದ್ಧದ ಕಾನೂನು ಸಮರ ಸ್ವಯಂ ಅಂತ್ಯಗೊಳ್ಳಲು ವೇದಿಕೆ ಸಿದ್ಧವಾಗುತ್ತದೆ. ಹೊಸ ನಿಯಮದ ಪ್ರಕಾರ, ಭಾರತ ಸರಕಾರ ಸಂಗ್ರಹಿಸಿದ ಪೂರ್ವಾನ್ವಯ ತೆರಿಗೆಯನ್ನು ಸಂಬಂಧಿಸಿದ ಸಂಸ್ಥೆಗೆ ಹಿಂತಿರುಗಿಸಬೇಕು, ಆ ಸಂಸ್ಥೆ ಭಾರತದ ವಿರುದ್ಧ ಹೂಡಿರುವ ದಾವೆಯನ್ನು ಕೈಬಿಡಬೇಕು ಎಂಬ ಷರತ್ತಿದೆ.
ಈ ಹಿನ್ನೆಲೆಯಲ್ಲಿ ಭಾರತ ಸರಕಾರ ಒಟ್ಟು 8,100 ಕೋಟಿ ಮೊತ್ತವನ್ನು ವಾಪಾಸು ನೀಡಬೇಕಿದ್ದು ಇದರಲ್ಲಿ 7,900 ಕೋಟಿ ರೂ. ಕೇರ್ನ್ ಸಂಸ್ಥೆಗೆ ಪಾವತಿಸಬೇಕಿದೆ. ಹಣ ವಾಪಾಸು ಪಡೆಯಲು ಸಂಸ್ಥೆಗಳು ಸಲ್ಲಿಸಬೇಕಿರುವ ಅರ್ಜಿಯ ಸ್ವರೂಪವನ್ನು ಶೀಘ್ರ ಅಂತಿಮಗೊಳಿಸಲಾಗುವುದು. ಈ ಪ್ರಕಾರ ಅರ್ಜಿ ಸಲ್ಲಿಸಿದರೆ ಹಣ ಹಿಂತಿರುಗಿಸಲಾಗುತ್ತದೆ ಎಂದು ಭಾರತ ಸರಕಾರ ಹೇಳಿದೆ. ತಾನು ಪಾವತಿಸಿದ ಹಣವನ್ನು ಬಡ್ಡಿ ಮತ್ತು ದಂಡವಿಲ್ಲದೆ ಹಿಂತಿರುಗಿಸಲು ತನ್ನ ಅಭ್ಯಂತರವಿಲ್ಲ ಎಂದು ಕೇರ್ನ್ ಸಂಸ್ಥೆ ಪ್ರತಿಕ್ರಿಯಿಸಿರುವುದರಿಂದ 7 ವರ್ಷದಿಂದ ನಡೆಯುತ್ತಿರುವ ಈ ಕಾನೂನು ಸಮರ ಅಂತ್ಯಗೊಳ್ಳುವ ಸೂಚನೆ ಕಂಡುಬಂದಿದೆ.

Related Articles

Leave a Reply

Your email address will not be published. Required fields are marked *

Back to top button