ರಾಜ್ಯ

ಚುನಾವಣೆ ಎದುರಿಸಲು ಸಂಪೂರ್ಣ ಸಿದ್ಧ: ಎಎಪಿ

ಬಿಬಿಎಂಪಿ ಚುನಾವಣೆಗೆ ಎರಡು ವಾರಗಳೊಳಗೆ ಅಧಿಸೂಚನೆ ಹೊರಡಿಸಬೇಕೆಂದು ಸುಪ್ರೀಂ ಕೋರ್ಟ್‌ ಆದೇಶ ಹೊರಡಿಸಿರುವುದನ್ನು ಆಮ್‌ ಆದ್ಮಿ ಪಾರ್ಟಿ ಸ್ವಾಗತಿಸಿದ್ದು, ಚುನಾವಣೆ ಎದುರಿಸಲು ಪಕ್ಷ ಸಂಪೂರ್ಣ ಸಿದ್ಧವಿದೆ ಎಂದು ತಿಳಿಸಿದೆ.

ಮಾಧ್ಯಮಗಳ ಜೊತೆ ಮಾತನಾಡಿದ ಎಎಪಿ ರಾಜ್ಯ ಮಾಧ್ಯಮ ಸಂಚಾಲಕ ಜಗದೀಶ್‌ ವಿ ಸದಂ, “2020ರಲ್ಲೇ ನಡೆಯಬೇಕಿದ್ದ ಬಿಬಿಎಂಪಿ ಚುನಾವಣೆಯು ನಾನಾ ಕಾರಣಗಳಿಗೆ ಮುಂದೂಡಲ್ಪಟ್ಟಿತ್ತು. ಚುನಾವಣೆಯಲ್ಲಿ ಸೋಲುವ ಭೀತಿಯಿಂದ ಆಡಳಿತಾರೂಢ ಬಿಜೆಪಿ ಕೂಡ ಚುನಾವಣೆಯನ್ನು ಮುಂದೂಡಲು ಬೇರೆಬೇರೆ ತಂತ್ರಗಾರಿಕೆ ಮಾಡುತ್ತಿತ್ತು. ಈಗ ಸುಪ್ರೀಂ ಕೋರ್ಟ್‌ ಆದೇಶ ನೀಡಿರುವುದರಿಂದ, ಸದ್ಯದಲ್ಲೇ ಚುನಾವಣೆ ನಡೆಯುವ ವಿಶ್ವಾಸವಿದೆ” ಎಂದು ಹೇಳಿದರು.

“ಆಮ್‌ ಆದ್ಮಿ ಪಾರ್ಟಿಯು ಭರ್ಜರಿ ಬಹುಮತದೊಂದಿಗೆ ಬಿಬಿಎಂಪಿ ಚುನಾವಣೆಯಲ್ಲಿ ಗೆಲುವು ಸಾಧಿಸುವುದು ನಿಶ್ಚಿತ. 198 ವಾರ್ಡ್‌ಗಳಲ್ಲೂ ಪಕ್ಷಕ್ಕೆ ಕಾರ್ಯಕರ್ತರು, ಮುಖಂಡರು ಇದ್ದಾರೆ. ಎಲ್ಲಕ್ಕಿಂತ ಮುಖ್ಯವಾಗಿ, ಪಕ್ಷದ ಸಿದ್ಧಾಂತಗಳು ಹಾಗೂ ದೆಹಲಿಯ ಕೇಜ್ರಿವಾಲ್‌ ಆಡಳಿತವನ್ನು ಗಮನಿಸುತ್ತಿರುವ ಅಸಂಖ್ಯಾತ ಬೆಂಬಲಿಗರು ಬೆಂಗಳೂರಿನಾದ್ಯಂತ ಇದ್ದಾರೆ. ಬಿಜೆಪಿ, ಕಾಂಗ್ರೆಸ್‌, ಜೆಡಿಎಸ್‌ನಿಂದ ದುರಾಡಳಿತದಿಂದ ಬೆಂಗಳೂರಿನ ಜನರು ರೋಸಿ ಹೋಗಿದ್ದು, ನಿರೀಕ್ಷೆಗೂ ಮೀರಿದ ಪ್ರಮಾಣದಲ್ಲಿ ಎಎಪಿಯನ್ನು ಬೆಂಬಲಿಸಲಿದ್ದಾರೆ” ಎಂದು ಜಗದೀಶ್‌ ವಿ ಸದಂ ಹೇಳಿದರು.

“ಬೆಂಗಳೂರಿನ ಜನರು ಆದಾಯ ತೆರಿಗೆ, ಜಿಎಸ್‌ಟಿ, ಆಸ್ತಿ ತೆರಿಗೆ ಸೇರಿದಂತೆ ವಿವಿಧ ರೀತಿಯ ತೆರಿಗೆಯನ್ನು ಕಟ್ಟುತ್ತಿದ್ದಾರೆ. ಆದರೆ ಅವರಿಗೆ ಅದಕ್ಕೆ ಪ್ರತಿಯಾಗಿ ಗುಣಮಟ್ಟದ ಮೂಲಸೌಕರ್ಯಗಳು ಸಿಗುತ್ತಿಲ್ಲ. ಅವರು ಕಟ್ಟುತ್ತಿರುವ ತೆರಿಗೆ ಬಿಜೆಪಿಯಂತಹ ಭ್ರಷ್ಟ ಪಕ್ಷಗಳ ಜನಪ್ರತಿನಿಧಿಗಳ ಜೇಬು ಸೇರುತ್ತಿದೆ. ಆಮ್‌ ಆದ್ಮಿ ಪಾರ್ಟಿಯೊಂದೇ ಜನರ ಒಂದೊಂದು ರೂಪಾಯಿ ತೆರಿಗೆಯನ್ನು ಜನರ ಒಳಿತಿಗೆ ಬಳಸುತ್ತದೆ. ಇದನ್ನು ದೆಹಲಿಯಲ್ಲಿ ನಾವು ಸಾಧಿಸಿ ತೋರಿಸಿದ್ದೇವೆ. ಈ ಕಾರಣಕ್ಕಾಗಿಯೇ ಬೆಂಗಳೂರಿನಲ್ಲಿ ಪಕ್ಷಕ್ಕೆ ಉತ್ತಮ ಸ್ಪಂದನೆ ಸಿಗುತ್ತಿದೆ” ಎಂದು ಜಗದೀಶ್‌ ವಿ ಸದಂ ಹೇಳಿದರು.

Related Articles

Leave a Reply

Your email address will not be published. Required fields are marked *

Back to top button