ರಾಜಕೀಯರಾಜ್ಯ

ಬಿಜೆಪಿಗೆ ಗುಡ್‌ ಬೈ, ಯೋಗೇಶ್ವರ್ ಕಾಂಗ್ರೆಸ್ ಸೇರ್ಪಡೆ , 3ನೇ ಬಾರಿ ಕೈಗೆ ಮರಳಲಿರುವ ಸೈನಿಕ, ನಾಳೆ ನಾಮಪತ್ರ

ಬೆಂಗಳೂರು: ಚನ್ನಪಟ್ಟಣ ವಿಧಾನಸಭೆ ಉಪಚುನಾವಣೆ ಕಣ ರಂಗೇರುತ್ತಿದ್ದು, ಈಗಾಗಲೇ ವಿಧಾನಪರಿಷತ್‌ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ವಿರುದ್ದ ಬಂಡಾಯವೆದ್ದಿರುವ ಮಾಜಿ ಸಚಿವ ಸಿ.ಪಿ. ಯೋಗೇಶ್ವರ್‌ ಅವರು ಕಾಂಗ್ರೆಸ್‌ ಸೇರುವುದು ಬಹುತೇಕ ಖಚಿತವಾಗಿದೆ. ಬುಧವಾರ ಬೆಳಿಗ್ಗೆಯೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರ ಮನೆಯಲ್ಲಿ ಕಾಣಿಸಿಕೊಂಡ ಸಿ.ಪಿ.ಯೋಗೇಶ್ವರ್‌ ಈ ಮೂಲಕ ಕಾಂಗ್ರೆಸ್‌ ಸೇರುವ ಮುನ್ಸೂಚನೆ ನೀಡಿದರು. ಈಗಾಗಲೇ ಸಿಎಂ ಸಿದ್ದರಾಮಯ್ಯ ಅವರೊಂದಿಗೂ ಮಾತುಕತೆ ನಡೆಸಿದ್ದ ಯೋಗೇಶ್ವರ್‌ ಬಿಜೆಪಿ ಟಿಕೆಟ್‌ ಸಿಗದೇ ಇದ್ದುದಕ್ಕೆ ಮುನಿಸಿಕೊಂಡಿದ್ದರು. ಬುಧವಾರವೇ ಪಕ್ಷಕ್ಕೆ ಸೇರ್ಪಡೆಯಾಗಿದ್ದು. ಗುರುವಾರವೇ ಅವರು ಕಾಂಗ್ರೆಸ್‌ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸುವ ಸಾಧ್ಯತೆಯಿದೆ.

ಯೋಗೇಶ್ವರ್ ಕಾಂಗ್ರೆಸ್ ಸೇರ್ಪಡೆಯಾಗಿದ್ದು ಕಾಂಗ್ರೆಸ್ ಅಭ್ಯರ್ಥಿಯಾಗಿ ಯೋಗೇಶ್ವರ್ ನಾಳೆಯೇ ನಾಮಪತ್ರ ಸಲ್ಲಿಕೆ ಸಾಧ್ಯತೆ ಇದೆ. ಇಂದು ಬೆಳಗ್ಗೆ ಯೋಗೇಶ್ವರ್, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮನೆಯಲ್ಲಿ ಪ್ರತ್ಯಕ್ಷವಾಗಿದ್ದಾರೆ. ಇಬ್ಬರೂ ಒಟ್ಟಿಗೆ ಒಂದೇ ಕಾರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿಗೆ ಅವರ ನಿವಾಸಕ್ಕೆ ಆಗಮಿಸಿದ್ದಾರೆ. ಈ ಮೂಲಕ ಅಧಿಕೃತವಾಗಿ ಸೇರ್ಪಡೆ ನಿಕ್ಕಿಯಾಗಿದೆ.

ಇದನ್ನೂ ನೋಡಿರಿ: ಉಪ ಚುನಾವಣೆಯಲ್ಲಿ ಸ್ಪರ್ಧಿಸಲು ಪರಿಷತ್ ಸ್ಥಾನಕ್ಕೆ ಸಿಪಿ ಯೋಗೀಶ್ವರ್ ರಾಜಿನಾಮೆ


ಕಾಂಗ್ರೆಸ್‌ ಕಾರ್ಯತಂತ್ರ ಏನು

ಚನ್ನಪಟ್ಟಣದಲ್ಲಿ ಏನಾದರೂ ಮಾಡಿ ಎನ್‌ಡಿಎ ಮೈತ್ರಿ ಕೂಟ ಸೋಲಿಸಬೇಕು ಎನ್ನುವುದು ಕಾಂಗ್ರೆಸ್‌ ಉದ್ದೇಶ. ಅದರಲ್ಲೂ ತಮ್ಮದೇ ಹಿಡಿತ ಹೊಂದಿರುವ ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಅವರಿಗೆ ಮುಖಭಂಗ ಮಾಡಬೇಕು ಎನ್ನುವ ತಂತ್ರವೂ ಸೇರಿದೆ. ಕಳೆದ ಲೋಕಸಭೆ ಚುನಾವಣೆಯಲ್ಲಿ ಸೋಲಿನ ಸೇಡನ್ನು ತೀರಿಸಿಕೊಳ್ಳಲು ಡಿಕೆ ಸಹೋದರರು ಕಾಯುತ್ತಿದ್ದು. ಇದಕ್ಕಾಗಿ ಪ್ರಬಲ ಅಭ್ಯರ್ಥಿ ಕಣಕ್ಕೆ ಇಳಿಸುವ ತಂತ್ರ ರೂಪಿಸಿದ್ದರು. ನಿಖಿಲ್‌ ಕುಮಾರಸ್ವಾಮಿ ಕಣಕ್ಕಿಳಿದರೆ ಡಿ.ಕೆ.ಸುರೇಶ್‌ ಅವರನ್ನು ಕಾಂಗ್ರೆಸ್‌ ಅಭ್ಯರ್ಥಿ ಮಾಡುವ ಇರಾದೆ ಇತ್ತು.

ಜೆಡಿಎಸ್‌ ನಿಖಿಲ್‌ ಬದಲಿಗೆ ಪಕ್ಷದ ಕಾರ್ಯಕರ್ತ ಹಾಗೂ ಚನ್ನಪಟ್ಟಣ ತಾಲ್ಲೂಕು ಜೆಡಿಎಸ್‌ ಅಧ್ಯಕ್ಷ ಜಯಮುತ್ತು ಅವರನ್ನು ಅಭ್ಯರ್ಥಿ ಮಾಡಲು ಹೊರಟಿದೆ. ಈ ಕಾರಣದಿಂದ ಡಿಕೆ ಸಹೋದರರು ಸಿ.ಪಿ. ಯೋಗೇಶ್ವರ್‌ ಅವರನ್ನು ಸೆಳೆದಿದ್ದಾರೆ. ಎಚ್‌ಡಿಕುಮಾರಸ್ವಾಮಿ ಅವರಿಗೆ ಯೋಗೇಶ್ವರ್‌ ಅವರನ್ನೇ ಅಭ್ಯರ್ಥಿ ಮಾಡುವ ಮೂಲಕ ಠಕ್ಕರ್‌ ನೀಡುವ ಇರಾದೆ ಹೊಂದಿದ್ದಾರೆ ಎನ್ನಲಾಗುತ್ತಿದೆ.

ಎಚ್‌ ಡಿಕೆ ಮೇಲೆ ಅಸಮಾಧಾನ

ಹಿಂದಿನ ಚುನಾವಣೆಗಳಲ್ಲಿ ದೇವೇಗೌಡರ ಕುಟುಂಬದ ವಿರುದ್ದವೇ ಹೋರಾಟ ಮಾಡಿಕೊಂಡು ಬಂದಿರುವ ಸಿ.ಪಿ. ಯೋಗೇಶ್ವರ್‌ ಈ ಬಾರಿಯೂ ಬಿಜೆಪಿ ಟಿಕೆಟ್‌ ಬಯಸಿದ್ದರು. ಆದರೆ ಹೈಕಮಾಂಡ್‌ ಒಪ್ಪಿರಲಿಲ್ಲ.
ಅದು ಜೆಡಿಎಸ್‌ ಕ್ಷೇತ್ರ. ಆ ಪಕ್ಷದ ಅಭ್ಯರ್ಥಿಯೇ ಇರಲಿದ್ದಾರೆ ಎಂದು ಹೇಳಿದ್ದರು. ಇದರಿಂದ ಎಚ್‌ಡಿಕುಮಾರಸ್ವಾಮಿ ಅವರು ನೀವೇ ಜೆಡಿಎಸ್‌ ಅಭ್ಯರ್ಥಿಯಾಗಿ ಎಂದು ಆಫರ್‌ ಅನ್ನು ಯೋಗೇಶ್ವರ್‌ ಅವರಿಗೆ ನೀಡಿದ್ದರು. ಆದರೆ ಈಗಾಗಲೇ ಬಿಜೆಪಿಯಲ್ಲಿದ್ದು. ಇದಕ್ಕಾಗಿ ಮತ್ತೊಂದು ಪಕ್ಷಕ್ಕೆ ಬರುವುದಿಲ್ಲ. ಬಿಜೆಪಿಯಿಂದಲೇ ಸ್ಪರ್ಧಿಸಲು ಅವಕಾಶ ಕೊಡಿ ಎಂದು ಕೋರಿದ್ದರು. ಜೆಡಿಎಸ್‌ ಕ್ಷೇತ್ರ ಬಿಟ್ಟುಕೊಡಲು ಯೋಗೇಶ್ವರ್‌ ಒಪ್ಪಿರಲಿಲ್ಲ. ಇದರಿಂದ ಎಚ್‌.ಡಿ.ಕುಮಾರಸ್ವಾಮಿ ಮೇಲೆ ಯೋಗೇಶ್ವರ್‌ ಮುನಿಸಿಕೊಂಡಿದ್ದರು. ಬಿಜೆಪಿ ಸಿಗುವುದಿಲ್ಲ ಎನ್ನುವುದು ಖಚಿತವಾದ ಮೇಲೆ ಕಾಂಗ್ರೆಸ್‌ ಸೇರುವ ಯೋಚನೆ ಗಟ್ಟಿಗೊಳಿಸಿದ್ದರು.

ನಿರಂತರ ಪಕ್ಷಾಂತರ

ಸಿ.ಪಿ. ಯೋಗೇಶ್ವರ್‌ ಅವರು ಚನ್ನಪಟ್ಟಣ ಕ್ಷೇತ್ರದಲ್ಲಿ ಎರಡೂವರೆ ದಶಕದಿಂದ ರಾಜಕಾರಣದಲ್ಲಿದ್ದಾರೆ. 1999 ರಲ್ಲಿ ಪಕ್ಷೇತರರಾಗಿ ಗೆದ್ದು ಕಾಂಗ್ರೆಸ್‌ ಸೇರಿದ್ದರು. ಆನಂತರ ಸತತ ಎರಡು ಬಾರಿ ಕಾಂಗ್ರೆಸ್‌ನಿಂದಲೇ ಗೆದ್ದಿದ್ದರು. ಬಳಿಕ ಕಾಂಗ್ರೆಸ್‌ ಬಿಟ್ಟು ಬಿಜೆಪಿ ಸೇರಿದ್ದರು. ಬಿಜೆಪಿಯಿಂದ ಗೆದ್ದು ಸಚಿವರಾಗಿ ಬಳಿಕ ಸಮಾಜವಾದಿ ಪಕ್ಷ ಸೇರಿ ಗೆಲುವು ಸಾಧಿಸಿದ್ದರು. ಮತ್ತೆ ಕಾಂಗ್ರೆಸ್‌ ಸೇರಿದ್ದರು. ಆದರೆ ಕಾಂಗ್ರೆಸ್‌ನಲ್ಲಿ ಟಿಕೆಟ್‌ ಸಿಗದೇ ಬಿಜೆಪಿಗೆ ಮರಳಿದ್ದರು. ಬಿಜೆಪಿಯಿಂದ ಎರಡು ಬಾರಿ ಎಚ್‌ಡಿಕುಮಾರಸ್ವಾಮಿ ವಿರುದ್ದವೇ ಸೋತಿದ್ದರು. ಈಗ ಬಿಜೆಪಿ ಟಿಕೆಟ್‌ ಸಿಗದೇ ಕಾಂಗ್ರೆಸ್‌ಗೆ ಮೂರನೇ ಬಾರಿಗೆ ಮರಳಿದ್ದಾರೆ. ನಿರಂತರವಾಗಿ ಪಕ್ಷಾಂತರ ಮಾಡುತ್ತಲೇ ರಾಜಕಾರಣದಲ್ಲಿ ಯೋಗೇಶ್ವರ್‌ ಸಕ್ರಿಯರಾಗಿದಾರೆ.

ವರದಿ : ಮೊಹಮದ್ ಶಫಿ tv8kannda ಬೆಂಗಳೂರು

Related Articles

Leave a Reply

Your email address will not be published. Required fields are marked *

Back to top button