ಕ್ರೀಡೆ

World Cup20:20 ; ದಕ್ಷಿಣ ಆಫ್ರಿಕಾ ಮಣಿಸಿ ಚೊಚ್ಚಲ ಟಿ20 ವಿಶ್ವಕಪ್ ಎತ್ತಿಹಿಡಿದ ನ್ಯೂಜಿಲೆಂಡ್ ಮಹಿಳಾ ತಂಡ!

ದಕ್ಷಿಣ ಆಫ್ರಿಕಾ ಮಣಿಸಿ ಚೊಚ್ಚಲ ಟಿ20 ವಿಶ್ವಕಪ್ ಅನ್ನು ನ್ಯೂಜಿಲೆಂಡ್ ತಂಡ ಎತ್ತಿಹಿಡಿದಿದೆ.

ದುಬೈ : ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ 9ನೇ ಆವೃತ್ತಿಯ ಮಹಿಳಾ ಟಿ20 ವಿಶ್ವಕಪ್​ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ಹಾಗೂ ದಕ್ಷಿಣ ಆಫ್ರಿಕಾ ತಂಡಗಳು ಮುಖಾಮುಖಿಯಾಗಿದ್ದವು.

ಉಭಯ ತಂಡಗಳ ನಡುವೆ ನಡೆದ ಈ ಹೈವೋಲ್ಟೇಜ್ ಕದನದಲ್ಲಿ ನ್ಯೂಜಿಲೆಂಡ್ ಮಹಿಳಾ ಪಡೆ 32 ರನ್​ಗಳಿಂದ ದಕ್ಷಿಣ ಆಫ್ರಿಕಾ ತಂಡವನ್ನು ಮಣಿಸುವ ಮೂಲಕ ಇದೇ ಮೊದಲ ಬಾರಿಗೆ ಟಿ20 ವಿಶ್ವಕಪ್ ಕಿರೀಟವನ್ನು ಮುಡಿಗೇರಿಸಿಕೊಂಡಿದೆ.

2010 ರ ಬಳಿಕ ಇದೇ ಮೊದಲ ಬಾರಿಗೆ ಫೈನಲ್​ಗೇರಿದ್ದ ನ್ಯೂಜಿಲೆಂಡ್ ತಂಡ ಸೋಫಿ ಡಿವೈನ್ ನಾಯಕತ್ವದಲ್ಲಿ ಇದೇ ಮೊದಲ ಬಾರಿಗೆ ಚಾಂಪಿಯನ್ ಆಗಿ ಹೊರಹೊಮ್ಮಿದೆ

ಫೈನಲ್ ಪಂದ್ಯದಲ್ಲಿ ಟಾಸ್ ಸೋತ ನ್ಯೂಜಿಲೆಂಡ್ ತಂಡ ಮೊದಲು ಬ್ಯಾಟಿಂಗ್ ಮಾಡಿ ದಕ್ಷಿಣ ಆಫ್ರಿಕಾಕ್ಕೆ 159 ರನ್​ಗಳ ಗುರಿ ನೀಡಿತು. ತಂಡದ ಪರ ಸುಜಿ ಬೇಟ್ಸ್ 32 ರನ್, ಅಮೆಲಿಯಾ ಕೆರ್ 43 ರನ್ ಮತ್ತು ಬ್ರೂಕ್ ಹ್ಯಾಲಿಡೇ 38 ರನ್‌ಗಳ ಪ್ರಬಲ ಇನ್ನಿಂಗ್ಸ್‌ ಆಡಿದರು. ಈ ಮೂವರ ಪ್ರದರ್ಶನದಿಂದಾಗಿ ತಂಡ 20 ಓವರ್‌ಗಳಲ್ಲಿ ಐದು ವಿಕೆಟ್‌ ಕಳೆದುಕೊಂಡು 158 ರನ್ ಗಳಿಸಿತು. ಇನ್ನು ದಕ್ಷಿಣ ಆಫ್ರಿಕಾ ಪರ ಬೌಲಿಂಗ್​ನಲ್ಲಿ ಮಿಂಚಿದ ಮ್ಲಾಬಾ ಎರಡು ವಿಕೆಟ್ ಪಡೆದರೆ, ಖಾಕಾ, ಟ್ರೇಯಾನ್ ಮತ್ತು ನಡಿನ್ ಡಿ ಕ್ಲರ್ಕ್ ತಲಾ ಒಂದು ವಿಕೆಟ್ ಪಡೆದರು.

ಈ ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ತಂಡಕ್ಕೆ ಮೊದಲ ವಿಕೆಟ್​ಗೆ ಅರ್ಧಶತಕದ ಜೊತೆಯಾಟ ಸಿಕ್ಕಿತು. ಆರಂಭಿಕರಾದ ನಾಯಕಿ ಲಾರಾ ವೊಲ್ವಾರ್ಡ್ಟ್ ಹಾಗೂ ತಜ್ಮಿನ್ ಬ್ರಿಟ್ಸ್ ಮೊದಲ ವಿಕೆಟ್​ಗೆ 51 ರನ್​ಗಳ ಜೊತೆಯಾಟ ನೀಡಿದರು. ಆದರೆ ಈ ಜೋಡಿ ಬೇರ್ಪಟ್ಟ ಬಳಿಕ ತಂಡದ ಪೆವಿಲಿಯನ್ ಪರೇಡ್ ಆರಂಭವಾಯಿತು. ಬ್ರಿಟ್ಸ್ 17 ರನ್​​ಗಳಿಗೆ ಇನ್ನಿಂಗ್ಸ್ ಮುಗಿಸಿದರೆ, ನಾಯಕಿಯ ಇನ್ನಿಂಗ್ಸ್ 33 ರನ್​ಗಳಿಗೆ ಕೊನೆಯಾಯಿತು. ಭರವಸೆಯ ಬ್ಯಾಟರ್ ಅನ್ನೆಕೆ ಬಾಷ್ ಬಿಗ್ ಶಾಟ್ ಆಡುವ ಯತ್ನದಲ್ಲಿ ಕೇವಲ 9 ರನ್​ಗಳಿಗೆ ವಿಕೆಟ್ ಕೈಚೆಲ್ಲಿದರು. ಅನುಭವಿ ಮರಿಜಾನ್ನೆ ಕಪ್ ಕೂಡ 8 ರನ್​ಗಳಿಗೆ ಸುಸ್ತಾದರು. ಕೆಳಕ್ರಮಾಂಕದ ಬ್ಯಾಟರ್​ಗಳು ಬಂದಷ್ಟೇ ವೇಗವಾಗಿ ಪೆವಿಲಿಯನ್ ಸೇರಿಕೊಂಡರು. ಅಂತಿಮ ಗೆಲುವು ನ್ಯೂಝಿಲೆಂಡ್ ಪಾಲಾಯಿತು.

ವರದಿ : ಮೊಹಮದ್ ಶಫಿ ಸ್ಪೋರ್ಟ್ಸ್ ಬ್ಯೂರೋ tv8 kannada ಬೆಂಗಳೂರು

Related Articles

Leave a Reply

Your email address will not be published. Required fields are marked *

Back to top button