ಕ್ರೀಡೆ

ಟೀಂ ಇಂಡಿಯಾ ಪರ ಭರ್ಜರಿ ಶತಕ ಸಿಡಿಸಿದ ಸರ್ಫರಾಝ್ ಖಾನ್

ndia vs New Zealand, 1st Test: ನ್ಯೂಝಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಿಂದ ಕತ್ತು ನೋವಿನ ಕಾರಣ ಶುಭ್​ಮನ್ ಗಿಲ್ ಹೊರಗುಳಿದಿದ್ದು, ಅವರ ಸ್ಥಾನದಲ್ಲಿ ಸರ್ಫರಾಝ್ ಖಾನ್ ಅವಕಾಶ ಪಡೆದಿದ್ದರು. ಇದೀಗ ಸಿಕ್ಕ ಅವಕಾಶದಲ್ಲಿ ಭರ್ಜರಿ ಸೆಂಚುರಿ ಸಿಡಿಸಿ ಮಿಂಚಿದ್ದಾರೆ.

ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ನ್ಯೂಝಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ದಾಂಡಿಗ ಸರ್ಫರಾಝ್ ಖಾನ್ ಭರ್ಜರಿ ಶತಕ ಸಿಡಿಸಿ ಮಿಂಚಿದ್ದಾರೆ. ಈ ಪಂದ್ಯದ 2ನೇ ಇನಿಂಗ್ಸ್​ನಲ್ಲಿ 4ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಸರ್ಫರಾಝ್ 110 ಎಸೆತಗಳಲ್ಲಿ ಶತಕ ಪೂರೈಸಿದರು. ಈ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಚೊಚ್ಚಲ ಶತಕ ಸಿಡಿಸಿದ್ದಾರೆ.

ಇದಕ್ಕೂ ಮುನ್ನ ಮೊದಲ ಇನಿಂಗ್ಸ್​ನಲ್ಲಿ ಸರ್ಫರಾಝ್ ಖಾನ್ ಶೂನ್ಯಕ್ಕೆ ಔಟಾಗಿದ್ದರು. ಆದರೆ ದ್ವಿತೀಯ ಇನಿಂಗ್ಸ್​ನಲ್ಲಿ ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶಿಸಿದ ಯುವ ದಾಂಡಿಗ 3ನೇ ದಿನದಾಟದ ಮುಕ್ತಾಯದ ವೇಳೆಗೆ 78 ಎಸೆತಗಳಲ್ಲಿ 70 ರನ್ ಬಾರಿಸಿದ್ದರು. ಅದರಂತೆ ನಾಲ್ಕನೇ ದಿನದಾಟದಲ್ಲಿ ಇನಿಂಗ್ಸ್ ಮುಂದುವರೆಸಿದ ಸರ್ಫರಾಝ್ ಚೊಚ್ಚಲ ಸೆಂಚುರಿ ಸಿಡಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಟೀಮ್ ಇಂಡಿಯಾ ಕಂಬ್ಯಾಕ್:

ಈ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿದ್ದ ಭಾರತ ತಂಡವು ಅತ್ಯಂತ ಕಳಪೆ ಪ್ರದರ್ಶನ ನೀಡಿತ್ತು. ಮೊದಲ ಇನಿಂಗ್ಸ್​ನಲ್ಲಿ ಕೇವಲ 46 ರನ್​ಗಳಿಗೆ ಆಲೌಟ್ ಆಗುವ ಮೂಲಕ ಭಾರೀ ಮುಖಭಂಗಕ್ಕೆ ಒಳಗಾಗಿತ್ತು. ಇದಾದ ಬಳಿಕ ಇನಿಂಗ್ಸ್ ಆರಂಭಿಸಿದ ನ್ಯೂಝಿಲೆಂಡ್ ತಂಡವು ರಚಿನ್ ರವೀಂದ್ರ (134) ಅವರ ಶತಕದ ನೆರವಿನಿಂದ 402 ರನ್​ ಕಲೆಹಾಕಿ ಆಲೌಟ್ ಆಯಿತು.

356 ರನ್​ಗಳ ಹಿನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್ ಆರಂಭಿಸಿದ ಟೀಮ್ ಇಂಡಿಯಾಗೆ ಯಶಸ್ವಿ ಜೈಸ್ವಾಲ್ ಹಾಗೂ ರೋಹಿತ್ ಶರ್ಮಾ ಉತ್ತಮ ಆರಂಭ ಒದಗಿಸಿದ್ದರು. ಮೊದಲ ವಿಕೆಟ್​ಗೆ 71 ರನ್​ ಪೇರಿಸಿದ ಬಳಿಕ ಜೈಸ್ವಾಲ್ (35) ಔಟಾದರು.

ಇನ್ನು 63 ಎಸೆತಗಳಲ್ಲಿ 1 ಸಿಕ್ಸ್ ಹಾಗೂ 8 ಫೋರ್​ಗಳೊಂದಿಗೆ 52 ರನ್​ ಬಾರಿಸಿ ರೋಹಿತ್ ಶರ್ಮಾ ಕೂಡ ವಿಕೆಟ್ ಒಪ್ಪಿಸಿದರು. ಈ ಹಂತದಲ್ಲಿ ಜೊತೆಗೂಡಿದ ವಿರಾಟ್ ಕೊಹ್ಲಿ ಹಾಗೂ ಸರ್ಫರಾಝ್ ಖಾನ್ ಶತಕದ ಜೊತೆಯಾಟದ ಮೂಲಕ ತಂಡದ ಮೊತ್ತವನ್ನು 200ರ ಗಡಿದಾಟಿಸಿದರು.

ಆದರೆ ಮೂರನೇ ದಿನದಾಟದ ಅಂತಿಮ ಓವರ್​ನ ಕೊನೆಯ ಎಸೆತದಲ್ಲಿ ವಿರಾಟ್ ಕೊಹ್ಲಿ (70) ವಿಕೆಟ್​ ಕೀಪರ್​ಗೆ ಕ್ಯಾಚಿತ್ತು ನಿರಾಸೆ ಮೂಡಿಸಿದರು. ಇನ್ನು ನಾಲ್ಕನೇ ದಿನದಾಟದಲ್ಲಿ ಬ್ಯಾಟಿಂಗ್ ಮುಂದುವರೆಸಿದ ಸರ್ಫರಾಝ್ ಖಾನ್ 110 ಎಸೆತಗಳಲ್ಲಿ 13 ಫೋರ್ ಹಾಗೂ 3 ಸಿಕ್ಸ್​ಗಳೊಂದಿಗೆ ಶತಕ ಪೂರೈಸಿದರು. ಈ ಶತಕದ ನೆರವಿನಿಂದ ಟೀಮ್ ಇಂಡಿಯಾ 57 ಓವರ್​ಗಳ ಮುಕ್ತಾಯದ ವೇಳೆ 3 ವಿಕೆಟ್ ಕಳೆದುಕೊಂಡು 275 ರನ್ ಕಲೆಹಾಕಿದೆ. ಸದ್ಯ ಕ್ರೀಸ್​ನಲ್ಲಿ ಸರ್ಫರಾಝ್ ಖಾನ್ ಹಾಗೂ ರಿಷಭ್ ಪಂತ್ ಬ್ಯಾಟಿಂಗ್ ಮುಂದುವರೆಸಿದ್ದಾರೆ.

ಭಾರತ ಪ್ಲೇಯಿಂಗ್ 11: ರೋಹಿತ್ ಶರ್ಮಾ, ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ಸರ್ಫರಾಝ್ ಖಾನ್, ರಿಷಭ್ ಪಂತ್, ಕೆಎಲ್ ರಾಹುಲ್, ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ಜಸ್​ಪ್ರೀತ್ ಬುಮ್ರಾ, ಕುಲ್ದೀಪ್ ಯಾದವ್, ಮೊಹಮ್ಮದ್ ಸಿರಾಜ್.

ನ್ಯೂಝಿಲೆಂಡ್ ಪ್ಲೇಯಿಂಗ್ 11: ಟಾಮ್ ಲ್ಯಾಥಮ್ (ನಾಯಕ), ಡೆವೊನ್ ಕಾನ್ವೇ, ರಚಿನ್ ರವೀಂದ್ರ, ಡೇರಿಲ್ ಮಿಚೆಲ್, ವಿಲ್ ಯಂಗ್, ಟಾಮ್ ಬ್ಲಂಡೆಲ್ (ವಿಕೆಟ್ ಕೀಪರ್), ಗ್ಲೆನ್ ಫಿಲಿಪ್ಸ್, ಮ್ಯಾಟ್ ಹೆನ್ರಿ, ಟಿಮ್ ಸೌಥಿ, ವಿಲಿಯಂ ಒರೋಕ್, ಅಜಾಝ್ ಪಟೇಲ್.

ವರದಿ : ಮಹಮ್ಮದ್ ಶಫಿ ಸ್ಪೋರ್ಟ್ಸ್ ಬ್ಯೂರೋ ಬೆಂಗಳೂರು

Related Articles

Leave a Reply

Your email address will not be published. Required fields are marked *

Back to top button