ಪರಿಶಿಷ್ಟ ಜಾತಿಗಳಿಗೆ ಒಳ ಮೀಸಲಾತಿ ಆಗ್ರಹಿಸಿ ; ಡಿಸಿ ಕಚೇರಿಗೆ ಮುತ್ತಿಗೆ ಯತ್ನ ಹೋರಾಟಗಾರರ ಬಂಧನ, ಬಿಡುಗಡೆ

ರಾಯಚೂರು: ಪರಿಶಿಷ್ಟ ಜಾತಿಗಳಿಗೆ ಒಳ ಮೀಸಲಾತಿ ಜಾರಿಗೊಳಿಸಬೇಕು ಎಂದು ಆಗ್ರಹಿಸಿ ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಜಾರಿ ಹೋರಾಟ ಸಮಿತಿ ಕರ್ನಾಟಕದ ಜಿಲ್ಲಾ ಸಂಘಟನೆ ನೇತೃತ್ವದಲ್ಲಿ ಮಾದಿಗ ಸಮಾಜದ ಮುಖಂಡರು ಪ್ರತಿಭಟನೆ ನಡೆಸಿ ಬುಧವಾರ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದರು.
ಈ ವೇಳೆ ಸ್ಥಳದಲ್ಲಿದ್ದ ಪೊಲೀಸರು ಪ್ರತಿಭಟನನಿರತರನ್ನು ವಶಕ್ಕೆ ಪಡೆದು ಬಳಿಕ ಬಿಡುಗಡೆಗೊಳಿಸಿದರು.

ಜಿಲ್ಲಾಧಿಕಾರಿ ಕಚೇರಿ ಸಮೀಪದ ಟಿಪ್ಪು ಸುಲ್ತಾನ್ ಉದ್ಯಾನದಲ್ಲಿ ಸೇರಿದ ದಲಿತಪರ ಸಂಘಟನೆಗಳ ಪದಾಧಿಕಾರಿಗಳು, ಒಳ ಮೀಸಲಾತಿ ಹೋರಾಟಗಾರರು ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ನಂತರ ಜಿಲ್ಲಾಡಳಿತದ ಮೂಲಕ ರಾಜ್ಯಪಾಲರು ಹಾಗೂ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು. ಧರಣಿ ಬಳಿಕ ಸಮೀಪದ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು ಜಿಲ್ಲಾಧಿಕಾರಿ ಕಚೇರಿ ಮುತ್ತಿಗೆ ಹಾಕಲು ಯತ್ನಿಸಿದರು ಈ ವೇಳೆ ಬಂದೋಬಸ್ತ್ ನಲ್ಲಿದ್ದ ಪೊಲೀಸರು ಅವರನ್ನು ತಡೆದು ಬಂಧಿಸಿ ವಾಹನದಲ್ಲಿ ಕರೆದುಕೊಂಡು ಹೋಗಿ ನಂತರ ಬಿಡುಗಡೆ ಮಾಡಿದರು.
ಪ್ರತಿಭಟನೆ ಉದ್ದೇಶಿಸಿ ಹೋರಾಟಗಾರ ಎಸ್.ಮಾರೆಪ್ಪ, ಅಂಬಣ್ಣ ಆರೋಲಿಕರ್ ಮಾತನಾಡಿ, ‘ಪರಿಶಿಷ್ಟ ಜಾತಿ ಮೀಸಲಾತಿಯಲ್ಲಿ ಉಪ ವರ್ಗೀಕರಿಸಲು ಆಯಾ ರಾಜ್ಯ ಸರ್ಕಾರಗಳಿಗೆ ಅಧಿಕಾರವಿದ್ದು, ಸಂವಿಧಾನ 341ರ ಪರಿಚ್ಚೇದದ ತಿದ್ದುಪಡಿಯ ಅಗತ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಕಳೆದ ಆಗಸ್ಟ್ 1ರಂದು ಆದೇಶ ಹೊರಡಿಸಿದೆ. ಈ ಹಿನ್ನೆಲೆಯಲ್ಲಿ ರಾಜ್ಯದ ಕಾಂಗ್ರೆಸ್ ಸರ್ಕಾರ ಯಾವುದೇ ರೀತಿಯ ವಿಳಂಬ ಧೋರಣೆಗೆ ಆಸ್ಪದ ನೀಡದೇ ಒಳ ಮೀಸಲಾತಿ ಜಾರಿಗೆ ಮುಂದಾಗಬೇಕು’ ಎಂದು ಒತ್ತಾಯಿಸಿದರು.
2023ರ ಸಾರ್ವತ್ರಿಕ ಚುನಾವಣೆ ಸಮಯದಲ್ಲಿ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ 6ನೇ ಗ್ಯಾರಂಟಿಯಾಗಿ ಒಳ ಮೀಸಲಾತಿ ಜಾರಿಗೊಳಿಸುವುದಾಗಿ ಭರವಸೆ ನೀಡಿತ್ತು. ಇದೀಗ ಬೇಡಿಕೆಯನ್ನು ಈಡೇರಿಸಲು ರಾಜ್ಯ ಸರ್ಕಾರ ಮುಂದಾಗಬೇಕು. ಒಳಮೀಸಲಾತಿ ಬ್ಯಾಕ್ಲಾಗ್ ಸೇರಿದಂತೆ ಯಾವುದೇ ಹುದ್ದೆ, ನೇಮಕಾತಿ ಪ್ರಕ್ರಿಯೇಯನ್ನು ನಡೆಸಬಾರದು ಎಂದು ಆಗ್ರಹಿಸಿದರು.
ಜನಗಣತಿ ವರದಿ ವಿಚಾರವನ್ನು ಮುನ್ನೆಲೆಗೆ ತಂದು ಪರಿಶಿಷ್ಟ ಒಳಮೀಸಲಾತಿ ಜಾರಿಗೊಳಿಸುವಲ್ಲಿ ನಿರ್ಲಕ್ಷ್ಯ ಧೋರಣೆ ತಾಳದೇ, ಸುಪ್ರೀಂ ಕೋರ್ಟ್ ತೀರ್ಪು ಆದೇಶ ಪಾಲನೆ ಮಾಡದಿದ್ದಲ್ಲಿ ಬರುವ ದಿನಗಳಲ್ಲಿ ಹೋರಾಟ ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಸಂಘಟನೆ ಮುಖಂಡರಾದ ಎಂ.ವಿರೂಪಾಕ್ಷಿ, ಜೆ.ಬಿ.ರಾಜು, ಪಿ.ಯಲ್ಲಪ್ಪ, ನರಸಪ್ಪ ದಂಡೋರಾ, ಜನಾರ್ಧನ ಹಳ್ಳಿಬೆಂಚಿ, ಶಿವಕುಮಾರ್ ಮ್ಯಾಗಳಮನಿ .ಪಿ.ಅನಿಲ್ ಕುಮಾರ, ರಾಜು, ಗಣೇಶ ಪಾಲ್ಯಂ, ಶಂಶಾಲಂ, ಎಚ್.ದೊಡ್ಡಪ್ಪ, ಎಸ್.ರಾಜು, ನಾಗರಾಜ, ಶಾಂತಪ್ಪ ಉಪ್ರಾಳ, ರಾಘವೇಂದ್ರ ಬೋರೆಡ್ಡಿ, ನರಸಿಂಹಲು ಸೇರಿದಂತೆ ಸಮಾಜದ ಮುಖಂಢರು ಪಾಲ್ಗೊಂಡಿದ್ದರು.
ವರದಿ : ಮೊಹಮ್ಮದ್ ಶಫಿ tv8kannada ರಾಯಚೂರು