ಮಹಿಳಾ ಟಿ20 ವಿಶ್ವಕಪ್: ಸೆಮಿಫೈನಲ್ ರೇಸ್‌ನಿಂದ ಹೊರಬಿದ್ದ ಟೀಂ ಇಂಡಿಯಾ

ಐಸಿಸಿ ಮಹಿಳಾ ಟಿ20 ವಿಶ್ವಕಪ್ 2024ರಲ್ಲಿ ಮತ್ತೊಮ್ಮೆ ಟೀಮ್ ಇಂಡಿಯಾಕ್ಕೆ ಹಿನ್ನಡೆಯಾಗಿದೆ.ಟೀಮ್ ಇಂಡಿಯಾವನ್ನು ಟಿ20 ವಿಶ್ವಕಪ್ ಚಾಂಪಿಯನ್ ಮಾಡುವ ನಾಯಕಿ ಹರ್ಮನ್‌ಪ್ರೀತ್ ಕೌರ್ ಕನಸು ಭಗ್ನಗೊಂಡಿದೆ. ಮತ್ತೊಂದು ವಿಶ್ವಕಪ್ ನಿರೀಕ್ಷೆಯಲ್ಲಿದ್ದ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೂ ನಿರಾಸೆಯಾಗಿದೆ.

ಮಹಿಳಾ ಟಿ20 ವಿಶ್ವಕಪ್‌ನ ಲೀಗ್ ಹಂತದ ಕೊನೆ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ ಸೋಲು ಕಂಡಿತ್ತು. ಇದಾದ ಬಳಿಕ ಭಾರತ ಸೆಮಿಫೈನಲ್ ತಲುಪಲು ನ್ಯೂಜಿಲೆಂಡ್ ವಿರುದ್ಧ ಪಾಕಿಸ್ತಾನ ಗೆಲ್ಲಲೇಬೇಕಿತ್ತು. ಆದರೆ ಪಾಕಿಸ್ತಾನ ತಂಡ ನ್ಯೂಜಿಲೆಂಡ್ ಎದುರು ಹೀನಾಯ ಸೋಲನ್ನು ಎದುರಿಸಬೇಕಾಯಿತು. ಈ ಸೋಲಿನೊಂದಿಗೆ ಭಾರತ ಮತ್ತು ಪಾಕಿಸ್ತಾನ ಎರಡು ತಂಡಗಳು ಸೆಮಿಫೈನಲ್ ರೇಸ್‌ನಿಂದ ಹೊರಬಿದ್ದಿವೆ. ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ತಂಡಗಳು ಸೆಮಿಫೈನಲ್‌ಗೆ ಮುನ್ನಡೆದಿವೆ.
ಆರಂಭದಲ್ಲಿಯೇ ಪೆಟ್ಟು
ಟಿ20 ವಿಶ್ವಕಪ್ ಟೂರ್ನಿ ಆರಂಭಕ್ಕೂ ಮುನ್ನ ಭಾರತ ವನಿತೆಯರ ತಂಡದ ಗೆಲುವಿನ ಭರವಸೆಯಲ್ಲಿತ್ತು. ಆದರೆ ಟೂರ್ನಿಯ ಮೊದಲ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಟೀಮ್ ಇಂಡಿಯಾ ಸೋಲು ಮೂಲಕ ಉತ್ತಮ ಆರಂಭ ಪಡೆಯಲಿಲ್ಲ. ಇದು ತಂಡದ ಆತ್ವವಿಶ್ವಾಸದ ಮೇಲೆ ಹೊಡೆತ ನೀಡಿತ್ತು. ಮತ್ತೊಂದೆಡೆ, ಗಾಯದ ಬರೆಗಳು ಕೂಡ ಅದ್ಭುತ ಪ್ರದರ್ಶನ ನೀಡಲು ಭಾರತ ತಂಡಕ್ಕೆ ಅಡ್ಡಿಯಾಯಿತು.ನ್ಯೂಜಿಲೆಂಡ್ ವಿರುದ್ಧ ಸೋಲಿನ ನಂತರ ಹರ್ಮನ್‌ಪ್ರೀರ್ ಕೌರ್ ಪಡೆ ಭರ್ಜರಿ ಪುನರಾಗಮನ ಮಾಡಿತ್ತು. ಪಾಕಿಸ್ತಾನ ಮತ್ತು ಶ್ರೀಲಂಕಾ ವಿರುದ್ಧ ಅಮೋಘ ಜಯ ದಾಖಲಿಸುವ ಮೂಲಕ ಗೆಲುವಿನ ಟ್ರ್ಯಾಕ್‌ಗೆ ಮರಳಿತ್ತು. ಇಲ್ಲಿಂದ ಭಾರತ ಸೆಮಿಫೈನಲ್‌ಗೆ ತಲುಪಲಿದೆ ಎಂದು ಅಭಿಮಾನಿಗಳು ನಿರೀಕ್ಷಿಸಿದ್ದರು. ಆದರೆ, ಕಾಂಗೂರು ಪಡೆ ಎದುರು ಭಾರತ ಗೆಲ್ಲುವ ಪಂದ್ಯವನ್ನು ಕೈ ಚೆಲ್ಲಿತ್ತು. ಇದರೊಂದಿಗೆ ಬಹುತೇಕ ಟೀಮ್ ಇಂಡಿಯಾ ಸೆಮಿಫೈನಲ್ ರೇಸ್‌ನಿಂದ ಹೊರಗುಳಿಯುವ ಸಾಧ್ಯತೆ ಹೆಚ್ಚಾಗಿತ್ತು. ನ್ಯೂಜಿಲೆಂಡ್ ತಂಡಕ್ಕಿಂತ ಭಾರತ ಹೆಚ್ಚಿನ ರನ್ ರೇಟ್ ಹೊಂದಿದ್ದ ಕಾರಣ ಪಾಕಿಸ್ತಾನ ಗೆಲುವಿಗೆ ಪ್ರಾರ್ಥಿಸಿತ್ತು. ಆದರೆ ನ್ಯೂಜಿಲೆಂಡ್ ವಿರುದ್ದ ಪಾಕಿಸ್ತಾನ ಗೆಲುವು ಕಾಣಲು ಸಾಧ್ಯವಾಗಲಿಲ್ಲ. ಒಂದು ವೇಳೆ ಪಾಕಿಸ್ತಾನ ಗೆದ್ದಿದ್ದರೆ ಆಸ್ಟ್ರೇಲಿಯಾ ಜೊತೆಗೆ ಭಾರತ ತಂಡ ಸೆಮಿಫೈನಲ್ ತಲುಪುವ ಅವಕಾಶ ಹೊಂದಿತ್ತು.
ಪಾಕಿಸ್ತಾನಕ್ಕೆ ಸೋಲು
ನ್ಯೂಜಿಲೆಂಡ್ ತಂಡ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿತ್ತು. ಪಾಕಿಸ್ತಾನ ವನಿತೆಯರು ನ್ಯೂಜಿಲೆಂಡ್ ತಂಡವನ್ನು ಕಡಿಮೆ ಮೊತ್ತಕ್ಕೆ ಕಟ್ಟಿ ಹಾಕುವುದರಲ್ಲಿ ಯಾವುದೇ ತಪ್ಪು ಮಾಡಲಿಲ್ಲ. ಪಾಕಿಸ್ತಾನ ಬೌಲಿಂಗ್ ದಾಳಿಗೆ ನಡುಕಿದ ನ್ಯೂಜಿಲೆಂಡ್ 20 ಓವರ್ ಗಳಲ್ಲಿ 6 ವಿಕೆಟ್ ಕಳೆದುಕೊಂಡು 110 ರನ್ ಗಳಿಸಿತು. ಈ ಗುರಿ ಬೆನ್ನಟ್ಟಿದ ಪಾಕಿಸ್ತಾನಕ್ಕೆ ಪಂದ್ಯ ಗೆಲ್ಲುವುದು ಸುಲಭವಾಗಿತ್ತು.
ಆದರೆ ನ್ಯೂಜಿಲೆಂಡ್ ಬ್ಯಾಟಿಂಗ್‌ನಲ್ಲಿ ವಿಫಲವಾದರೂ, ಬೌಲಿಂಗ್‌ನಲ್ಲಿ ಕಮ್‌ಬ್ಯಾಕ್ ಮಾಡಿತ್ತು. ನ್ಯೂಜಿಲೆಂಡ್ ಸಂಘಟಿತ ಬೌಲಿಂಗ್ ದಾಳಿಗೆ ತತ್ತರಿಸಿದ ಪಾಕಿಸ್ತಾನ ತಂಡ 56 ರನ್‌ಗಳಿಗೆ ಆಲೌಟ್ ಆಯಿತು. ನ್ಯೂಜಿಲೆಂಡ್ 54 ರನ್‌ಗಳಿಂದ ಭರ್ಜರಿ ಗೆಲುವು ಸಾಧಿತ್ತು. ಪಾಕಿಸ್ತಾನ ಪರ ಮುನಿಬಾ ಅಲಿ 15 ರನ್ ಹಾಗೂ ನಾಯಕಿ ಫಾತಿಮಾ 21 ರನ್ ಗಳಿಸಿದರು. ಇವರಿಬ್ಬರನ್ನು ಬಿಟ್ಟರೆ ಬೇರೆ ಯಾವುದೇ ಬ್ಯಾಟರ್ ಎರಡಂಕಿ ತಲುಪಲು ಸಾಧ್ಯವಾಗಲಿಲ್ಲ. ನ್ಯೂಜಿಲೆಂಡ್ ಎಲ್ಲಾ ಬೌಲರ್‌ಗಳು ವಿಕೆಟ್ ಪಡೆದರು. ಆದರೆ ಅಮಿಲಾ ಕೆರ್ ಗರಿಷ್ಠ ಮೂರು ವಿಕೆಟ್ ಗಳಿಸುವಲ್ಲಿ ಯಶಸ್ವಿಯಾದರು.
ವರದಿ : ಮೊಹಮದ್ ಶಫಿ ಸ್ಪೋರ್ಟ್ಸ್ ಬ್ಯೂರೋ tv8kannada ಬೆಂಗಳೂರು