ಬೆಂಡೆಕಾಯಿ ಪಲ್ಯ ಜೊತೆ ರೊಟ್ಟಿ ಸೇವನೆ, ಏಳು ಜನ ಅಸ್ವಸ್ಥ!
ರಾಯಚೂರು : ನಿನ್ನೆಯಷ್ಟೇ ಜಿಲ್ಲೆಯ ಲಿಂಗಸುಗೂರು ತಾಲೂಕಿನ ಪರಂಪುರ ತಾಂಡಾದಲ್ಲಿ ದೇವರ ಕಾರ್ಯಕ್ಕಾಗಿ ತಯಾರಿಸಿದ ಮಾಂಸದೂಟ ಸೇವಿಸಿ 20ಕ್ಕೂ ಹೆಚ್ಚು ಜನ ಅಸ್ವಸ್ಥರಾಗಿದ್ದರು.

ಈ ಘಟನೆ ಮಾಸುವ ಮುನ್ನವೇ ಇದೀಗ ರೊಟ್ಟಿ, ಬೆಂಡೆಕಾಯಿ ಪಲ್ಯ ಸೇವಿಸಿ ಒಂದೇ ಕುಟುಂಬದ 7 ಮಂದಿ ಅಸ್ವಸ್ಥರಾದ ಘಟನೆ ಮಸ್ಕಿ ತಾಲೂಕಿನ ಅಮೀನಗಡದಲ್ಲಿ ನಡೆದಿದೆ.
ಮಾಳಪ್ಪ, ಲಕ್ಷ್ಮೀ, ಗೌರಮ್ಮ, ಬಸಲಿಂಗಪ್ಪ, ಮಲ್ಲಿಕಾರ್ಜುನ, ಗುರುಬಸಮ್ಮ ಎಂಬುವವರು ಈ ಆಹಾರ ಸೇವಿಸಿದ ಕೂಡಲೇ ಅವರಲ್ಲಿ ತೀವ್ರ ವಾಂತಿಭೇದಿ ಕಾಣಿಸಿಕೊಂಡಿದೆ.
ಸದ್ಯ ಅವರನ್ನು ಲಿಂಗಸಗೂರು ತಾಲೂಕು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದ್ದು, ಗ್ರಾಮಕ್ಕೆ ವೈದ್ಯರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಲುಷಿತ ನೀರಿನಿಂದಾಗಿಯೇ ಹೀಗೆ ಆಗಿರಬಹುದು ಎಂದು ಮೇಲ್ನೋಟಕ್ಕೆ ಶಂಕಿಸಲಾಗುತ್ತಿದೆ. ಬೆಳಗ್ಗೆ ಎಲ್ಲರೂ ಹೊಲದಲ್ಲೇ ಕುಳಿತು ಒಟ್ಟಾಗಿ ಊಟ ಮಾಡಿದ್ದರು. ತದನಂತರ ಏಕಾಏಕಿ ಅಸ್ವಸ್ಥಗೊಂಡರು ಎಂದು ತಿಳಿದುಬಂದಿದೆ.
ವರದಿ : ಮೊಹಮ್ಮದ್ ಶಫಿ