ರಾಜ್ಯ
ರಾಮನಗರ: 12 ವರ್ಷದ ಮಾನಸಿಕ ಅಸ್ವಸ್ಥ ಬಾಲಕಿ ಮೇಲೆ ವೃದ್ಧನಿಂದ ಅತ್ಯಾಚಾರ: ಸ್ಥಳೀಯರಿಂದ ಧರ್ಮದೇಟು!
ರಾಮನಗರ, ಜನವರಿ 10: 65 ವರ್ಷದ ವೃದ್ಧನಿಂದ 12 ವರ್ಷದ ಮಾನಸಿಕ ಅಸ್ವಸ್ಥ ಬಾಲಕಿ ಮೇಲೆ ಅತ್ಯಾಚಾರ ಮಾಡಿರುವಂತಹ ಘಟನೆ ಜಿಲ್ಲೆಯ ಮಾಗಡಿ ತಾಲೂಕಿನ ಕುದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಚಾಕಲೇಟ್ ಕೊಡಿಸುವುದಾಗಿ ಹೇಳಿ ಬಟ್ಟೆ ಬಿಚ್ಚಿಸಿದ ಆರೋಪ ಮಾಡಲಾಗಿದೆ. ಮಾತನಾಡಲು ಬಾರದ ಕಾರಣ ಯಾರಿಗೆ ಹೇಳುತ್ತಾಳೆ ಎಂದು ಬಾಲಕಿಯನ್ನು ಮನೆಯ ಹಿತ್ತಲಿಗೆ ಕರೆದುಕೊಂಡು ಹೋಗಿ ಕೃತ್ಯವೆಸಗಲಾಗಿದೆ.
ತಾಯಿ ಮನೆಗೆ ವಾಪಾಸ್ ಆದಾಗ ಬಾಲಕಿ ಅಳುತ್ತಿದ್ದಳು. ಯಾಕೆ ಅಳುತ್ತಿದ್ದೀಯಾ ಅಂತ ಕೇಳಿದಾಗ, ಅಳುತ್ತಲೇ ತನ್ನ ಗುಪ್ತಾಂಗ ತೋರಿಸಿದ್ದಾಳೆ. ಯಾರು ಮಾಡಿದ್ದು ಅಂತ ಕೇಳಿದಾಗ ಸನ್ನೆ ಮಾಡಿ ಅಜ್ಜನ ಬಗ್ಗೆ ಬಾಲಕಿ ಹೇಳಿದ್ದಾಳೆ. ಕೂಡಲೇ ಅಜ್ಜನನ್ನು ಹಿಡಿದ ಸ್ಥಳೀಯರು ಧರ್ಮದೇಟು ನೀಡಿದ್ದಾರೆ. ಬಳಿಕ ಬಾಲಕಿ ಮೇಲೆ ಅತ್ಯಾಚಾರ ಮಾಡಿರುವುದಾಗಿ ಅಜ್ಜ ಒಪ್ಪಿಕೊಂಡಿದ್ದಾರೆ. ಸರ್ಕಾರಿ ಆಸ್ಪತ್ರೆ ಯಲ್ಲಿ ಬಾಲಕಿಗೆ ಚಿಕಿತ್ಸೆ ನೀಡಿದ್ದು, ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲು ಮಾಡಲಾಗಿದೆ.