ರಾಜಕೀಯರಾಜ್ಯ

ಚನ್ನಪಟ್ಟಣಕ್ಕೂ ಚಾಚಿದ ವಕ್ಫ್ ಕಬಂಧ ಬಾಹುಗಳು; ಆರ್.ಅಶೋಕ್ ಕಿಡಿ

ತಾಲ್ಲೂಕು ಕಚೇರಿಯಲ್ಲಿ ಭೂ ದಾಖಲೆ ಪರಿಶೀಲನೆ ಮಾಡಿಕೊಳ್ಳುವಂತೆ ರೈತರಿಗೆ ಸಲಹೆ

ಡಿಕೆಶಿ ರಾಮನಗರ ಜಿಲ್ಲೆಗೆ ಉಸ್ತುವಾರಿ ಸಚಿವ ಏಕಾಗಲಿಲ್ಲ ಎಂದು ಕೇಳಿದ ಡಾ.ಸಿ.ಎನ್.ಅಶ್ವತ್ಥನಾರಾಯಣ

ಚನ್ನಪಟ್ಟಣ / ರಾಮನಗರ: ವಕ್ಫ್ ಕಬಂಧ ಬಾಹುಗಳು ಎಲ್ಲೆಡೆ ಚಾಚಿಕೊಳ್ಳುತ್ತಿದ್ದು, ರೈತರು ಕೂಡಲೇ ತಾಲ್ಲೂಕು ಕಚೇರಿಗೆ ಹೋಗಿ ತಮ್ಮ ಭೂ ದಾಖಲೆಗಳನ್ನು ಪರಿಶೀಲನೆ ಮಾಡಿಕೊಳ್ಳಬೇಕು ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಅವರು ಸಲಹೆ ಮಾಡಿದರು.

ಚನ್ನಪಟ್ಟಣ ಕ್ಷೇತ್ರದ ಚಕ್ಕೆರೆ ಗ್ರಾಮದಲ್ಲಿ ಎನ್ ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರ ಪರವಾಗಿ ಪ್ರಚಾರ ಭಾಷಣ ಮಾಡಿದ ಅವರು; ಇವತ್ತು ವಕ್ಫ್ ಮಾರಿ ಚನ್ನಪಟ್ಟಣಕ್ಕೂ ವಕ್ಕರಿಸಿದ್ದು, ಯಲಿಯೂರು ಬಳಿ ಹಿಂದೂಗಳ ಸ್ಮಶಾನಕ್ಕೂ ಅದರ ಕಣ್ಣು ಬಿದ್ದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನೂರಾರು ವರ್ಷಗಳಿಂದ ರೈತರು ಭೂಮಿಯಲ್ಲಿ ಬಾಳಿ ಬದುಕುತ್ತಿದ್ದಾರೆ. ಆದರೆ, ಇವರು ಖೊಟ್ಟಿ ದಾಖಲೆಗಳನ್ನು ಸೃಷ್ಟಿ ಮಾಡಿಕೊಂಡು ಅದಕ್ಕೂ ಹಿಂದಿನಿಂದಲೂ ಈ ಭೂಮಿ ನಮ್ಮ ವಶದಲ್ಲಿ ಇತ್ತು ಎಂದು ತಗಾದೆ ತೆಗೆಯುತ್ತಿದ್ದಾರೆ. ವಕ್ಫ್ ಎಷ್ಟರ ಮಟ್ಟಿಗೆ ಭೂಮಿಯನ್ನು ಹೊಂದಿದೆ ಎಂದರೆ ಭಾರತೀಯ ಸೇನೆಗಿಂತ ಜಾಸ್ತಿ ಭೂಮಿ ವಕ್ಫ್ ಮಂಡಳಿ ವಶದಲ್ಲಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.

ಕೆರೆ ತುಂಬಿಸಿ ನಾನೇ ಭಗೀರಥ ಎಂದು ಹೇಳಿಕೊಳ್ಳುತ್ತಿರುವ ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ ಕಿಡಿಕಾರಿದ ಅವರು; 17 ಕೆರೆ ತುಂಬಿಸಲು ಹಣ ನೀಡಿದ್ದು ಅಂದಿನ ಸಿಎಂ ಡಿ.ವಿ.ಸದಾನಂದ ಗೌಡರು, ಹಣ ಬಿಡುಗಡೆಗೆ ಆದೇಶ ಮಾಡಿದ್ದು ಬಸವರಾಜ್ ಬೊಮ್ಮಾಯಿ ಹಾಗೂ ಯೋಜನೆಗೆ ಚಾಲನೆ ನೀಡಿದ್ದು ನೀರಾವರಿ ಎಂಜಿನಿಯರ್ ವೆಂಕಟೇ ಗೌಡ. ಈ ವೆಂಕಟೇ ಗೌಡ ಹಲವರು ಸಲ ನಮ್ಮ ಮೇಲೆ ಒತ್ತಡ ಹಾಕಿ ಈ ಯೋಜನೆ ಜಾರಿಗೆ ಬರುವಂತೆ ನೋಡಿಕೊಂಡು, ಅದನ್ನು ಅನುಷ್ಠಾನ ಮಾಡಿದರು. ಇದಕ್ಕೂ ಯೋಗೇಶ್ವರ್ ಅವರಿಗೂ ಸಂಬಂಧವೇ ಇಲ್ಲ ಎಂದು ಅಶೋಕ್ ಅವರು ಹೇಳಿದರು.

ಮಾಜಿ ಡಿಸಿಎಂ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು ಮಾತನಾಡಿ; ರಾಮನಗರ ಜಿಲ್ಲೆಯನ್ನು ಅಭಿವೃದ್ಧಿ ಮಾಡುತ್ತೇನೆ ಎಂದು ಚನ್ನಪಟ್ಟಣಕ್ಕೆ ಹದಿನೆಂಟು ಸಲ ಸುತ್ತು ಹಾಕಿದ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ರಾಮನಗರ ಜಿಲ್ಲಾ ಉಸ್ತುವಾರಿ ಸಚಿವರಾಗದೆ ಬೆಂಗಳೂರು ನಗರ ಜಿಲ್ಲೆ ಉಸ್ತುವಾರಿ ಸಚಿವರಾಗಿದ್ದು ಯಾಕೆ? ಎಂದು ಪ್ರಶ್ನಿಸಿದರು.

ರಾಮನಗರ ಜಿಲ್ಲೆಯನ್ನು ಅಭಿವೃದ್ದಿ ಮಾಡಿದರೆ ಅವರಿಗೆ ಏನೂ ಸಿಗುವುದಿಲ್ಲ. ಬೆಂಗಳೂರಿನಲ್ಲಿ ಅಭಿವೃದ್ಧಿ ಎಂದು ಡ್ರಾಮ ನಡೆಸಿದರೆ ಲೂಟಿ ಹೊಡೆಯಬಹುದು ಎಂದು ಅವರು ಪ್ರಹಾರ ನಡೆಸಿದರು.

Related Articles

Leave a Reply

Your email address will not be published. Required fields are marked *

Back to top button