ಮುಸ್ಲಿಂ ಸಮುದಾಯವನ್ನು ಓಲೈಸಲು ಒತ್ತು ನೀಡಿರುವ ಬಜೆಟ್: ವಿಜಯೇಂದ್ರ ಟೀಕೆ

ಹಣಕಾಸು ಖಾತೆಯನ್ನು ಹೊತ್ತ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಂಡಿಸಿರುವ ಬಜೆಟ್ ರಾಜ್ಯದ ಜನತೆಯ ನಿರೀಕ್ಷೆಯನ್ನು ಹುಸಿ ಮಾಡಿದೆ. ನಿಖರ ಭರವಸೆ ನೀಡುವ ಯೋಜನೆ ಹಾಗೂ ಅದಕ್ಕೆ ಅನುದಾನ ಪ್ರಕಟಿಸದೆ ಜನರ ಮೂಗಿಗೆ ತುಪ್ಪ ಸವರಲು ಹೊರಟಿದ್ದಾರೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಆರೋಪಿಸಿದ್ದಾರೆ.
ಈ ಕುರಿತು ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಸರಣಿ ಪೋಸ್ಟ್ ಮಾಡಿರುವ ಅವರು, ‘ಅಲ್ಪಸಂಖ್ಯಾತರ ಹೆಸರಿನಲ್ಲಿ ಮುಸ್ಲಿಂ ಸಮುದಾಯವನ್ನು ಓಲೈಸಲು ಒತ್ತು ನೀಡಿರುವ ಬಜೆಟ್ ಇದಾಗಿದೆ. ಶಿಕ್ಷಣದ ಕ್ಷೇತ್ರದ ಸಮಗ್ರ ಅಭಿವೃದ್ಧಿ ಬಗ್ಗೆ ಯಾವುದೇ ಕೊಡುಗೆ ನೀಡಿಲ್ಲ. ಉದ್ಯೋಗ ಸೃಷ್ಟಿಗೆ ಅವಕಾಶವಿರುವ ಕೈಗಾರಿಕೆಗಳಿಗೆ ಉತ್ತೇಜನವೇ ಇಲ್ಲ’ ಎಂದು ಹೇಳಿದ್ದಾರೆ.
‘ಬಜೆಟ್‌ನಲ್ಲಿ ಘೋಷಿಸಿರುವ ಯೋಜನೆಗಳು ಕೇವಲ ಕಾಗದದಲ್ಲೇ ಉಳಿಯುವ ಸಾಧ್ಯತೆ ಗೋಚರವಾಗುತ್ತಿದೆ. ‘ಹೇಳುವುದು ಒಂದು ಮಾಡುವುದು ಇನ್ನೊಂದು’ ಎಂಬಂತೆ ಈ ಬಜೆಟ್ ಆಗಬಾರದು, ಕಳೆದ ಬಜೆಟ್‌ನಲ್ಲಿ ಘೋಷಣೆಯಾಗಿದ್ದವೆಲ್ಲವೂ ಘೋಷಣೆಯಾಗಿಯೇ ಉಳಿದಿದೆ, ಈ ಬಜೆಟ್‌ಗೂ ಅದೇ ಗತಿ ಆಗುವ ಸಾಧ್ಯತೆಯೇ ಹೆಚ್ಚು ಎನ್ನುವುದು ರಾಜ್ಯದ ದಯನೀಯ ಆರ್ಥಿಕ ಪರಿಸ್ಥಿತಿ ಹೇಳುತ್ತಿದೆ’ ಎಂದು ಹೇಳಿದ್ದಾರೆ.
ತನ್ನ ತೆರಿಗೆ ಪಾಲನ್ನು ಪಡೆಯುವಲ್ಲಿ ಎಡವಿ ಬಿದ್ದಿರುವ ಕಾಂಗ್ರೆಸ್ ಸರ್ಕಾರ ಹಾಗೂ ಮುಖ್ಯಮಂತ್ರಿಗಳು ಬಜೆಟ್ ನಲ್ಲಿ ಕೇಂದ್ರ ಸರ್ಕಾರದ ಮೇಲೆ ಆರೋಪ ಹೊರಿಸುವ ಅಂಶಗಳನ್ನು ಸೇರಿಸಿಕೊಂಡು ರಾಜ್ಯದ ಆರ್ಥಿಕ ಸ್ಥಿತಿಯ ನಿರ್ವಹಣೆಯ ವೈಫಲ್ಯವನ್ನು ಮುಚ್ಚಿಕೊಳ್ಳಲು ಹೊರಟಿದ್ದಾರೆ’ ಎಂದು ಆರೋಪಿಸಿದ್ದಾರೆ.
‘ಕೃಷಿಕರು, ಕಾರ್ಮಿಕರು, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು, NHM ನೌಕರರು ಸೇರಿದಂತೆ ಶ್ರಮಿಕ ವರ್ಗಗಳನ್ನು ಕಡೆಗಣಿಸಿ ಅಧಿಕಾರಕ್ಕೆ ಬರುವ ಮುನ್ನ ತನ್ನ ಪ್ರಣಾಳಿಕೆಯಲ್ಲಿ ಘೋಷಿಸಿದ್ದ ಯಾವುದೇ ಅಂಶಗಳನ್ನು ಬಜೆಟ್ ನಲ್ಲಿ ಕಾರ್ಯಗತಗೊಳಿಸಲು ಯಾವುದೇ ಹೊಸ ಭರವಸೆಯ ಹೆಜ್ಜೆ ಇಡದೇ ಕೊಟ್ಟ ಮಾತು ತಪ್ಪಿದ ಜನ ವಿರೋಧಿ ಬಜೆಟ್ ಸಿದ್ದರಾಮಯ್ಯನವರು ಮಂಡಿಸಿದ್ದಾರೆ’ ಎಂದು ಹೇಳಿದ್ದಾರೆ.
‘ತಾವು ಘೋಷಿಸಿರುವ ಹೊಸ ಕಾರ್ಯಕ್ರಮಗಳಿಗೆ ಹಾಗೂ ಹದಗೆಟ್ಟಿರುವ ಆರ್ಥಿಕ ಪರಿಸ್ಥಿತಿಯನ್ನು ನಿರ್ವಹಿಸುವ ನಿಟ್ಟಿನಲ್ಲಿ ಜನರಿಗೆ ಹೊರೆಯಾಗದ ರೀತಿಯಲ್ಲಿ ಸಂಪನ್ಮೂಲ ಕ್ರೋಡೀಕರಣದ ಮೂಲಗಳನ್ನು ಸ್ಪಷ್ಟವಾಗಿ ಎಲ್ಲಿಯೂ ವಿವರಿಸಿಲ್ಲ, ಆ ಮೂಲಕ ಇದೊಂದು ತೋರಿಕೆಯ ಹಾಗೂ ಜನರ ಕಿವಿಗೆ ಹೂ ಮುಡಿಸುವ ಬಜೆಟ್ ಆಗಿದೆ ಎಂಬುದು ಸ್ಪಷ್ಟವಾಗಿ ಗೋಚರಿಸುತ್ತದೆ’ ಎಂದು ಹೇಳಿದ್ದಾರೆ.