ಕ್ರೀಡೆ

IND vs ENG: ಕೊನೆಗೂ ಮಿಂಚಿದ ಫ್ಲಾಪ್​ ಬೌಲರ್, ನೆರವಾಯ್ತು ಕನ್​ಕಷನ್ ನಿಯಮ​! ಸರಣಿ ಕೈವಶ ಮಾಡಿಕೊಂಡ ಭಾರತ

5 ಪಂದ್ಯಗಳ ಟಿ20 ಸರಣಿಯ 4ನೇ ಪಂದ್ಯದಲ್ಲಿ ಟೀಮ್ ಇಂಡಿಯಾ 15 ರನ್​ಗಳ ಗೆಲುವು ಸಾಧಿಸಿದೆ. ಈ ಮೂಲಕ ಇನ್ನು ಒಂದು ಪಂದ್ಯ ಇರುವಂತೆ ಟಿ20 ಸರಣಿಯನ್ನ ಕೈವಶ ಮಾಡಿಕೊಂಡಿದೆ. ಪುಣೆಯ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಟೀಮ್ ಇಂಡಿಯಾ ಹಾರ್ದಿಕ್ ಪಾಂಡ್ಯ ಹಾಗೂ ಶಿವಂ ದುಬೆ ಅವರ ಅರ್ಧಶತಕದ ನೆರವಿನಿಂದ 181 ರನ್​ಗಳಿಸಿತ್ತು.

182 ರನ್​ಗಳ ಗುರಿ ಬೆನ್ನಟ್ಟಿದ ಆಂಗ್ಲಪಡೆ 20 ಓವರ್​ಗಳಲ್ಲಿ 8 ವಿಕೆಟ್ ಕಳೆದುಕೊಂಡು 166ಕ್ಕೆ ಆಲೌಟ್ ಆಗುವ ಮೂಲಕ ರನ್​ಗಳಿಸಿ 5 ರನ್​ಗಳಿಂದ ಸೋಲು ಕಂಡಿತು.

ಭಾರತ ನೀಡಿದ್ದ 182 ರನ್​ಗಳ ಗುರಿ ಬೆನ್ನಟ್ಟಿದ ಇಂಗ್ಲೆಂಡ್ ತಂಡ ಮೊದಲ ವಿಕೆಟ್​ಗೆ ಪವರ್​ ಪ್ಲೇನಲ್ಲಿ 60ರನ್​ಗಳ ಜೊತೆಯಾಟ ನಡೆಸಿತು. ಕಳೆದ ಪಂದ್ಯದಲ್ಲಿ ಅಬ್ಬರಿಸಿದ್ದ ಗೆಲುವಿಗೆ ಕಾರಣರಾಗಿದ್ದ ಬೆನ್ ಡಕೆಟ್ ಇಂದು ಕೂಡ ಅಬ್ಬರಿಸಿದರು. ಕೇವಲ 19 ಎಸೆತಗಳಲ್ಲಿ 7 ಬೌಂಡರಿ, 1 ಸಿಕ್ಸರ್​ ಸಹಿತ 39 ರನ್​ಗಳಿಸಿದರು. ಅಪಾಯಕಾರಿಯಾಗುತ್ತಿದ್ದ ಜೋಡಿಯನ್ನ ರವಿ ಬಿಷ್ಣೋಯ್ ತಮ್ಮ ಪವರ್​ ಪ್ಲೇನ ಕೊನೆಯ ಎಸೆತದಲ್ಲಿ ಡಕೆಟ್​ ವಿಕೆಟ್​ ಪಡೆಯುವ ಮೂಲಕ ದೊಡ್ಡ ಬ್ರೇಕ್ ನೀಡಿದರು. ಇನ್ನು ಮತ್ತೊಬ್ಬ ಆರಂಭಿಕ ಆಟಗಾರ ಫಿಲ್ ಸಾಲ್ಟ್​ ಇಂದು ಕೂಡ ವಿಫಲರಾದರು. 21 ಎಸೆತಗಳಲ್ಲಿ 4 ಬೌಂಡರಿ ಸಹಿತ 23 ರನ್​ಗಳಿಸಿ ಅಕ್ಷರ್ ಪಟೇಲ್ ಬೌಲಿಂಗ್​ನಲ್ಲಿ ಬೌಲ್ಡ್ ಆದರು.

ಡಕೆಟ್ ವಿಕೆಟ್​ ಪಡೆದು ಬ್ರೇಕ್ ನೀಡಿದ್ದ ಬಿಷ್ಣೋಯ್​ ತಮ್ಮ ಮುಂದಿನ ಓವರ್​ನಲ್ಲಿ ವಿಧ್ವಂಸಕ ಆಟಗಾರ ಜೋಸ್ ಬಟ್ಲರ್​ ವಿಕೆಟ್ ಪಡೆದು ಇಂಗ್ಲೆಂಡ್​ ದೊಡ್ಡ ಹೊಡೆತ ನೀಡಿದರು. ಅಲ್ಲಿಂದ ಇಂಗ್ಲೆಂಡ್ ತಂಡ ಚೇತರಿಸಿಕೊಳ್ಳಲು ಭಾರತೀಯ ಬೌಲರ್​ಗಳು ಅವಕಾಶ ನೀಡಲಿಲ್ಲ. ಕಳೆದ ಪಂದ್ಯದಲ್ಲಿ 43 ರನ್​ಗಳಿಸಿ ಅಬ್ಬರಿಸಿದ್ದ ಲಿವಿಂಗ್​ಸ್ಟೋನ್ ಕನ್​ಕಷನ್​ ಮೂಲಕ ತಂಡಕ್ಕೆ ಸೇರಿದ್ದ ಹರ್ಷಿತ್ ರಾಣಾ ಬೌಲಿಂಗ್ ನಲ್ಲಿ ಕ್ಯಾಚ್ ನೀಡಿ ಔಟ್ ಆದರು.

ಭೀತಿ ಹುಟ್ಟಿಸಿದ್ದ ಬ್ರೂಕ್

ಮೊದಲ ಮೂರು ಪಂದ್ಯಗಳಲ್ಲಿ ದಯನೀಯ ವೈಫಲ್ಯವಾಗಿದ್ದ ಹ್ಯಾರಿ ಬ್ರೂಕ್ ಇಂದು ಅದ್ಭುತ ಪ್ರದರ್ಶನ ತೋರಿದರು. ಕೇವಲ 26 ಎಸೆತಗಳಲ್ಲಿ 5 ಬೌಂಡರಿ, 2 ಸಿಕ್ಸರ್ ಸಹಿತ 51 ರನ್​ಗಳಿಸಿದರು. ದುರಾದೃಷ್ಟವಶಾತ್ ಇಂದೂ ಕೂಡ ಅವರು ವರುಣ್ ಚಕ್ರವರ್ತಿ ಬೌಲಿಂಗ್​ನಲ್ಲೇ ಔಟ್ ಆದರು. ಉಳಿದಂತೆ ಯಾವೊಬ್ಬ ಬ್ಯಾಟರ್ ಕೂಡ ಕ್ರೀಸ್​ನಲ್ಲಿ ಗಟ್ಟಿಯಾಗಿ ನೆಲೆಯೂರಲು ಭಾರತೀಯ ಬೌಲರ್​ಗಳು ಬಿಡಲಿಲ್ಲ.

ಲಿಯಾಮ್ ಲಿವಿಂಗ್​ಸ್ಟೋನ್ (9), ಜಾಕೋಬ್ ಬೆಥೆಲ್ (6), ಬ್ರಿಡೆನ್ ಕಾರ್ಸ್​ (0) ಬಂದಷ್ಟೇ ವೇಗವಾಗಿ ವಿಫಲರಾದರು. ಜೇಮೀ ಓವರ್​ಟನ್​ 19 ರನ್​ಗಳಿಸಿ ಕೊನೆಯಲ್ಲಿ ಕೊಂಚ ಪ್ರತಿರೋಧ ತೋರಿದರು. ಜೋಪ್ರಾ ಆರ್ಚರ್ (0), ಆದಿಲ್ ರಶೀದ್ ಅಜೇಯ 10 ರನ್​ಗಳಿಸಿದರು.

ಭಾರತದ ಪರ ಹರ್ಷಿತ್ ರಾಣಾ 33ಕ್ಕೆ 3, ರವಿ ಬಿಷ್ಣೋಯ್ 28ಕ್ಕೆ 3, ವರುಣ್ ಚಕ್ರವರ್ತಿ 28ಕ್ಕೆ 2, ಅರ್ಷದೀಪ್ ಸಿಂಗ್ 35ಕ್ಕೆ 1 ವಿಕೆಟ್ ಪಡೆದು ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.

ಪಾಂಡ್ಯ-ದುಬೆ ಅಬ್ಬರ

ಇದಕ್ಕೂ ಮುನ್ನ ಬ್ಯಾಟಿಂಗ್ ಮಾಡಿದ ಭಾರತ ತಂಡ ಕೇವಲ 12 ರನ್​ಗಳಾಗುವಷ್ಟರಲ್ಲಿ 3 ವಿಕೆಟ್ ಕಳೆದುಕೊಂಡಿತ್ತು. ಆದರೆ ರಿಂಕು ಸಿಂಗ್ (30), ಹಾರ್ದಿಕ್ ಪಾಂಡ್ಯ (53) ಹಾಗೂ ಶಿವಂ ದುಬೆ (53) ಅದ್ಭುತ ಪ್ರದರ್ಶನ ತೋರಿ 181ರನ್​ಗಳ ಸವಾಲಿನ ಮೊತ್ತಕ್ಕೆ ಕಾರಣವಾದರು.

5 ಪಂದ್ಯಗಳ ಟಿ20 ಸರಣಿಯಲ್ಲಿ ಭಾರತ ಮೊದಲೆರಡು ಪಂದ್ಯಗಳನ್ನ ಗೆದ್ದಿತ್ತು. ನಂತರ 3ನೇ ಪಂದ್ಯದಲ್ಲಿ ಸೋಲು ಕಂಡಿದ್ದ ಸೂರ್ಯಕುಮಾರ್ ಪಡೆ, 4ನೇ ಪಂದ್ಯದಲ್ಲಿ ಗೆಲುವು ಸಾಧಿಸುವ ಮೂಲಕ ಸರಣಿಯನ್ನ 3-1ರಲ್ಲಿ ವಶಪಡಿಸಿಕೊಂಡಿದೆ.

ವರದಿ : ಮೊಹಮದ್ ಶಫಿ ಸ್ಪೋರ್ಟ್ಸ್ ಬ್ಯೂರೋ tv8kannada ಬೆಂಗಳೂರು

Related Articles

Leave a Reply

Your email address will not be published. Required fields are marked *

Back to top button