ಕ್ರೈಂ

RDCC ಬ್ಯಾಂಕ್‌ ಖಾತೆ ದುರ್ಬಳಕೆ, ಕೋಟ್ಯಂತರ ರೂಪಾಯಿ ಅವ್ಯವಹಾರ : ತನಿಖೆಗೆ ಆರ್.ಮಾನಸಯ್ಯ ಒತ್ತಾಯ,

ರಾಯಚೂರು: (ಆರ್‌ಕೆಡಿಸಿಸಿ) ಬ್ಯಾಂಕ್‌ನಲ್ಲಿ ರೈತರ ಖಾತೆ ದುರ್ಬಳಕೆ ಮಾಡಿಕೊಂಡು ಕೋಟ್ಯಂತರ ರೂಪಾಯಿ ಭ್ರಷ್ಟಾಚಾರ ಮಾಡಿದ ನಿರ್ದೇಶಕ ಮಂಡಳಿಯ ಅಧ್ಯಕ್ಷ ಹಾಗೂ ಬಿಜೆಪಿ ಮುಖಂಡ ವಿಶ್ವನಾಥ ಪಾಟೀಲ, ಸಿಇಒ ಐಎಸ್ ಗಿರಡ್ಡಿ ಅವರನ್ನು ಬಂಧಿಸಿ ನ್ಯಾಯಾಂಗ ತನಿಖೆ ನಡೆಸಬೇಕು ಎಂದು ಕರ್ನಾಟಕ ರೈತ ಸಂಘದ ಮುಖಂಡ ಹಾಗೂ ಟಿಯುಸಿಐ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಆರ್. ಮಾನಸಯ್ಯ ಒತ್ತಾಯಿಸಿದರು.

ರೈತರಿಗೆ ಬಡ್ಡಿ ರಹಿತ ಸಾಲ ನೀಡುವ ಉದ್ದೇಶದಿಂದ ಸ್ಥಾಪಿಸಲಾದ ಆರ್‌ಕೆಡಿಸಿಸಿ ಬ್ಯಾಂಕ್‌ ನಿಯಮ ಬಾಹಿರವಾಗಿ ಕಾರ್ಯ ನಿರ್ವಹಿಸುತ್ತಿದೆ. ಜಿಲ್ಲೆಯ ಲಿಂಗಸೂಗೂರು ಬ್ರಾಂಚ್‌ನ ಲಿಂಗಸೂಗೂರು ಹಾಗೂ ಮುದಗಲ್ ಪಟ್ಟಣದ ಅನೇಕ ರೈತರ ಬ್ಯಾಂಕ್ ಖಾತೆಗೆ 2017ರಿಂದ 2024ರ ವರೆಗೆ ಲಕ್ಷಾಂತರ ರೂಪಾಯಿ ಹಣ ಜಮಾ ಮಾಡಿ ಆನಂತರ ಬ್ಯಾಂಕ್ ಅಧಿಕಾರಿಗಳೇ ವಿತ್ ಡ್ರಾ ಮಾಡಿಕೊಂಡಿದ್ದಾರೆ. ರೈತರ ಖಾತೆಗಳನ್ನು ದುರ್ಬಳಕೆ ಮಾಡಿಕೊಂಡ ಅಧಿಕಾರಿಗಳೇ ವಿತ್ ಡ್ರಾ ಆದ ಹಣಕ್ಕೆ ಸಾಲ ಎಂದು ನಮೂದಿಸಿಕೊಂಡು ಸಾಲ ಮರುಪಾವತಿಗೆ ರೈತರಿಗೆ ನೊಟೀಸ್ ನೀಡಿದ್ದಾರೆ ಎಂದು ಭಾನುವಾರ ಮಾಧ್ಯಮಗೋಷ್ಠಿಯಲ್ಲಿ ಆರೋಪಿಸಿದರು.

‘ಕೊಪ್ಪಳ ಹಾಗೂ ರಾಯಚೂರು ಜಿಲ್ಲೆಗಳನ್ನು ಒಳಗೊಂಡ ಆರ್ ಕೆಡಿಸಿಸಿ ಬ್ಯಾಂಕ್ ನಲ್ಲಿ 39 ಶಾಖೆಗಳಿವೆ. ರಾಯಚೂರು ಜಿಲ್ಲೆಯ 1.14 ಲಕ್ಷಕ್ಕೂ ಹೆಚ್ಚು ಗ್ರಾಹಕರು ಇದ್ದಾರೆ. ರೈತ ಶರಣಬಸವ, ಬಸವರಾಜ, ಲಾಲ್ ಸಾಬ್ ಶರಣಪ್ಪ ಅವರು ನೀಡಿದ ದೂರಿನ ಮೇರೆಗೆ ಮುದಗಲ್ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕವಾಗಿ 4 ದೂರು ದಾಖಲಾಗಿದೆ ಹಾಗೂ ರೈತ ಶರಣಪ್ಪ ಅಮರಪ್ಪ ಕುರಬರ ಅವರಿಂದ ಲಿಂಗಸೂಗೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. 10 ವರ್ಷಗಳಲ್ಲಿ ಸುಮಾರು ₹250 ಕೋಟಿ ಭ್ರಷ್ಟಾಚಾರವಾಗಿದೆ. ಗಮನಕ್ಕೆ ಬಾರದ ಅನೇಕ ಖಾತೆಗಳಿಗೆ ಹಣ ಹೋಗಿವೆ. ಕೂಡಲೇ ರೈತರು ತಮ್ಮ ಬ್ಯಾಂಕ್ ಖಾತೆಗಳನ್ನು ಪರಿಶೀಲಿಸಿಕೊಳ್ಳಬೇಕು ಎಂದು ಮನವಿ ಮಾಡಿದ ಅವರು, ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ತನಿಖೆ ನಡೆಸಬೇಕು’ ಎಂದು ಮನವಿ ಮಾಡಿದರು.

ಕರ್ನಾಟಕ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಮಲ್ಲಯ್ಯ ಕಟ್ಟಿಮನಿ, ಮುಖಂಡರಾದ ಅಜೀಜ್ ಜಾಗೀರದಾರ್, ಸೈಯದ್ ಅಬ್ಬಾಸ್ ಅಲಿ, ಗಿರಿಲಿಂಗಯ್ಯ ಸ್ವಾಮಿ ಉಪಸ್ಥಿತರಿದ್ದರು.

ವರದಿ : ವಿಶ್ವನಾಥ್ ಸಾಹುಕಾರ್ tv8kannda ರಾಯಚೂರು

Related Articles

Leave a Reply

Your email address will not be published. Required fields are marked *

Back to top button