ವಾಷಿಂಗ್ಟನ್, ಮೇ 25: ಅಮೆರಿಕದ ಟೆಕ್ಸಾಸ್ ಶಾಲೆಯಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಮೃತಪಟ್ಟವರ ಸ್ಮರಣಾರ್ಥಕವಾಗಿ ವೈಟ್ ಹೌಸ್ ಸೇರಿದಂತೆ ಸಾರ್ವಜನಿಕ ಕಚೇರಿಗಳು ಮತ್ತು ಸ್ಥಳಗಳಲ್ಲಿ ಶನಿವಾರದವರೆಗೆ ರಾಷ್ಟ್ರ ಧ್ವಜವನ್ನು ಅರ್ಧಕ್ಕೆ ಹಾರಿಸುವಂತೆ ಅಮೆರಿಕ ಅಧ್ಯಕ್ಷ ಜೋ ಬೈಡನ್ ಆದೇಶ ಹೊರಡಿಸಿದ್ದಾರೆ.
“ವೈಟ್ ಹೌಸ್, ಮಿಲಿಟರಿ ತಾಣಗಳು, ನೌಕಾ ಕೇಂದ್ರಗಳು, ಯುದ್ಧ ನೌಕೆಗಳು ಸೇರಿದಂತೆ ದೇಶಾದ್ಯಂತ ಇರುವ ಸಾರ್ವಜನಿಕ ಕಚೇರಿಗಳು ಮತ್ತು ಸ್ಥಳಗಳಲ್ಲಿ 2022ರ ಮೇ 28ರವರೆಗೆ ಅಮೆರಿಕದ ರಾಷ್ಟ್ರ ಧ್ವಜವನ್ನು ಅರ್ಧಕ್ಕೆ ಹಾರಿಸುವಂತೆ ಆದೇಶಿಸಲಾಗಿದೆ,” ಎಂದು ಅಮೆರಿಕ ಅಧ್ಯಕ್ಷರು ಪತ್ರಿಕಾ ಪ್ರಕಟಣೆಯಲ್ಲಿ ಮಂಗಳವಾರ ತಿಳಿಸಿದ್ದಾರೆ.
ಟೆಕ್ಸಾಸ್ ಗುಂಡಿನ ದಾಳಿ ಕುರಿತು ಟ್ವೀಟ್ ಮಾಡಿರುವ ವೈಟ್ ಹೌಸ್‌ನ ನೂತನ ಮಾಧ್ಯಮ ಕಾರ್ಯದರ್ಶಿ ಕೆರೀನ್ ಜೀನ್ ಪಿಯರ್, “ಟೆಕ್ಸಾಸ್ ಪ್ರಾಥಮಿಕ ಶಾಲೆಯಲ್ಲಿ ನಡೆದ ಅಮಾನುಷ ಗುಂಡಿನ ದಾಳಿ ಕುರಿತು ಅಮೆರಿಕ ಅಧ್ಯಕ್ಷ ಜೋ ಬೈಡನ್ ಸುದ್ದಿಗೋಷ್ಠಿ ನಡೆಸಿದ್ದಾರೆ. ಈ ಘಟನೆ ಕುರಿತು ತನಿಖೆ ಹಿನ್ನೆಲೆಯಲ್ಲಿ ಲಭ್ಯ ಮಾಹಿತಿಯನ್ನು ನಿಯಮಿತವಾಗಿ ಸುದ್ದಿಗೋಷ್ಠಿ ನಡೆಸಿ ಸಾರ್ವಜನಿಕರೊಂದಿಗೆ ಹಂಚಿಕೊಳ್ಳಲಿದ್ದಾರೆ. ಘಟನೆಯಲ್ಲಿ ಮಡಿದವರ ಕುಟಂಬಕ್ಕೆ ಸಾಂತ್ವನ ತಿಳಿಸಿದ್ದಾರೆ,” ಎಂದು ಹೇಳಿದರು.
ಟೆಕ್ಸಾಸ್‌ನ ಗವರ್ನರ್ ಗ್ರೇಗ್ ಅಬಾಟ್ ಕೂಡ ಪತ್ರಿಕಾ ಪ್ರಕಟಣೆ ಬಿಡುಗಡೆಗೊಳಿಸಿದ್ದು, “ಟೆಕ್ಸಾಸ್ ಪ್ರಾಥಮಿಕ ಶಾಲೆಯಲ್ಲಿ ನಡೆದ ಅಮಾನುಷ ಗುಂಡಿನ ದಾಳಿಯಲ್ಲಿ ತಮ್ಮವರನ್ನು ಕಳೆದುಕೊಂಡ ದುಃಖತಪ್ತರ ಬೆಂಬಲಕ್ಕೆ ಟೆಕ್ಸಾಸ್‌ನ ಪ್ರತಿಯೊಬ್ಬ ನಾಗರಿಕರು ನಿಲ್ಲಲ್ಲಿದ್ದಾರೆ. ಅಂತಿಮವಾಗಿ ರಾಬ್ ಪ್ರಾಥಮಿಕ ಶಾಲೆಯನ್ನು ರಕ್ಷಿಸಲು ಸಫಲರಾದ ಧೈರ್ಯವಂತ ಪ್ರತ್ಯಕ್ಷದರ್ಶಿಗಳಿಗೆ ನಾವು ಧನ್ಯವಾದ ತಿಳಿಸುತ್ತೇವೆ,” ಎಂದರು.
ಘಟನೆ ಕುರಿತು ಸಮಗ್ರ ತನಿಖೆ ನಡೆಸುವಂತೆ ಟೆಕ್ಸಾಸ್ನ ಸಾರ್ವಜನಿಕ ಸುರಕ್ಷತಾ ಇಲಾಖೆ, ಟೆಕ್ಸಾಸ್ ರೇಂಜರ್ಸ್ ಹಾಗೂ ಸ್ಥಳೀಯ ಪೊಲೀಸರಿಗೆ ಆದೇಶಿಸಲಾಗಿದೆ,” ಎಂದು ಅಬಾಟ್ ತಿಳಿಸಿದರು.
“ಘಟನೆ ಹಿನ್ನೆಲೆಯಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳುವ ನಿಟ್ಟಿನಲ್ಲಿ ಟೆಕ್ಸಾಸ್‌ನ ತುರ್ತು ನಿರ್ವಹಣೆ ವಿಭಾಗಕ್ಕೆ ಅಗತ್ಯ ಸಿಬ್ಬಂದಿ ಹಾಗೂ ಎಲ್ಲಾ ಅಗತ್ಯ ಸಂಪನ್ಮೂಲಗಳನ್ನು ಒದಗಿಸಲಾಗಿದೆ,” ಎಂದು ಮಾಹಿತಿ ನೀಡಿದರು.
ಮಂಗಳವಾರ 18 ವರ್ಷದ ಬಂದೂಕುಧಾರಿ ವಿದ್ಯಾರ್ಥಿಯೊಬ್ಬ ಟೆಕ್ಸಾಸ್‌ನ ಉವಾಲ್ಡೆಯಲ್ಲಿರುವ ರಾಬ್ ಪ್ರಾಥಮಿಕ ಶಾಲೆಗೆ ನುಗ್ಗಿ ಗುಂಡಿನ ಮಳೆಗೆರೆದಿದ್ದಾನೆ. ದಾಳಿಯಲ್ಲಿ 18 ಮಂದಿ ಮಕ್ಕಳು ಹಾಗೂ ಒಬ್ಬ ಶಿಕ್ಷಕರು ಅಸುನೀಗಿದ್ದಾರೆ. ನಂತರ ಬಂದೂಕುಧಾರಿಯನ್ನು ಪೊಲೀಸರು ಹತ್ಯೆ ಮಾಡಿದ್ದಾರೆ.
ಘಟನೆಯಲ್ಲಿ ಹಲವು ವಿದ್ಯಾರ್ಥಿಗಳು ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಗುಂಡಿನ ದಾಳಿ ನಡೆಸುವುಕ್ಕೂ ಮೊದಲು ಬಂದೂಕುಧಾರಿ ವಿದ್ಯಾರ್ಥಿ ಅಜ್ಜಿಯ ಜತೆ ಜಗಳವಾಡಿದ್ದ ಎಂಬ ಮಾಹಿತಿ ಸಿಕ್ಕಿದೆ.
ಶಾಲೆಯಲ್ಲಿ ಗುಂಡಿನ ದಾಳಿ ನಡೆಸಿದ ವಿದ್ಯಾರ್ಥಿಯ ಸಂಬಂಧಿ ಸಹ ಅದೇ ಶಾಲೆಯಲ್ಲಿ ಓದುತ್ತಿದ್ದು, ಆ ವಿದ್ಯಾರ್ಥಿಗೂ ಗಾಯಗಳಾಗಿವೆ. ಬಂದೂಕುಧಾರಿ ವಿದ್ಯಾರ್ಥಿಯ ಕೌಟುಂಬಿಕ ಹಿನ್ನಲೆ ಬಗ್ಗೆ ಪೊಲೀಸರು ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಇದು ಅಮೆರಿಕದಲ್ಲಿ ಇತ್ತೀಚಿನ ವರ್ಷಗಳಲ್ಲಿ ಜರುಗಿದ ಭೀಕರ ದಾಳಿಯಾಗಿದೆ. ಇದೇ ರೀತಿ 2018ರಲ್ಲಿ ಪ್ಲೊರಿಡಾದ ಪಾರ್ಕ್ ಲ್ಯಾಂಡ್‌ನಲ್ಲಿರುವ ಮಾರ್ಜರಿ ಸ್ಟೋನ್ಮೆನ್ ಡಾಗ್ಲಸ್ ಪ್ರೌಢ ಶಾಲೆಗೆ ಬಂದೂಕುಧಾರಿಯೊಬ್ಬ ನುಗ್ಗಿ ನಡೆಸಿದ ದಾಳಿಯಲ್ಲಿ 17 ಮಂದಿ ಮೃತಪಟ್ಟಿದ್ದರು.