ಸುದ್ದಿ

ವಾಜಪೇಯಿ ಕ್ರೀಡಾಂಗಣದಲ್ಲಿ ಕಳಪೆ ಕಾಮಗಾರಿ: ಎಎಪಿ ಪ್ರತಿಭಟನೆ

ಎಚ್‌ಎಸ್‌ಆರ್‌ ಲೇಔಟ್‌ನ ವಾಜಪೇಯಿ ಕ್ರೀಡಾಂಗಣದ ಗ್ಯಾಲರಿಯು ಕುಸಿದು ಬೀಳಲು ರಾಜ್ಯ ಬಿಜೆಪಿ ಸರ್ಕಾರದ 40% ಕಮಿಷನ್‌ ದಂಧೆಯೇ ಕಾರಣವೆಂದು ಆರೋಪಿಸಿ ಆಮ್‌ ಆದ್ಮಿ ಪಾರ್ಟಿಯು ಪ್ರತಿಭಟನೆ ನಡೆಸಿತು.

ಪ್ರತಿಭಟನೆಯ ನೇತೃತ್ವ ವಹಿಸಿದ್ದ ಬೆಂಗಳೂರು ಎಎಪಿ ಅಧ್ಯಕ್ಷ ಮೋಹನ್‌ ದಾಸರಿ ಮಾತನಾಡಿ, “ಸಿಎಂ ಬಸವರಾಜ ಬೊಮ್ಮಾಯಿಯವರಿಂದ ಲೋಕಾರ್ಪಣೆಗೊಂಡ ಎರಡನೇ ತಿಂಗಳಲ್ಲಿ ಗ್ಯಾಲರಿಯ ಮೇಲ್ಚಾವಣಿ ಕುಸಿದು ಬಿದ್ದಿದೆ. ಬಿಜೆಪಿ ಸರ್ಕಾರ ಹಾಗೂ ಸ್ಥಳೀಯ ಶಾಸಕ ಸತೀಶ್‌ ರೆಡ್ಡಿಯವರ 40% ಕಮಿಷನ್‌ ದಂಧೆಗೆ ಇದೊಂದು ನಿದರ್ಶನ. ಕಳಪೆ ಕಾಮಗಾರಿಯನ್ನು ಜನರಿಗೆ ತೋರಿಸಲು ಸ್ಥಳಕ್ಕೆ ಆಗಮಿಸಿದ ಎಎಪಿ ಕಾರ್ಯಕರ್ತರ ಮೇಲೆ ಬಿಜೆಪಿ ಕಾರ್ಯಕರ್ತರು ಗೂಂಡಾ ವರ್ತನೆ ತೋರಿರುವುದು ಖಂಡನೀಯ. ಭ್ರಷ್ಟ ಹಾಗೂ ಗೂಂಡಾ ಪಕ್ಷವಾದ ಬಿಜೆಪಿಯನ್ನು ನಾವು ಅಧಿಕಾರದಿಂದ ಕಿತ್ತೊಗೆಯುತ್ತೇವೆ” ಎಂದು ಹೇಳಿದರು.

“ವಾಜಪೇಯಿ ಕ್ರೀಡಾಂಗಣದಲ್ಲಿ 4 ಕೋಟಿ ರೂಪಾಯಿ ವೆಚ್ಚದಲ್ಲಿ ಕಾಮಗಾರಿ ನಡೆದಿದ್ದು, ಇದರ ಸಂಪೂರ್ಣ ತನಿಖೆಯಾಗಬೇಕು. ಲೋಕೋಪಯೋಗಿ ಇಲಾಖಾ ತನಿಖೆ ನಡೆಸಿ, ಅಕ್ರಮದಲ್ಲಿ ಭಾಗಿಯಾದ ಗುತ್ತಿಗೆದಾರರು, ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಜನರ ಹಣವು ಭ್ರಷ್ಟರ ಪಾಲಾಗಿ, ಸಾರ್ವಜನಿಕ ಆಸ್ತಿಗಳು ಕಳಪೆಯಾಗುವುದನ್ನು ನೋಡಿಕೊಂಡು ಸುಮ್ಮನಿರುವ ಪ್ರಶ್ನೆಯೇ ಇಲ್ಲ” ಎಂದು ಮೋಹನ್‌ ದಾಸರಿ ಹೇಳಿದರು.

ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಎಎಪಿ ಉಸ್ತುವಾರಿ ಸೀತಾರಾಮ್‌ ಗುಂಡಪ್ಪ ಮಾತನಾಡಿ, “ಸಂಸದ ತೇಜಸ್ವಿ ಸೂರ್ಯರವರು ದೆಹಲಿ ಸಿಎಂ ನಿವಾಸದೆದುರು ಬಿಜೆಪಿ ಕಾರ್ಯಕರ್ತರೊಡನೆ ದಾಂಧಲೆ ಮಾಡಿದ್ದರು. ಎಎಪಿಯ ರಾಜ್ಯ ಕಚೇರಿಗೂ ಗೂಂಡಾ ಕಾರ್ಯಕರ್ತರನ್ನು ಕಳುಹಿಸಿದ್ದರು. ಅವರಿಗೆ ತಾಕತ್ತಿದ್ದರೆ ಅವರದ್ದೇ ಕ್ಷೇತ್ರದಲ್ಲಿ 40% ಕಮಿಷನ್‌ ದಂಧೆಗೆ ಒಳಗಾಗಿರುವ ವಾಜಪೇಯಿ ಕ್ರೀಡಾಂಗಣಕ್ಕೆ ಬಂದು ಕಳಪೆ ಕಾಮಗಾರಿ ಬಗ್ಗೆ ಮಾತನಾಡಲಿ” ಎಂದು ಸವಾಲು ಹಾಕಿದರು. ನಂತರ ಜಂಟಿ ಆಯುಕ್ತರು ಕಳಪೆ ಕಾಮಗಾರಿಯ ತನಿಖೆಯ ಬಗ್ಗೆ ದೂರನ್ನು ಸ್ವೀಕರಿಸಿದರು. ಪ್ರತಿಭಟನೆಯಲ್ಲಿ ಎಎಪಿ ಮುಖಂಡರಾದ , ಜಗದೀಶ್ ಚಂದ್ರ, ಯೋಗಿತಾ ರೆಡ್ಡಿ, ಪಲ್ಲವಿ ಚಿದಂಬರಂ, ನಾಗಭೂಷಣ ರೆಡ್ಡಿ, ಮಂಜುನಾಥಸ್ವಾಮಿ, ಕಲೈ, ಫಿರೋಜ್ ಖಾನ್, ವೀಣಾ ರಾವ್, ಸತೀಶ್ ಗೌಡ ಮತ್ತಿತರ ಮುಖಂಡರು, ಕಾರ್ಯಕರ್ತರು ಭಾಗವಹಿಸಿದ್ದರು.

Related Articles

Leave a Reply

Your email address will not be published. Required fields are marked *

Back to top button