ಸುದ್ದಿ

ಅಂಜನಾದ್ರಿಯಲ್ಲಿ ಇಂದು ಹನುಮಮಾಲಾ ವಿಸರ್ಜನೆ

ಗಂಗಾವತಿ: ಅಂಜನಾದ್ರಿ ಬೆಟ್ಟದಲ್ಲಿ ಇಂದು ಐತಿಹಾಸಿಕ ಹನುಮಮಾಲಾ ವಿಸರ್ಜನೆ ನಡೆಯಲಿದ್ದು, ರಾಜ್ಯದ ನಾನಾ ಭಾಗಗಳಿಂದ ಭಕ್ತರು ಆಗಮಿಸುತ್ತಿದ್ದಾರೆ.

ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಅಂಜನಾದ್ರಿ ಬೆಟ್ಟದ ಆಂಜನೇಯ ದೇವಸ್ಥಾನದಲ್ಲಿ ಇಂದು ಹನುಮಮಾಲಾ ವಿಸರ್ಜನೆ ನಡೆಯಲಿದೆ.

ಬೆಳಗಿನ ಜಾವ ಏಕಕಾಲಕ್ಕೆ ಮಾಲಾಧಾರಿಗಳು ಆಗಮಿಸಿದ್ದು, 575 ಮೆಟ್ಟಿಲು ಹತ್ತಿ ಆಂಜನೇಯ ಸ್ವಾಮಿ ದರ್ಶನದ ಬಳಿಕ ಹನುಮಮಾಲೆಯನ್ನು ವಿಸರ್ಜನೆ ಮಾಡಲಿದ್ದಾರೆ. ಬೆಟ್ಟದ ಮುಂಭಾಗದಲ್ಲಿ ಭಕ್ತರ ಆಗಮನದಿಂದ ನೂಕು ನುಗ್ಗಲು ಉಂಟಾಗುತ್ತಿದ್ದು, ನಿಯಂತ್ರಣಕ್ಕಾಗಿ ಪೊಲೀಸ್ ಹಾಗೂ ದೇವಸ್ಥಾನದ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ.

ವಿಸರ್ಜನೆಗೆ ಸಿಂಗಾರಗೊಂಡ ಅಂಜನಾದ್ರಿ:

ರಾಮಾಯಣ ಕಾಲದ ಪೌರಾಣಿಕ ಇತಿಹಾಸವನ್ನು ಹೊಂದಿರುವ ಕೊಪ್ಪಳದ ಗಂಗಾವತಿ ತಾಲೂಕಿನ ಅಂಜನಾದ್ರಿ ಬೆಟ್ಟವು ಹನುಮಮಾಲಾ ವಿಸರ್ಜನೆ ಕಾರ್ಯಕ್ರಮದ ಹಿನ್ನೆಲೆಯಲ್ಲಿ ತಳಿರು, ತೋರಣ, ವಿದ್ಯುತ್ ದೀಪಾಲಂಕಾರದಿಂದ, ಕೇಸರಿ ಧ್ವಜಗಳಿಂದ ಸಿಂಗಾರಗೊಂಡು ಮಾಲಾಧಾರಿಗಳನ್ನು ಸ್ವಾಗತಿಸುತ್ತಿದೆ.

ಪ್ರತಿ ವರ್ಷದಂತೆ ಈ ಬಾರಿಯು ಸಹ ಚತುರ್ಮಾಸದಲ್ಲಿ ಹನುಮಮಾಲೆಯನ್ನು ಧಾರಣೆ ಮಾಡಿದ ಹನುಮನ ಭಕ್ತರು ಕಠಿಣ ವ್ರತವನ್ನು ಕೈಕೊಂಡು ಹನುಮಮಾಲಾ ವಿಸರ್ಜನೆಗಾಗಿ ಇಂದು (ಡಿ.13) ಅಂಜನಾದ್ರಿಗೆ ಆಗಮಿಸಿದ್ದಾರೆ. ರಾಜ್ಯದ ನಾನಾ ಜಿಲ್ಲೆಗಳಿಂದ ಲಕ್ಷಕ್ಕೂ ಅಧಿಕ ಮಾಲಾಧಾರಿಗಳು ಬರುವ ನಿರೀಕ್ಷೆಯಿದ್ದು, ಜಿಲ್ಲಾಡಳಿತ ಈಗಾಗಲೇ ಸಕಲ ತಯಾರಿ ಮಾಡಿಕೊಂಡಿದೆ.

ಅಂಜನಾದ್ರಿ ಬೆಟ್ಟವನ್ನು ದೀಪಗಳಿಂದ, ಬೆಟ್ಟದ ಕೆಳಗಡೆ ಇರುವ ಪಾದಗಟ್ಟಿಯನ್ನು ಬಾಳೆಕಂಬ, ತೆಂಗಿನಗರಿ, ಹೂವಿನಿಂದ ಸಿಂಗಾರಗೊಳಿಸಲಾಗಿದೆ. ಇನ್ನೂ ಬೆಟ್ಟದ ಮೇಲಿರುವ ಹನುಮನ ದೇವಸ್ಥಾನದ ಗರ್ಭಗುಡಿಯಲ್ಲಿ ಹೂವಿನ ಅಲಂಕಾರ, ಕೇಸರಿ ಧ್ವಜಗಳನ್ನು ಕಟ್ಟುವ ಮೂಲಕ ದೇವಸ್ಥಾನವನ್ನು ಸಿಂಗಾರ ಗೊಳಿಸಲಾಗಿದೆ.

Related Articles

Leave a Reply

Your email address will not be published. Required fields are marked *

Back to top button