ಕಾರ್ಯ ಶ್ರೀ ಸಿದ್ದೇಶ್ವರಸ್ವಾಮಿ ಜಾತ್ರಾ ಮಹೋತ್ಸವಕ್ಕೆ ಸಿದ್ಧತೆ

ನಂಜನಗೂಡು: ಇತಿಹಾಸ ಪ್ರಸಿದ್ಧ ಶ್ರೀ ಕ್ಷೇತ್ರ ಕಾರ್ಯ ಶ್ರೀ ಸಿದ್ದೇಶ್ವರ ಸ್ವಾಮಿಯ ಬೆಟ್ಟದಲ್ಲಿ ನಾಳೆ ನ.3 ರಂದು ಭಾನುವಾರ ನಡೆಯುವ ಶ್ರೀ ಸಿದ್ದೇಶ್ವರ ಸ್ವಾಮಿ ಜಾತ್ರಾ ಮಹೋತ್ಸವಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.
ನಂಜನಗೂಡು ತಾಲ್ಲೂಕಿನ ದೊಡ್ಡಕವಲಂದೆ ಹೋಬಳಿಯ ಕಾರ್ಯ ಗ್ರಾಮದ ಶ್ರೀ ಸಿದ್ದೇಶ್ವರ ಸ್ವಾಮಿ ಬೆಟ್ಟದಲ್ಲಿ ಈ ಬಾರಿ ಕಾರಣಾಂತರಗಳಿಂದ ಜಾತ್ರೆ ನಡೆಯುದಿಲ್ಲ ಎಂಬ ಅನುಮಾನ ಕಾಡುತ್ತಿತ್ತು. ಕೊನೆಗೂ ಗ್ರಾಮಸ್ಥರು ಸಭೆ ಸೇರಿ ಚರ್ಚೆ ನಡೆಸಿ ಈ ಬಾರಿ ಜಾತ್ರೆ ಮಾಡುತ್ತೇವೆ ಎಂದು ನಿರ್ಧಾರ ಮಾಡಿದ್ದಾರೆ.
ನಾಳೆ ನಡೆಯುವ ರಥೋತ್ಸವಕ್ಕೆ ಗ್ರಾಮಸ್ಥರು ಮುಂಜಾನೆಯಿಂದಲೇ ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ
ದೀಪಾವಳಿ ಹಬ್ಬದ ಮಾರನೇ ದಿನ ಪ್ರಾರಂಭವಾಗುವ ಶ್ರೀ ಸಿದ್ದೇಶ್ವರ ಸ್ವಾಮಿಯ ಜಾತ್ರಾ ಮಹೋತ್ಸವ ಸುಮಾರು ಮೂರು ದಿನಗಳ ಕಾಲ ನಡೆಯುತ್ತದೆ.
ನ.3 ರಂದು ಭಾನುವಾರ ಬೆಳಿಗ್ಗೆ 9 ಗಂಟೆಗೆ ಶ್ರೀ ಸಿದ್ದೇಶ್ವರ ಸ್ವಾಮಿಯ ಪಲ್ಲಕ್ಕಿ ಉತ್ಸವಕ್ಕೆ ಪೂಜೆ ಸಲ್ಲಿಸುವ ಮೂಲಕ ಜಾತ್ರೆಗೆ ಚಾಲನೆ ಸಿಗಲಿದೆ.
ಸುಮಾರು 25 ಅಡಿ ಎತ್ತರದ ಖುರ್ಜು ರಥೋತ್ಸವವನ್ನು ತಯಾರು ಮಾಡಿ ವಸ್ತ್ರಲಂಕಾರ, ಹೂವಿನ ಅಲಂಕಾರಗಳಿಂದ ಆ ತೇರನ್ನು ಶೃಂಗರಿಸಿ ಕಳಸರೋಹಣ ಮಾಡಿ ಮಧ್ಯಾಹ್ನ 12 ಗಂಟೆಗೆ ಸರಿಯಾಗಿ ಆರು ಅಡಿ ಎತ್ತರದ ರಥದ ಸಹಾಯದಿಂದ ಕಾರ್ಯ ಗ್ರಾಮದ ಕೊನೆಯ ಭಾಗದವರೆಗೂ ಆ ರಥವನ್ನು ಎಳೆದುಕೊಂಡು ಹೋಗಿ ತದನಂತರ ಎರಡು ಟನ್ ಭಾರವುಳ್ಳ ತೇರನ್ನು ಸುಮಾರು 200ಕ್ಕೂ ಹೆಚ್ಚು ಜನರು ಹೆಗಲ ಮೇಲೆ ಹೊತ್ತು ಸುಮಾರು 600 ಅಡಿ ಎತ್ತರದ ಶ್ರೀ ಸಿದ್ದೇಶ್ವರ ಬೆಟ್ಟಕ್ಕೆ ಹೊತ್ತುಕೊಂಡು ಹೋಗುತ್ತಾರೆ. ಇದು ಪ್ರಮುಖ ಆಕರ್ಷಣೆಯಾಗಿದೆ.
ಅದನ್ನು ವೀಕ್ಷಿಸಲು ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತರು ರಾಜ್ಯದ ನಾನಾ ಭಾಗಗಳಿಂದ ಆಗಮಿಸುತ್ತಾರೆ.
ನ.4 ರಂದು ಪಲ್ಲಕ್ಕಿ ಉತ್ಸವ, ಪಂಚ ದೇವರುಗಳ ಉತ್ಸವ ಮೂರ್ತಿಗಳ ಮೆರವಣಿಗೆ, ನ.5 ರಂದು ಗ್ರಾಮದ ದರೋಬರೋ ಕೆರೆಯಲ್ಲಿ ರಾತ್ರಿ 8 ಗಂಟೆಗೆ ಶ್ರೀ ಸ್ವಾಮಿಯ ತೆಪ್ಪೋತ್ಸವ.
ನ.10 ರಂದು ಭಾನುವಾರ ಶ್ರೀ ಸಿದ್ದೇಶ್ವರ ಸ್ವಾಮಿಯ ಬೆಟ್ಟದಲ್ಲಿ ಚಿಕ್ಕ ಜಾತ್ರಾ ಮಹೋತ್ಸವ ನಡೆಸಲಾಗುತ್ತದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
