ಸುದ್ದಿ

ಕಲಾವಿದೆಯ ಅಪರೂಪದ ಪ್ರಯತ್ನ: ದಾರದಲ್ಲಿ ವಿಷ್ಣುದಾದ

ಅಭಿಮಾನಿಗಳು ತಮ್ಮ ಮೆಚ್ಚಿನ ನಟನ ಚಿತ್ರವನ್ನು ಗಾಡಿ ಮೇಲೆ ಹಾಕಿಸಿಕೊಳ್ಳುವುದು, ಹಚ್ಚೆ ಹಾಕಿಸಿಕೊಳ್ಳುವುದು ಸಾಮಾನ್ಯ. ಇಲ್ಲೊಬ್ಬ ಕಲಾವಿದೆ ಸ್ವ ಪ್ರಯತ್ನದಿಂದ ಭಿನ್ನವಾಗಿ ತಮ್ಮ ಮೆಚ್ಚಿನ ನಟನ ಚಿತ್ರವನ್ನು ಬಿಡಿಸಿದ್ದಾಳೆ.

ಚಿತ್ರದುರ್ಗದ ಎಂಜಿನಿಯರಿಂಗ್ ಪದವೀಧರೆ ಐಶ್ವರ್ಯಾ ದಾರದಿಂದ ವಿಷ್ಣುವರ್ಧನ್ ಭಾವ ಚಿತ್ರ ರಚಿಸಿದ್ದಾರೆ. ಕೈಯಲ್ಲಿ ಬರೆದಿರುವಂತೆ ಭಾಸವಾಗುವಷ್ಟು ಚೆನ್ನಾಗಿ ಈ ಯುವತಿ ವಿಷ್ಣುವರ್ಧನ್‌ರ ಭಾವ ಚಿತ್ರ ರಚಿಸಿದ್ದಾರೆ.

ಐಶ್ವರ್ಯ ಅವರು ಬರೋಬ್ಬರಿ 5 ಕಿಲೋ ಮೀಟರ್ ನಷ್ಟು ಉದ್ದದ ದಾರ ಬಳಸಿಕೊಂಡು ಈ ಸಹಾಸ ಮಾಡಿದ್ದಾಳೆ. ಮರದ ಬೋರ್ಡ್‌ನಲ್ಲಿ ಮೊಳೆಗಳನ್ನು ಸುತ್ತಲೂ ಪೇರಿಸಿ ಒಂದಕ್ಕೊಂದು ದಾರಗಳನ್ನು ಕಟ್ಟಿ ಸರಿಸುಮಾರು 15 ಗಂಟೆ ಸಮಯ ತೆಗೆದುಕೊಂಡು ಈ ಸುಂದರವಾದ ಕಲಾಕೃತಿ ರಚಿಸಿ ಗಮನ ಸೆಳೆದಿದ್ದಾರೆ ಐಶ್ವರ್ಯಾ.

ಚಿತ್ರದುರ್ಗದ ಜಯಲಕ್ಷ್ಮಿ ಬಡಾವಣೆಯ ಐಶ್ವರ್ಯಾ ಇದೀಗ ಬೆಂಗಳೂರಿನಲ್ಲಿ ವಾಸವಾಗಿದ್ದು, ಸಣ್ಣ ವಯಸ್ಸಿನಿಂದಲೂ ವಿಷ್ಣುವರ್ಧನ್‌ರ ಅಭಿಮಾನಿ, ಹಾಗಾಗಿ ಅವರ ಹುಟ್ಟುಹಬ್ಬದ ಸಂದರ್ಭಕ್ಕೆಂದು ಹೀಗೆ ವಿನೂತನವಾಗಿ ಕಲಾಕೃತಿಯನ್ನು ರಚಿಸಿದ್ದಾರೆ.

ಒಂದು ಬಿಳಿ ಬಣ್ಣದ ಹಲಗೆಯ ಮೇಲೆ ವೃತ್ತಾಕಾರದಲ್ಲಿ ಸಣ್ಣ ಸಣ್ಣ ಮೊಳೆಗಳನ್ನು ಹೊಡೆದು, ಅದರ ಮೂಲಕ ಒಂದು ಬದಿಯಿಂದ ಮತ್ತೊಂದು ಬದಿಗೆ ಕಪ್ಪುದಾರ ಎಳೆಯುವ ಮೂಲಕ ದಾರದಲ್ಲೇ ವಿಷ್ಣುವರ್ಧನ್ ಮುಖದ ಚಿತ್ರ ಬಿಡಿಸಿ ಗಮನ ಸೆಳೆದರು. ಈ ದಾದಾನ ಕಲಾಕೃತಿಯನ್ನು ವಿಷ್ಣುವರ್ಧನ್ ಅಳಿಯ ಅನಿರುದ್ಧ್ ಅವರಿಗೆ ತಲುಪಿಸಿ ಆಸೆ ಈಡೇರಿಸಿಕೊಂಡಿದ್ದಾಳೆ.

ಪದವೀಧರೆ ಐಶ್ವರ್ಯಾ ದಾರದ ಮೂಲಕ ವಿಷ್ಣುದಾದ ಭಾವಚಿತ್ರ ಮೂಡಿಸಿರುವ ಈ ವಿಶಿಷ್ಟ ಕಲೆಗೆ ಸ್ಟ್ರಿಂಗ್ ಆರ್ಟ್ ಎಂದು ಕರೆಯುತ್ತಾರೆ. ಸಾಮಾಜಿಕ ಜಾಲತಾಣಗಳಲ್ಲಿ ನೋಡುತ್ತಿದ್ದಾಗ ಐಶ್ವರ್ಯಾ ಅವರಿಗೆ ಈ ಕಲೆ ಪರಿಚಯವಾಗಿದೆ. ನಾನು ಯಾಕೆ ಇದನ್ನು ಕಲಿಯಬಾರದು ಎಂದುಕೊಂಡಿದ್ದರು. ನಾನು ಒಂದು ಕೈ ನೋಡೇ ಬಿಡೋಣ ಎಂದು ಯೂಟ್ಯೂಬ್ ಹುಡುಕಾಟದಲ್ಲಿ ತೊಡಗಿದ್ದಾರೆ. ಆದರೆ ಸರಿಯಾದ ಮಾಹಿತಿ ಸಿಗದಿದ್ದಾಗ ಪುಸ್ತಕಗಳ ಮೊರೆ ಹೋಗಿದ್ದಾರೆ. ಒಂದು ವರ್ಷದಿಂದ ಅಭ್ಯಾಸ ಮಾಡಿ, ಮೊದಲನೇ ಕಲಾಕೃತಿಯಾಗಿ ವಿಷ್ಣುವರ್ಧನ್ ಅವರ ಭಾವಚಿತ್ರ ರಚಿಸಿದ್ದಾರೆ. ಈಗ ಈ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಕತ್ ವೈರಲ್ ಆಗಿದೆ.ಓದಿದ್ದು ಇಂಜಿನಿಯರಿಂಗ್ ಆದರೂ, ಕಲೆಗಳಲ್ಲಿ ಮೊದಲಿಂದಲೂ ಆಸಕ್ತಿ ಇತ್ತು. ಏನೇ ಹೊಸತು ಕಂಡರೂ ಕಲಿಯುವ ಹವ್ಯಾಸ. ಯಾವುದೇ ಕಲೆಯನ್ನು ಮೊದಲು ರಚನೆ ಮಾಡುವುದು ನನ್ನ ಇಷ್ಟದ ಹೀರೋ ವಿಷ್ಣುವರ್ಧನ್ ಅವರ ಮೇಲೆ. ದಾರದ ಆರ್ಟ್ ಕೂಡಾ ಅವರಿಗಾಗಿ, ನನ್ನ ಕಲೆಯನ್ನು ಬೆಂಬಲಿಸಿ, ಪ್ರೋತ್ಸಾಹಿಸಿದ ಎಲ್ಲರಿಗೂ ಧನ್ಯವಾದಗಳು ಎನ್ನುತ್ತಾರೆ ಕಲಾವಿದೆ ಜಿ.ಜಿ. ಐಶ್ವರ್ಯಾ. ಇನ್ನು ಮುಂದೆ ಈ ಕಲೆಯಲ್ಲಿ ಇನ್ನಷ್ಟು ಪರಿಣಿತಿ ಪಡೆದು ಇನ್ನೂ ಹಲವು ಕಲಾವಿದರ ಚಿತ್ರಗಳನ್ನು ಮೂಡಿಸುವುದಾಗಿ ಐಶ್ವರ್ಯಾ ಹೇಳಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button