ನವದೆಹಲಿ: ಕಾಂಗ್ರೆಸ್ ನಾಯಕ, ವಯನಾಡ್ ಸಂಸದ ರಾಹುಲ್ ಗಾಂಧಿ ಗೊಂದಕ್ಕೀಡಾಗಿರುವ, ತಲೆಯಿಲ್ಲದ ನಾಯಕ ಎಂದು ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಜರಿದಿದ್ದಾರೆ. ಅವರೇನು ರಾಹುಲ್ ಗಾಂಧಿ ಭಾರತ ಒಂದು ರಾಷ್ಟ್ರ ಅಲ್ಲ ಅಂತಾರೆ! ಚೀನಾ ದೃಷ್ಟಿಕೋನ ಸ್ಪಷ್ಟವಾಗಿದೆ ಎಂದು ನಮ್ಮ ವಿರೋಧಿ ರಾಷ್ಟ್ರವನ್ನು ಹಾಡಿಹೊಗಳುತ್ತಾರೆ! ಅವರೇನು ಚೀನಾವನ್ನು ಬೆಂಬಲಿಸಲು ಸಂಸತ್ತಿಗೆ ಬಂದಿದ್ದಾರಾ ಎಂದು ಸಚಿವ ಪ್ರಲ್ಹಾದ್ ಜೋಶಿ ವಯನಾಡ್ ಸಂಸದ ರಾಹುಲ್ ಗಾಂಧಿಯನ್ನು ಸಂಸತ್ತಿನಲ್ಲಿಯೇ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.
ಚೀನಾ ತುಂಬಾ ಸ್ಪಷ್ಟ ದೃಷ್ಟಿಕೋನ ಹೊಂದಿದೆ. ಭಾರತದ ವಿದೇಶಾಂಗ ನೀತಿಯ ಏಕೈಕ ಆಯಕಟ್ಟಿನ ಗುರಿ ಏನಾಗಿರಬೇಕಿತ್ತು ಅಂದರೆ ಪಾಕಿಸ್ತಾನ ಮತ್ತು ಚೀನಾ ಪ್ರತ್ಯೇಕವಾಗಿರುವಂತೆ ನೋಡಿಕೊಳ್ಳುವುದಾಗಬೇಕಿತ್ತು. ಆದರೆ ನೀವು ಮಾಡಿದ್ದಾದರೂ ಏನು? ಅವರಿಬ್ಬರನ್ನೂ ಹತ್ತಿರ ಹತ್ತಿರಕ್ಕೆ ತಂದಿರಿ ಎಂದು ವಯನಾಡ್ ಸಂಸದ ರಾಹುಲ್ ಗಾಂಧಿ ಅವರು ಕೇಂದ್ರ ಬಜೆಟ್ ಮೇಲಿನ ಭಾಷಣದಲ್ಲಿ ಲೇವಡಿ ಮಾಡಿದ್ದರು.
ಪಾಕಿಸ್ತಾನ ಮತ್ತು ಚೀನಾವನ್ನು ಒಟ್ಟಿಗೆ ತಂದ ವಿದೇಶಾಂಗ ನೀತಿಯಲ್ಲಿ ಪ್ರಸ್ತುತ ಸರ್ಕಾರ ಮೂಲಭೂತ ತಪ್ಪು ಮಾಡಿದೆ ಎಂದು ಬಿಜೆಪಿ ಸರ್ಕಾರದ ವಿರುದ್ಧ ರಾಹುಲ್ ವಾಗ್ದಾಳಿ ನಡೆಸಿದ್ದರು. ಚೀನಾದವರು ಡೋಕ್ಲಾಮ್ ಮತ್ತು ಲಡಾಖ್ ಬಗ್ಗೆ ಸ್ಪಷ್ಟ ಯೋಜನೆ ಹೊಂದಿದೆ. ಇದು ಭಾರತಕ್ಕೆ ಗಂಭೀರ ಅಪಾಯ ತರಬಲ್ಲದು. ಹಾಗಾಗಿ ನಮ್ಮ ವಿದೇಶಾಂಗ ನೀತಿಯಲ್ಲಿ ನಾವು ದೊಡ್ಡ ಕಾರ್ಯತಂತ್ರ ತಪ್ಪು ಮಾಡಿದ್ದೇವೆ ಎಂದು ರಾಹುಲ್ ಲೋಕಸಭೆಯಲ್ಲಿ ಜರಿದಿದ್ದರು.
ಇನ್ನು ಈ ಬಾರಿಯ ಗಣರಾಜ್ಯೋತ್ಸವಕ್ಕೆ ಭಾರತವು ಗಣ್ಯ ಅತಿಥಿಯನ್ನು ಹೊಂದುವಲ್ಲಿ ವಿಫಲವಾಗಿದೆ. ಅದು ಯಾಕೆ ಎಂಬುದನ್ನು ನಿಮಗೆ ನೀವೇ ಕೇಳಿಕೊಳ್ಳಿ. ಭಾರತ ಇಂದು ಒಂದು ದ್ವೀಪದಂತೆ ಪ್ರತ್ಯೇಕಗೊಂಡಿದೆ. ಸುತ್ತಲೂ ವೈರಿಗಳಿಂದ ಸುತ್ತುವರಿದಿದೆ. ಇದು ನಮ್ಮ ವೈರಿಗಳಿಗೆ ಚೆನ್ನಾಗಿ ಗೊತ್ತಿದೆ ಎಂದು 51 ವರ್ಷದ ರಾಹುಲ್ ಗಾಂಧಿ ತಮ್ಮ 45 ನಿಮಿಷಗಳ ಭಾಷಣದಲ್ಲಿ ವ್ಯಾಖ್ಯಾನಿಸಿದ್ದರು.
ಇದಕ್ಕೆ ಉತ್ತರಿಸಿದ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಅವರು ರಾಹುಲ್ ಗಾಂಧಿಗೆ ನೆನಪಿನ ಶಕ್ತಿ ಹೋಗಿದೆ ಅನ್ನಿಸುತ್ತದೆ. ಭಾರತವಷ್ಟೇ ಅಲ್ಲ; ಇಡೀ ಜಗತ್ತು ಕೊರೊನಾ ಸೋಂಕಿನಿಂದ ಸುತ್ತುವರಿದಿದೆ. ಹಾಗಾಗಿ ಆಯಾ ರಾಷ್ಟ್ರಗಳು ದ್ವೀಪದಂತೆ ಪ್ರತ್ಯೇಕಗೊಂಡಿವೆ. ಹಾಗಾಗಿ ಕೊರೊನಾ ಕಾರಣದಿಂದ ಕಳೆದ ಎರಡು ವರ್ಷಗಳಿಂದ ಗಣರಾಜ್ಯೋತ್ಸವಕ್ಕೆ ಯಾವುದೇ ಅತಿಥಿಯನ್ನು ಭಾರತ ಆಹ್ವಾನಿಸಿಲ್ಲ ಎಂದು ಪ್ರತ್ಯುತ್ತರ ನೀಡಿದ್ದಾರೆ.