ಬೆಂಗಳೂರು: ಕೇಂದ್ರ ಬಜೆಟ್ ಮೇಲೆ ಯಾವುದೇ ನಿರೀಕ್ಷೆ ಇಲ್ಲವೆಂದು ನಿನ್ನೆಯೇ ಹೇಳಿದ್ದೆ. ನನ್ನ ಮಾತು ಇಂದು ಸತ್ಯವಾಗಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ವ್ಯಂಗ್ಯವಾಡಿದರು.
ಆತ್ಮನಿರ್ಭರ ಯೋಜನೆಯಡಿ ಮೂರು ಪ್ಯಾಕೇಜ್ ಘೋಷಿಸಿದ್ದರು. ಆದರೆ ಸರ್ಕಾರ ಇಂದು ಆತ್ಮಬರ್ಬರ ಬಜೆಟ್ ಘೋಷಿಸಿದೆ. ಲಾಕ್ಡೌನ್ ವೇಳೆ ಮುಚ್ಚಿಹೋಗಿದ್ದ ಹಲವು ಕೈಗಾರಿಕೆಗಳನ್ನು ಪುನರಾರಂಭಿಸಲು ಒತ್ತು ನೀಡಿಲ್ಲ. ವಿದ್ಯುತ್ ಕ್ಷೇತ್ರ ಖಾಸಗೀಕರಣ ಮಾಡಲು ಹೊರಟಿದ್ದಾರೆ. ವಿದ್ಯುತ್ ಕ್ಷೇತ್ರ ಖಾಸಗೀಕರಣವಾದ್ರೆ ರೈತರಿಗೆ ಅನಾನುಕೂಲವಾಗಿದೆ ಎಂದು ಅವರು ಪ್ರತಿಕ್ರಿಯೆ ನೀಡಿದರು.
ಕೃಷಿ ಸೆಸ್ ಬಗ್ಗೆ ಪ್ರಸ್ತಾಪಿಸಿದ ವಿಪಕ್ಷ ನಾಯಕ ಶೇ 2.5ರಿಂದ ಶೇ 100ವರೆವರೆಗೆ ಕೃಷಿ ಸೆಸ್ ಬದಲಾಯಿಸಿದ್ದಾರೆ. ಬೆಲೆ, ಯಂತ್ರೋಪಕರಣಗಳ ಮೇಲೆ ಕೃಷಿ ಸೆಸ್ ಹಾಕಿದ್ದಾರೆ. ಇದು ಎಂತಹ ಅರ್ಥ ವ್ಯವಸ್ಥೆ ಎಂದು ಗೊತ್ತಾಗುತ್ತಿಲ್ಲ. ಇದರ ಬದಲು ರೈತರಿಗೆ ಬಡ್ಡಿ ರಹಿತವಾಗಿ ಸಾಲ ನೀಡಬಹುದಿತ್ತು. ಕೇಂದ್ರ ಸರ್ಕಾರ ಒಂದು ರೂಪಾಯಿಯ ಸಾಲಮನ್ನಾ ಮಾಡಿಲ್ಲ. ರೈತರ ಅಭಿವೃದ್ಧಿಗೆ ಹೊಸ ಯೋಜನೆ ಘೋಷಿಸಿಲ್ಲ ಎಂದು ಅವರು ಟೀಕಿಸಿದರು.