ಭಾರತದಲ್ಲಿ ಕೊರೋನಾ 3ನೇ ಅಲೆ! ತಜ್ಞರು ಹೇಳುವುದೇನು?
ನವದೆಹಲಿ(ಜ.24): ಸದ್ಯ ಭಾರತ(India) ಮಾತ್ರವಲ್ಲದೇ ವಿಶ್ವದೆಲ್ಲೆಡೆ ತನ್ನ ಆರ್ಭಟ ತೋರಿಸುತ್ತಿರುವ ಕೋವಿಡ್-19(COVID-19) ಸೋಂಕು ಮುಂದಿನ 14 ದಿನಗಳಲ್ಲಿ ಗರಿಷ್ಠ ಮಟ್ಟ ತಲುಪಲಿದೆ ಎಂದು ಐಐಟಿ ಮದ್ರಾಸ್‌ನ(IIT Madras) ಪ್ರಾಥಮಿಕ ವಿಶ್ಲೇಷಣೆ ಮಾಹಿತಿ ನೀಡಿದೆ.
ಕೊರೋನಾ 3ನೇ ಅಲೆ(Corona 3rd Wave) ಫೆಬ್ರವರಿ 6 ರೊಳಗೆ ಗರಿಷ್ಠ ಮಟ್ಟಕ್ಕೆ ಏರಿಕೆಯಾಗುವ ನಿರೀಕ್ಷೆಯಿದೆ. COVID-19 ಎಷ್ಟು ವೇಗವಾಗಿ ಹರಡುತ್ತಿದೆ ಎಂಬುದನ್ನು ಸೂಚಿಸುವ ಭಾರತದ R- ಮೌಲ್ಯವು ಜನವರಿ 14 ರಿಂದ 21ನೇ ವಾರದಲ್ಲಿ 1.57 ಕ್ಕೆ ಮತ್ತಷ್ಟು ಕಡಿಮೆಯಾಗಿದೆ ಎಂದು ಅಧ್ಯಯನವು ಹೇಳಿದೆ. ಆರ್-ಮೌಲ್ಯವು ಸೋಂಕಿತ ವ್ಯಕ್ತಿಯು ವೈರಸ್ ಅನ್ನು ಹರಡುವ ಜನರ ಸಂಖ್ಯೆಯನ್ನು ಸೂಚಿಸುತ್ತದೆ.
ಆರ್-ಮೌಲ್ಯವು ಜನವರಿ 14 ಮತ್ತು ಜನವರಿ 21 ರ ನಡುವೆ 1.57 ಕ್ಕೆ ದಾಖಲಾಗಿದ್ದರೆ, ಜನವರಿ 7-13 ರ ವಾರದಲ್ಲಿ 2.2 ಮತ್ತು ಜನವರಿ 1-6 ರಿಂದ 4 ಮತ್ತು ಕಳೆದ ವರ್ಷ ಡಿಸೆಂಬರ್ 25- 31 ರಿಂದ 2.9 ಕ್ಕೆ ದಾಖಲಾಗಿದೆ ಎಂದು ಪಿಟಿಐ ವರದಿ ಮಾಡಿದೆ.
ಚೆನ್ನೈನ ಆರ್-ಮೌಲ್ಯವು 1.2, ಮುಂಬೈ 0.67, ದೆಹಲಿ 0.98 ಮತ್ತು ಕೋಲ್ಕತ್ತಾ 0.56 ರಷ್ಟಿದೆ ಎಂದು ಡೇಟಾ ತೋರಿಸಿದೆ. ಈ ಮೌಲ್ಯವು 1 ಕ್ಕಿಂತ ಕಡಿಮೆಯಾದರೆ, ಸಾಂಕ್ರಾಮಿಕ ರೋಗವು ಕೊನೆಗೊಂಡಿದೆ ಎಂದು ಪರಿಗಣಿಸಲಾಗುತ್ತದೆ.
ಮುಂಬೈ ಮತ್ತು ಕೋಲ್ಕತ್ತಾದ ಆರ್-ಮೌಲ್ಯವು ಅಲ್ಲಿ ಗರಿಷ್ಠ ಮಿತಿಯನ್ನು ಮೀರಿದೆ ಎಂದು ಸೂಚಿಸುತ್ತದೆ. ಆದರೆ ದೆಹಲಿ ಮತ್ತು ಚೆನ್ನೈಗೆ ಇದು ಇನ್ನೂ 1 ರ ಸಮೀಪದಲ್ಲಿದೆ ಎಂದು ಐಐಟಿ ಮದ್ರಾಸ್‌ನ ಗಣಿತಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಜಯಂತ್ ಝಾ ಹೇಳಿದ್ದಾರೆ. ಅವರ ವಿಶ್ಲೇಷಣೆಯ ಪ್ರಕಾರ, ಫೆಬ್ರವರಿ 6 ರವರೆಗೆ ಮುಂದಿನ 14 ದಿನಗಳಲ್ಲಿ ಕೊರೋನಾ ವೈರಸ್ ಗರಿಷ್ಠ ಮಟ್ಟ ತಲುಪುವ ಸಾಧ್ಯತೆಯಿದೆ ಎಂದು ಝಾ ಹೇಳಿದ್ದಾರೆ.
ಐಐಟಿ ಮದ್ರಾಸ್‌ನ ಗಣಿತಶಾಸ್ತ್ರ ವಿಭಾಗ ಮತ್ತು ಕಂಪ್ಯೂಟೇಶನಲ್ ಗಣಿತ ಮತ್ತು ದತ್ತಾಂಶ ವಿಜ್ಞಾನದ ಕೇಂದ್ರವು ಪ್ರೊ.ನೀಲೇಶ್ ಎಸ್ ಉಪಾಧ್ಯೆ ಮತ್ತು ಪ್ರೊ.ಎಸ್ ಸುಂದರ್ ಅವರ ನೇತೃತ್ವದಲ್ಲಿ ಕಂಪ್ಯೂಟೇಶನಲ್ ಮಾಡೆಲಿಂಗ್ ಮೂಲಕ ಪ್ರಾಥಮಿಕ ಅಧ್ಯಯನವನ್ನು ನಡೆಸಿತು.