ಎಲ್ಲಾ ರಾಜ್ಯಗಳ ಸಿಎಂಗಳ ಜೊತೆ ಜನವರಿ 13 ರಂದು ಪ್ರಧಾನಿ ಮೋದಿ ಸಭೆ.
ಕೋವಿಡ್ ಮತ್ತು ಓಮೈಕ್ರಾನ್ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈಗಾಗಲೇ ಮೊನ್ನೆ (ಜನವರಿ 9) ಪ್ರಧಾನ ಮಂತ್ರಿ ನರೇಂದ್ರ ಮೋದಿ ಪ್ರಗತಿ ಪರಿಶೀಲನಾ ಸಭೆ ನಡೆಸಿದ್ದಾರೆ. ಆ ಮಹತ್ವದ ಸಭೆಯಲ್ಲಿ ಕೇಂದ್ರ ಗೃಹ ಮಂತ್ರಿ ಅಮಿತ್ ಶಾ, ಕೇಂದ್ರ ಆರೋಗ್ಯ ಸಚಿವ ಮುನ್ಸುಖ್ ಭಾಯ್ ಮಾಂಡೋವಿಯಾ, ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ರಾಜ್ಯ ಖಾತೆ ಸಚಿವೆ ಭಾರತಿ ಪ್ರವೀಣ್ ಪವಾರ್, ನೀತಿ ಆಯೋಗದ ಆರೋಗ್ಯ ವಿಭಾಗದ ಸದಸ್ಯ ಡಾ. ವಿ ಕೆ ಪಾಲ್, ಕೇಂದ್ರ ಆರೋಗ್ಯ ಇಲಾಖೆ ಕಾರ್ಯದರ್ಶಿ ರಾಜೀವ್ ಗೌಬಾ, ಸಂಪುಟ ಕಾರ್ಯದರ್ಶಿ, ಅಜಯ್ ಭಲ್ಲಾ, ಗೃಹ ಕಾರ್ಯದರ್ಶಿ, ರಾಜೇಶ್ ಭೂಷಣ್, ಔಷಧೀಯ ಇಲಾಖೆ ಕಾರ್ಯದರ್ಶಿ ರಾಜೇಶ್ ಗೋಖಲೆ, ಜೈವಿಕ ತಂತ್ರಜ್ಞಾನ ಇಲಾಖೆ ಕಾರ್ಯದರ್ಶಿ ಡಾ. ಬಲರಾಮ್ ಭಾರ್ಗವ, ಐಸಿಎಂಆರ್ ಡಿಜಿ ಆರ್.ಎಸ್. ಶರ್ಮಾ ಮತ್ತಿತರ ಹಿರಿಯ ಅಧಿಕಾರಿಗಳು ಭಾಗಿಯಾಗಿದ್ದರು. ಇದರ ಬೆನ್ನಲ್ಲೇ ನಿನ್ನೆ (ಜನವರಿ 10ರಂದು) ಆರೋಗ್ಯ ಸಚಿವ ಮುನ್ಸುಖ್ ಭಾಯ್ ಮಾಂಡೋವಿಯಾ ಎಲ್ಲಾ ರಾಜ್ಯಗಳ ಆರೋಗ್ಯ ಸಚಿವರ ಜೊತೆ ಸಭೆ ನಡೆಸಿದ್ದಾರೆ. ಇದೀಗ ಜನವರಿ 13ರಂದು ಪ್ರಧಾನಿ ಮೋದಿ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ಕರೆದಿದ್ದಾರೆ.
ರಾಜ್ಯಗಳಿಂದ ಮಾಹಿತಿ ಸಂಗ್ರಹ
ಜನವರಿ 13ರಂದು ಸಂಜೆ 4 ಗಂಟೆಗೆ ನಡೆಯುವ ಮುಖ್ಯಮಂತ್ರಿಗಳ ಸಭೆಯಲ್ಲಿ ಕೊರೋನಾ ಸೋಂಕು ಯಾವ್ಯಾವ ರಾಜ್ಯಗಳಲ್ಲಿ ಯಾವ ಪ್ರಮಾಣದಲ್ಲಿದೆ? ಸೋಂಕು ತಡೆಯಲು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳಿಂದ ಏನೇನು ಕ್ರಮಗಳನ್ನು ಕೈಗೊಳ್ಳಲಾಗಿದೆ? ದಿನದ ಮತ್ತು ವಾರದ ಪಾಸಿಟಿವ್ ರೇಟ್ ಹೇಗಿದೆ? ಸೋಂಕಿನಿಂದ ಸಾಯುವವರ ಪ್ರಮಾಣ ಹೇಗಿದೆ? ಕೊರೋನಾ ಅಲ್ಲದೆ ಓಮೈಕ್ರಾನ್ ಸೋಂಕು ಹರಡುವಿಕೆ ಪ್ರಮಾಣ ಹೇಗಿದೆ? ಕೊರೋನಾ ಮತ್ತು ಓಮೈಕ್ರಾನ್ ಸೋಂಕು ಹರಡುವಿಕೆ ತಡೆಯಲು ಮುಂದೆ ಕೈಗೊಳ್ಳಬೇಕಾದ ಅಗತ್ಯ ಕ್ರಮಗಳು ಯಾವುವು ಎಂಬ ವಿಷಯಗಳ ಬಗ್ಗೆ ಸಮಗ್ರವಾದ ಸಮಾಲೋಚನೆ ನಡೆಯಲಿದೆ. ಇದೇ ವೇಳೆ ಮುಖ್ಯಮಂತ್ರಿಗಳಿಂದ ರಾಜ್ಯಗಳ ಪರಿಸ್ಥಿತಿ ಮತ್ತು ಅವು ಕೈಗೊಂಡಿರುವ ಕ್ರಮಗಳ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತದೆ ಎಂದು ತಿಳಿದುಬಂದಿದೆ.
ಅಧಿಕಾರಿಗಳ ಸಭೆಯಲ್ಲಿ ಕ್ರಮಕ್ಕೆ ಸೂಚನೆ
ಜನವರಿ 9ರಂದು ನಡೆದ ಪ್ರಗತಿ ಪರಿಶೀಲನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಜಿಲ್ಲಾ ಮಟ್ಟದಲ್ಲಿ ಆರೋಗ್ಯ ಮೂಲಸೌಕರ್ಯಗಳನ್ನು ಹೆಚ್ಚಿಸಬೇಕು. ಮಿಷನ್ ಮೋಡ್‌ನಲ್ಲಿ ವ್ಯಾಕ್ಸಿನೇಷನ್ ಅಭಿಯಾನ ಮಾಡಬೇಕು. ಜೀನೋಮ್ ಸೀಕ್ವೆನ್ಸಿಂಗ್ ಮತ್ತು ಕೋವಿಡ್ ಪರೀಕ್ಷೆಗಳನ್ನು ಹೆಚ್ಚಿಸಬೇಕು. ಔಷಧೀಯ ವಿಚಾರದಲ್ಲಿ ನಿರಂತರವಾದ ವೈಜ್ಞಾನಿಕ ಸಂಶೋಧನೆಗಳನ್ನು ನಡೆಸುವುದು ಅಗತ್ಯವಾಗಿದೆ. ಕೋವಿಡ್ ಹೊರತಾದ ಆರೋಗ್ಯ ಸೇವೆಗಳನ್ನು ನೀಡುವ ಬಗ್ಗೆಯೂ ಗಮನವಿಡಬೇಕು. ಗ್ರಾಮೀಣ ಪ್ರದೇಶಗಳಲ್ಲಿ ಕೊರೋನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಬಗ್ಗೆ ಜಾಗೃತಿ ಮೂಡಿಸಬೇಕು. ಟೆಲಿಮೆಡಿಸಿನ್ ವ್ಯವಸ್ಥೆ ಮೂಲಕ ಎಲ್ಲೆಡೆ ಕೋವಿಡ್ ಪರಿಸ್ಥಿತಿಯನ್ನು ನಿರ್ವಹಣೆ ಮಾಡಬೇಕು ಎಂದು ಸೂಚನೆ ನೀಡಿದ್ದಾರೆ.
ತುರ್ತು ಕೋವಿಡ್ ರೆಸ್ಪಾನ್ಸ್ ಪ್ಯಾಕೇಜ್ (ECRP-II) ಅಡಿಯಲ್ಲಿ ಆರೋಗ್ಯ ಮೂಲಸೌಕರ್ಯ, ಪರೀಕ್ಷಾ ಸಾಮರ್ಥ್ಯ, ಆಮ್ಲಜನಕ ಮತ್ತು ICU ಹಾಸಿಗೆಗಳ ಲಭ್ಯತೆ ಮತ್ತು ಕೋವಿಡ್ ಅಗತ್ಯ ಔಷಧಗಳ ಬಫರ್ ಸ್ಟಾಕ್ ಅನ್ನು ಹೆಚ್ಚಿಸಲು ರಾಜ್ಯಗಳಿಗೆ ಸಹಕಾರ ನೀಡಲಾಗುವುದು. ಈ ನಿಟ್ಟಿನಲ್ಲಿ ರಾಜ್ಯಗಳೊಂದಿಗೆ ಸಮನ್ವಯತೆ ಕಾಯ್ದುಕೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಸಿಎಂಗಳ ಜೊತೆಗಿನ ಸಭೆಯ ಸುಳಿವು ನೀಡಿದ್ದ ಮೋದಿ
ಹೆಚ್ಚುತ್ತಿರುವ ಕೋವಿಡ್ -19 ಮತ್ತು ಓಮೈಕ್ರಾನ್ ಸೋಂಕು ತಡೆಗೆ ರಾಜ್ಯ ಸರ್ಕಾರಗಳ ಪಾತ್ರ ಏನಿರಬೇಕು? ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಮನ್ವಯ ಹೇಗಿರಬೇಕು ಎಂಬ ವಿಷಯಗಳೂ ಸೇರಿದಂತೆ ಕೆಲವು ನಿರ್ದಿಷ್ಟ ವಿಷಯಗಳ ಬಗ್ಗೆ ಚರ್ಚೆ ಮಾಡಲು ಶೀಘ್ರವೇ ಎಲ್ಲಾ ರಾಜ್ಯಗಳ ಮತ್ತು ಕೇಂದ್ರಾಡಳಿತ ಪ್ರದೇಶಗಳ ಮುಖ್ಯಮಂತ್ರಿಗಳ ಸಭೆ ಕರೆಯಲಾಗುವುದು ಎಂದು ಅಂದೇ ಪ್ರಧಾನಿ ನರೇಂದ್ರ ಮೋದಿ ಸುಳಿವು ನೀಡಿದ್ದರು.