ಸುದ್ದಿ

ರಾಜ್ಯ ಒಕ್ಕಲಿಗರ ಸಂಘದ ನೂತನ ಅಧ್ಯಕ್ಷರಾಗಿ ಸಿ. ಎನ್. ಬಾಲಕೃಷ್ಣ ಆಯ್ಕೆ

ಬೆಂಗಳೂರು, ಜನವರಿ 06; ಭಾರೀ ಕುತೂಹಲಕ್ಕೆ ಕಾರಣವಾಗಿದ್ದ ರಾಜ್ಯ ಒಕ್ಕಲಿಗರ ಸಂಘಕ್ಕೆ ನೂತನ ಅಧ್ಯಕ್ಷರ ಆಯ್ಕೆಯಾಗಿದೆ. ಶ್ರವಣಬೆಳಗೊಳ ಕ್ಷೇತ್ರದ ಜೆಡಿಎಸ್ ಶಾಸಕ ಸಿ. ಎನ್. ಬಾಲಕೃಷ್ಣ ನೂತನ ಅಧ್ಯಕ್ಷರಾಗಿದ್ದಾರೆ.ರಾಜ್ಯ ಒಕ್ಕಲಿಗರ ಸಂಘದ ಕಾರ್ಯಕಾರಿ ಸಮಿತಿಗೆ 2021ರ ಡಿಸೆಂಬರ್ 12ರಂದು ಚುನಾವಣೆ ನಡೆದಿತ್ತು. ಒಟ್ಟು 35 ನಿರ್ದೇಶಕರು ಆಯ್ಕೆಗೊಂಡಿದ್ದರು. ಬುಧವಾರ ಅಧ್ಯಕ್ಷರ ಆಯ್ಕೆಗೆ ನಡೆದ ಚುನಾವಣೆಯಲ್ಲಿ 34 ನಿರ್ದೇಶಕರು ಪಾಲ್ಗೊಂಡಿದ್ದರು.

ಅಧ್ಯಕ್ಷ ಸ್ಥಾನಕ್ಕೆ ತೀವ್ರ ಪೈಪೋಟಿ ನಡೆದಿತ್ತು. ಆದ್ದರಿಂದ ಚುನಾವಣೆ ಕುತೂಹಲಕ್ಕೆ ಕಾರಣವಾಗಿತ್ತು. ಬಿ. ಕೆಂಚಪ್ಪ ಗೌಡ ಮತ್ತು ಸಿ. ಎನ್. ಬಾಲಕೃಷ್ಣ ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳಾಗಿದ್ದರು. ಚುನಾವಣೆ ನಡೆಸಿ 30 ತಿಂಗಳ ಅವಧಿಗೆ ಬುಧವಾರ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ.

ಅಧ್ಯಕ್ಷರ ಆಯ್ಕೆ ಚುನಾವಣೆಯಲ್ಲಿ ಬಿ. ಕೆಂಚಪ್ಪ ಗೌಡ 14 ಮತಗಳು ಮತ್ತು ಸಿ. ಎನ್. ಬಾಲಕೃಷ್ಣ 20 ಮತಗಳನ್ನು ಪಡೆದರು. ಈ ಮೂಲಕ ಸಿ. ಎನ್. ಬಾಲಕೃಷ್ಣ ಅಧ್ಯಕ್ಷರಾಗಿ ಆಯ್ಕೆಯಾದರು. ಸಿ. ಎನ್. ಬಾಲಕೃಷ್ಣ ಹಾಸನ ಜಿಲ್ಲೆಯ ಶ್ರವಣಬೆಳಗೊಳ ಕ್ಷೇತ್ರದ ಜೆಡಿಎಸ್ ಶಾಸಕರು.

ಪದಾಧಿಕಾರಿಗಳ ಪಟ್ಟಿ; ರಾಜ್ಯ ಒಕ್ಕಲಿಗರ ಸಂಘದ ಪದಾಧಿಕಾರಿಗಳನ್ನು ಸಹ ನೇಮಕ ಮಾಡಲಾಗಿದೆ. ಪ್ರಧಾನ ಕಾರ್ಯದರ್ಶಿಯಾಗಿ ಟಿ. ಕೋನಪ್ಪ ರೆಡ್ಡಿ, ಸಹಾಯಕ ಕಾರ್ಯದರ್ಶಿಯಾಗಿ ರಾಘವೇಂದ್ರ, ಖಜಾಂಚಿಯಾಗಿ ಆರ್. ಪ್ರಕಾಶ್ ಆಯ್ಕೆಯಾದರು.

ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಎಚ್. ಎನ್. ಅಶೋಕ್, ಸಹಾಯಕ ಕಾರ್ಯದರ್ಶಿ ಹುದ್ದೆಗೆ ಎಂ. ಬಿ. ಮಂಜೇಗೌಡ, ಖಜಾಂಚಿ ಹುದ್ದೆಗೆ ಅಶೋಕ್ ಎಸ್. ಡಿ. ಕಣದಲ್ಲಿದ್ದರು.

ಹೈಕೋರ್ಟ್ ಆದೇಶದಂತೆ ಚುನಾವಣೆ; ಮೂರು ವರ್ಷದಿಂದ ರಾಜ್ಯ ಒಕ್ಕಲಿಗರ ಸಂಘದಕ್ಕೆ ಅಧ್ಯಕ್ಷರು ಇರಲಿಲ್ಲ. ಆಡಳಿತಾಧಿಕಾರಿಯ ಉಸ್ತುವಾರಿಯಲ್ಲಿ ಸಂಘದ ಆಡಳಿತ ನಡೆಯುತ್ತಿತ್ತು. ಸಂಘಕ್ಕೆ ಚುನಾವಣೆ ನಡೆಸಬೇಕು ಎಂದು ಕರ್ನಾಟಕ ಹೈಕೋರ್ಟ್‌ಗೆ ಅರ್ಜಿ ಸಲ್ಲಿಕೆಯಾಗಿತ್ತು. ಹೈಕೋರ್ಟ್ ಆದೇಶದಂತೆ ಡಿಸೆಂಬರ್‌ನಲ್ಲಿ ಚುನಾವಣೆ ನಡೆದಿತ್ತು.

ರಾಜ್ಯ ಒಕ್ಕಲಿಗರ ಸಂಘದಲ್ಲಿ 5.21 ಲಕ್ಷ ಸದಸ್ಯರಿದ್ದಾರೆ. ಬೆಂಗಳೂರು ಮಹಾನಗರ ಸೇರಿ ಮೂರು ಜಿಲ್ಲೆಗಳಲ್ಲಿ 15 ಸ್ಥಾನಗಳಿಗೆ 1.92 ಲಕ್ಷ ಜನರು ಮತದಾನ ಮಾಡಿದ್ದರು. ಉಳಿದ 20 ಸ್ಥಾನಗಳಿಗೆ ಇತರ ಜಿಲ್ಲೆಗಳಿಂದ ಆಯ್ಕೆ ನಡೆದಿತ್ತು.

ಮತ್ತೆ ಹೈಕೋರ್ಟ್‌ಗೆ ಅರ್ಜಿ; ರಾಜ್ಯ ಒಕ್ಕಲಿಗರ ಸಂಘಕ್ಕೆ ಡಿಸೆಂಬರ್ 12ರಂದು ನಡೆದ ಚುನಾವಣೆಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪವಿದೆ. ಚಲಾವಣೆಗೊಂಡಿರುವ ಎಲ್ಲಾ ಮತಗಳನ್ನು ಮರು ಎಣಿಕೆ ಮಾಡಬೇಕು ಎಂದು ಕರ್ನಾಟಕ ಹೈಕೋರ್ಟ್‌ಗೆ ತರಕಾರು ಅರ್ಜಿ ಸಲ್ಲಿಕೆಯಾಗಿದೆ.

ಹೆಸರಘಟ್ಟ ಹೋಬಳಿ ಕಡತನಮಲೆ ಗ್ರಾಮದ ಕೆ. ಆರ್. ಸತೀಶ್ ಸೇರಿದಂತೆ ಚುನಾವಣೆಗೆ ಸ್ಪರ್ಧಿಸಿದ್ದ ಮೂವರು ತರಕಾರು ಅರ್ಜಿಯನ್ನು ಸಲ್ಲಿಕೆ ಮಾಡಿದ್ದಾರೆ. ಅರ್ಜಿ ವಿಚಾರಣೆ ನಡೆಸಿರುವ ಕೋರ್ಟ್ ಸಂಘದ ಆಡಳಿತಾಧಿಕಾರಿ ಮತ್ತು ಚುನಾವಣಾಧಿಕಾರಿಗೆ ನೋಟಿಸ್ ನೀಡಿದೆ.

ಚುನಾವಣೆಯಲ್ಲಿ ಒಟ್ಟು 1,40,704 ಮತಗಳು ಚಲಾವಣೆಗೊಂಡಿದ್ದವು. ಡಿಸೆಂಬರ್ 15ರಂದು ಮತ ಎಣಿಕೆ ನಡೆದಿತ್ತು. ಎಣಿಕೆಗೆ ನಿಯೋಜನೆಗೊಂಡ ಸಿಬ್ಬಂದಿ ಅಭ್ಯರ್ಥಿಗಳನ್ನು ಸಂಪರ್ಕಿಸಿ ಹೆಚ್ಚುವರಿ ಮತಗಳನ್ನು ಸೇರಿಸಲು ಹಣ ಪಡೆದಿದ್ದಾರೆ ಎಂಬುದು ಆರೋಪವಾಗಿದೆ.

ಹಣಕ್ಕಾಗಿ ಬೇಡಿಕೆ ಇಟ್ಟ ವಿಚಾರ ಮಾಧ್ಯಮಗಳಲ್ಲಿ ಪ್ರಕಟಗೊಂಡಿದೆ. ಮತ ಎಣಿಕೆ ಪಾರದರ್ಶಕವಾಗಿ ನಡೆದಿಲ್ಲ ಎಂದು ಅರ್ಜಿಯಲ್ಲಿ ಆರೋಪಿಸಲಾಗಿದ್ದು, ಮರು ಮತ ಎಣಿಕೆಗೆ ಮನವಿ ಮಾಡಲಾಗಿದೆ.

ಒಕ್ಕಲಿಗರ ಸಂಘಕ್ಕೆ ಚುನಾವಣೆ ನಡೆಸಬೇಕು ಎಂದು ಸಲ್ಲಿಸಿದ್ದ ಅರ್ಜಿ, ಆಡಳಿತಾಧಿಕಾರಿ ನೇಮಕ ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿ ಸೇರಿದಂತೆ ನಾಲ್ಕು ಅರ್ಜಿಗಳನ್ನು ವಿಚಾರಣೆ ನಡೆಸಿದ್ದ ಕರ್ನಾಟಕ ಹೈಕೋರ್ಟ್ ಡಿಸೆಂಬರ್ 4ರಂದು ಆದೇಶ ಹೊರಡಿಸಿತ್ತು. ಡಿಸೆಂಬರ್ 12ರಂದು ಚುನಾವಣೆ ನಡೆಸಬೇಕು ಎಂದು ಹೇಳಿತ್ತು. ಕೋರ್ಟ್‌ ಅಂತಿಮ ತೀರ್ಪು ನೀಡುವಾಗ ಕೋರ್ಟ್ ಆದೇಶದಂತೆ ಆಡಳಿತಾಧಿಕಾರಿ ಕರಿಗೌಡ ಖುದ್ದಾಗಿ ಹಾಜರಾಗಿದ್ದರು.

Related Articles

Leave a Reply

Your email address will not be published. Required fields are marked *

Back to top button