Aurangzeb: ಔರಂಗಜೇಬ್ ಸಮಾಧಿಗಾಗಿ ಎರಡು ಕೋಮುಗಳ ಗಲಾಟೆ! ಮಹಾರಾಷ್ಟ್ರದ ನಾಗ್ಪುರ ಉದ್ವಿಗ್ನ; 144 ಸೆಕ್ಷನ್ ಜಾರಿ

ನಾಗ್ಪುರ : ಮಹಾರಾಷ್ಟ್ರದ (Maharashtra) ನಾಗ್ಪುರದಲ್ಲಿ (Nagpur) ಮೊಘಲ್ ರಾಜ ಔರಂಗಜೇಬನ (Aurangzeb) ಸಮಾಧಿಯನ್ನು ನಾಶಪಡಿಸುವುದನ್ನು ವಿರೋಧಿಸಿ ನಡೆದ ಪ್ರತಿಭಟನೆಯು ಎರಡು ಗುಂಪುಗಳ ನಡುವೆ ಘರ್ಷಣೆಗೆ ಕಾರಣವಾಗಿತು. ಈ ಘಟನೆಯಲ್ಲಿ ಎರಡೂ ಕಡೆಯಿಂದ ಭಾರೀ ಕಲ್ಲು ತೂರಾಟ ನಡೆದಿದ್ದು, ಕೆಲವೆಡೆ ಬೆಂಕಿ ಹಚ್ಚಲಾಗಿದೆ.
ಇದರ ಪರಿಣಾಮವಾಗಿ ನಾಗ್ಪುರದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದ್ದು, ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ನಿಯಂತ್ರಿಸಲು ಕ್ರಮವಹಿಸಿದ್ದಾರೆ. ಏತನ್ಮಧ್ಯೆ ನಗರದಾದ್ಯಂತ 144 ಸೆಕ್ಷನ್ (Sect) ಜಾರಿಮಾಡಲಾಗಿದೆ.
ಮುಂದುವರೆದು, ನಾಗ್ಪುರದ ಕೆಲವು ಪ್ರದೇಶಗಳಲ್ಲಿ ಬೆಂಕಿ ಹಚ್ಚಿದ ವರದಿಗಳು ಬಂದಿವೆ. ವಿಶೇಷವಾಗಿ ಮಹಲ್ ಪ್ರದೇಶದಲ್ಲಿ ಕಲ್ಲು ತೂರಾಟ ಮತ್ತು ಉದ್ವಿಗ್ನತೆಯ ನಂತರ ಪೊಲೀಸರು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ನಿಭಾಯಿಸುತ್ತಿದೆ. ಈ ಸಂದರ್ಭದಲ್ಲಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ನಾಗರಿಕರಲ್ಲಿ ಸಂಪೂರ್ಣ ಸಹಕಾರ ನೀಡುವಂತೆ ಮನವಿ ಮಾಡಿದ್ದಾರೆ. “ನಾವು ಪೊಲೀಸ್ ಆಡಳಿತದೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇವೆ. ನಾಗರಿಕರು ಅವರೊಂದಿಗೆ ಸಹಕರಿಸಬೇಕು. ನಾಗ್ಪುರ ಶಾಂತಿಯುತ ಮತ್ತು ಸಹಕಾರಿ ನಗರವಾಗಿದೆ. ಇದು ಇಲ್ಲಿನ ಶಾಶ್ವತ ಸಂಪ್ರದಾಯವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಯಾವುದೇ ವದಂತಿಗಳನ್ನು ನಂಬದೇ ಆಡಳಿತಕ್ಕೆ ಪೂರ್ಣ ಸಹಕಾರ ನೀಡಿ,” ಎಂದು ಅವರು ಹೇಳಿದ್ದಾರೆ.
ಔರಂಗಜೇಬನ ಸಮಾಧಿಯನ್ನು ನಾಶ ಮಾಡಿ
ಸೋಮವಾರದಂದು ನಾಗ್ಪುರದಲ್ಲಿ ಉದ್ವಿಗ್ನತೆ ತಾರಕಕ್ಕೇರಿತು. ಮೊಘಲ್ ರಾಜ ಔರಂಗಜೇಬನ ಸಮಾಧಿಯನ್ನು ಕೆಡವಬೇಕೆಂದು ಬಜರಂಗದಳ ಮತ್ತು ವಿಶ್ವ ಹಿಂದೂ ಪರಿಷತ್ (ವಿಎಚ್ಪಿ) ಸದಸ್ಯರು ಛತ್ರಪತಿ ಸಂಭಾಜಿನಗರದಲ್ಲಿ ಪ್ರತಿಭಟನೆ ನಡೆಸಿದರು. ಇದಾದ ನಂತರ ಎರಡು ವಿರುದ್ಧ ಗುಂಪುಗಳು ಮುಖಾಮುಖಿಯಾದಾಗ ಗೊಂದಲ ಹೆಚ್ಚಾಯಿತು, ನಂತರ ಇದು ಕಲ್ಲು ತೂರಾಟದ ಘಟನೆಗಳಿಗೆ ಕಾರಣವಾಯಿತು. ಇದರಿಂದ ಕಾನೂನು ಸುವ್ಯವಸ್ಥೆ ಕಾಪಾಡಲು ಭಾರೀ ಪೊಲೀಸ್ ಪಡೆಯನ್ನು ನಿಯೋಜಿಸಲಾಯಿತು. ವಿಎಚ್ಪಿ ಮತ್ತು ಬಜರಂಗದಳ ಸಂಘಟನೆಗಳು ಔರಂಗಜೇಬನ ಸಮಾಧಿಯನ್ನು ತೆಗೆದುಹಾಕಬೇಕೆಂದು ಒತ್ತಾಯಿಸಿವೆ. ಈ ಸಮಾಧಿ ಅವನ ಆಳ್ವಿಕೆಯಲ್ಲಿ ನಡೆದ ಶತಮಾನಗಳ ದಬ್ಬಾಳಿಕೆ ಮತ್ತು ದೌರ್ಜನ್ಯಗಳ ಸಂಕೇತವಾಗಿದೆ ಎಂದು ಅವರು ವಾದಿಸುತ್ತಾರೆ.
ನಾಗ್ಪುರದಲ್ಲಿ ಔರಂಗಜೇಬನ ಸಮಾಧಿ ವಿವಾದ
“ಸಮಾಧಿಯ ಅಸ್ತಿತ್ವವು ಒಬ್ಬ ನಿರಂಕುಶಾಧಿಕಾರಿಯನ್ನು ವೈಭವೀಕರಿಸುತ್ತದೆ. ಹಿಂದೂಗಳನ್ನು ಹಿಂಸಿಸಿದವರು ಮತ್ತು ದೇವಾಲಯಗಳನ್ನು ನಾಶಪಡಿಸಿದವರು ಯಾರು? ಔರಂಗಜೇಬನ ಕ್ರೌರ್ಯವನ್ನು ಚೆನ್ನಾಗಿ ದಾಖಲಿಸಲಾಗಿದೆ,” ಎಂದು ವಿಎಚ್ಪಿ ಪ್ರಾದೇಶಿಕ ಮುಖ್ಯಸ್ಥ ಕಿಶೋರ್ ಚವಾಣ್ ಹೇಳಿದರು. “ಅವನು ತನ್ನ ತಂದೆಯನ್ನು ಸೆರೆಮನೆಗೆ ಹಾಕಿದನು, ಸಹೋದರರನ್ನು ಕೊಂದನು ಮತ್ತು ಹಿಂದೂ ದೇವಾಲಯಗಳನ್ನು ಧ್ವಂಸ ಮಾಡಲು ಆದೇಶಿಸಿದನು. ಅವನ ಸಮಾಧಿಯ ಅಸ್ತಿತ್ವವು ಆ ದೌರ್ಜನ್ಯಗಳನ್ನು ಗೌರವಿಸುತ್ತದೆ. ಮಹಾರಾಷ್ಟ್ರ ಸರ್ಕಾರವು ಅದನ್ನು ತಕ್ಷಣ ತೆಗೆದುಹಾಕಬೇಕು,” ಎಂದು ಅವರು ಒತ್ತಾಯಿಸಿದರು. ಈ ಪ್ರತಿಭಟನೆಗೆ ಕೆಲವು ದಿನಗಳ ಮೊದಲು, ಈ ಸಂಘಟನೆಗಳು ಸರ್ಕಾರದ ಮೇಲೆ ಕ್ರಮಕ್ಕೆ ಒತ್ತಡ ಹೇರಲು ರಾಜ್ಯಾದ್ಯಂತ ಪ್ರತಿಭಟನೆಗಳನ್ನು ಘೋಷಿಸಿದ್ದವು. ಸರ್ಕಾರ ಕ್ರಮ ಕೈಗೊಳ್ಳದಿದ್ದರೆ, 1992ರಲ್ಲಿ ಅಯೋಧ್ಯೆಯ ಬಾಬರಿ ಮಸೀದಿ ಧ್ವಂಸದಂತೆ ‘ಕರ ಸೇವೆ’ ನಡೆಸುವುದಾಗಿ ಎಚ್ಚರಿಕೆ ನೀಡಿದ್ದರು.
ಜಿಲ್ಲಾಧಿಕಾರಿ ಕಚೇರಿಗೆ ಮನವಿ ನೀಡಲು ಹೋದಾಗ ಘಟನೆ
ನಾಗ್ಪುರದಲ್ಲಿ ಪ್ರತಿಭಟನೆಗಳು ಬಜರಂಗದಳ ಮತ್ತು ವಿಎಚ್ಪಿ ಆಯೋಜಿಸಿದ ರ್ಯಾಲಿಯೊಂದಿಗೆ ಆರಂಭವಾದವು. ಔರಂಗಜೇಬನ ಸಮಾಧಿಯನ್ನು ಕೆಡವಲು ಒತ್ತಾಯಿಸಿ ಜಿಲ್ಲಾಧಿಕಾರಿಗಳಿಗೆ ಜ್ಞಾಪಕ ಪತ್ರ ಸಲ್ಲಿಸುವುದು ಇದರ ಉದ್ದೇಶವಾಗಿತ್ತು. ರ್ಯಾಲಿ ಜಿಲ್ಲಾಧಿಕಾರಿ ಕಚೇರಿಯ ಕಡೆಗೆ ಸಾಗುತ್ತಿದ್ದಾಗ, ಎದುರಾಳಿ ಗುಂಪುಗಳು ವಿರೋಧಿಸಿದವು, ಇದು ಎರಡು ಗುಂಪುಗಳ ನಡುವೆ ಘರ್ಷಣೆಗೆ ಕಾರಣವಾಯಿತು. ಪರಿಸ್ಥಿತಿ ತೀವ್ರಗೊಂಡು, ಎರಡೂ ಕಡೆಯವರು ಭಾರೀ ಕಲ್ಲು ತೂರಾಟ ನಡೆಸಿದರು. ಈ ಘರ್ಷಣೆಯಲ್ಲಿ ಹತ್ತಿರದ ವಾಹನಗಳು ಮತ್ತು ಅಂಗಡಿಗಳು ಹಾನಿಗೊಳಗಾದವು, ಇದರಿಂದ ಸ್ಥಳೀಯ ನಿವಾಸಿಗಳಲ್ಲಿ ಭಯ ಉಂಟಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ವಿಷಯದ ಸೂಕ್ಷ್ಮತೆಯನ್ನು ಗಮನದಲ್ಲಿಟ್ಟುಕೊಂಡು, ನಾಗ್ಪುರ ಪೊಲೀಸರು ನಗರದ ಪ್ರಮುಖ ಪ್ರದೇಶಗಳಲ್ಲಿ ಹೆಚ್ಚುವರಿ ಪಡೆಗಳನ್ನು ನಿಯೋಜಿಸಿದ್ದರು. ಘರ್ಷಣೆ ಉಲ್ಬಣಗೊಂಡಾಗ ಪೊಲೀಸರು ಮಧ್ಯಪ್ರವೇಶಿಸಿ ಗುಂಪನ್ನು ಚದುರಿಸಲು ಮತ್ತು ಹಿಂಸಾಚಾರವನ್ನು ತಡೆಯಲು ಪ್ರಯತ್ನಿಸಿದರು. ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು, “ನಾವು ಯಾವುದೇ ಪರಿಸ್ಥಿತಿಗೆ ಸಿದ್ಧರಿದ್ದೇವೆ. ನಾಗರಿಕರ ಸುರಕ್ಷತೆಯನ್ನು ಖಾತ್ರಿಪಡಿಸುವುದು ಮತ್ತು ಕಾನೂನು ಸುವ್ಯವಸ್ಥೆಯನ್ನು ಕಾಪಾಡುವುದು ನಮ್ಮ ಪ್ರಮುಖ ಗುರಿಯಾಗಿದೆ. ಪರಿಸ್ಥಿತಿ ಈಗ ನಿಯಂತ್ರಣದಲ್ಲಿದೆ ಮತ್ತು ನಾವು ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ,” ಎಂದು ಹೇಳಿದರು.