ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿ ಎಸ್.ಆರ್ ಪಾಟೀಲ್ ನೇಮಕಕ್ಕೆ ಚಿಂತನೆ….
ಬೆಂಗಳೂರು: ವಿಧಾನ ಪರಿಷತ್ ಸದಸ್ಯತ್ವ ಪೂರ್ಣಗೊಳ್ಳುತ್ತಿರುವ ಎಸ್.ಆರ್ ಪಾಟೀಲ್ ಅವರನ್ನು ಕೆಪಿಸಿಸಿ ಕಾರ್ಯಾಧ್ಯಕ್ಷರನ್ನಾಗಿಸುವ ಪ್ರಯತ್ನಕ್ಕೆ ಕಾಂಗ್ರೆಸ್ ಮುಂದಾಗಿದೆ. ವಿಧಾನ ಪರಿಷತ್ ಸದಸ್ಯರಾಗಿ ಸುದೀರ್ಘ ಕಾಲು ಶತಮಾನಗಳ ಅನುಭವ ಹೊಂದಿರುವ ಎಸ್.ಆರ್ ಪಾಟೀಲ್ ಪ್ರತಿಪಕ್ಷ ನಾಯಕರಾಗಿ ಸದ್ಯ ಜವಾಬ್ದಾರಿ ನಿಭಾಯಿಸುತ್ತಿದ್ದಾರೆ.
ಜ.5ರಂದು ಅವರ ಸದಸ್ಯತ್ವ ಅವಧಿ ಪೂರ್ಣಗೊಳ್ಳಲಿದ್ದು, ಆಯ್ಕೆಗಾಗಿ ಅವರು ಸ್ಪರ್ಧೆ ಮಾಡಿಲ್ಲ. ಪಕ್ಷದ ರಾಜ್ಯ ನಾಯಕರು ಇವರಿಗೆ ಪರ್ಯಾಯ ಜವಾಬ್ದಾರಿ ನೀಡುವುದಾಗಿ ಭರವಸೆ ನೀಡಿದ್ದು, ಸದ್ಯ ಅವರನ್ನು ಕೆಪಿಸಿಸಿ ಕಾರ್ಯಾಧ್ಯಕ್ಷರನ್ನಾಗಿಸುವ ಪ್ರಯತ್ನ ನಡೆಯುತ್ತಿದೆ ಎಂಬ ಮಾಹಿತಿ ಇದೆ.
ಈ ಹಿಂದೆ ಕೆಪಿಸಿಸಿ ಅಧ್ಯಕ್ಷರಾಗಿದ್ದ ದಿನೇಶ್ ಗುಂಡೂರಾವ್ ಅವಧಿಯಲ್ಲೇ ಎಸ್.ಆರ್ ಪಾಟೀಲ್ ಕಾರ್ಯಾಧ್ಯಕ್ಷರಾಗಿ ಕೆಲ ತಿಂಗಳು ಕಾರ್ಯ ನಿರ್ವಹಿಸಿದ್ದರು. ದಿಡೀರ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ನಂತರ ಕೆಪಿಸಿಸಿ ಕಾರ್ಯ ನಿರ್ವಹಣೆಯಲ್ಲಿ ಹೆಚ್ಚಿನ ಆಸಕ್ತಿ ತೋರಿಸಿರಲಿಲ್ಲ.
ವಿಧಾನ ಪರಿಷತ್ನಲ್ಲಿ ಪ್ರತಿ ಪಕ್ಷನಾಯಕರಾಗುವ ಅವಕಾಶ ಸಿಕ್ಕ ಹಿನ್ನೆಲೆಯಲ್ಲಿ ಹೆಚ್ಚಿನ ಕಾಲಾವಧಿಯನ್ನು ವಿನಿಯೋಗಿಸಿದ್ದರು. ವಯಸ್ಸಿನ ಕಾರಣ ನೀಡಿ ಇದೀಗ ಅವರಿಗೆ ಟಿಕೆಟ್ ಕೈತಪ್ಪಿದ್ದು, ಮಾಜಿ ಗೃಹ ಸಚಿವ ಎಂ.ಬಿ ಪಾಟೀಲ್ ಸೋದರ ಸುನಿಲ್ ಗೌಡ ಪಾಟೀಲ್ ಆಯ್ಕೆಯಾಗಿದ್ದಾರೆ.
ಪರ್ಯಾಯ ಜವಾಬ್ದಾರಿ ಕಲ್ಪಿಸುವ ಹೊಣೆ:
ಪರಿಷತ್ ಸ್ಪರ್ಧೆಯಿಂದ ಹಿಂದೆ ಸರಿಸುವ ಪ್ರಯತ್ನದಲ್ಲಿ ಕಾಂಗ್ರೆಸ್ ನಾಯಕರು ನೀಡಿದ್ದ ಭರವಸೆ ಏನಿತ್ತೋ ಗೊತ್ತಿಲ್ಲ. ಟಿಕೆಟ್ ಲಭಿಸುವುದಿಲ್ಲ ಎಂಬ ಸೂಚನೆ ಸಹ ಎಂಬಿಪಿಗೆ ಕಡೆಯ ಸಮಯದಲ್ಲಿ ಲಭಿಸಿತ್ತು ಎಂಬ ಮಾಹಿತಿ ಇದೆ.
ಇದೀಗ ಅವರಿಗೆ ರಾಜ್ಯ ನಾಯಕರು ಪರ್ಯಾಯ ಜವಾಬ್ದಾರಿ ಕಲ್ಪಿಸಬೇಕಾಗಿದೆ. ಅಧಿಕಾರದಲ್ಲಿ ಇರದ ಹಿನ್ನೆಲೆ ಪಕ್ಷದ ಒಳಗೆ ಪ್ರತ್ಯೇಕ ಹುದ್ದೆ ಕಲ್ಪಿಸಬೇಕಿದೆ. ಈ ಹಿನ್ನೆಲೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಇವರನ್ನು ಕಾರ್ಯಾಧ್ಯಕ್ಷರನ್ನಾಗಿಸುವ ಪ್ರಯತ್ನಕ್ಕೆ ಮುಂದಾಗಿದ್ದಾರೆ ಎಂಬ ಮಾಹಿತಿ ಇದೆ.
ಧಾರವಾಡ ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ಆಯ್ಕೆಯಾಗಿರುವ ಸಲೀಂ ಅಹ್ಮದ್, ಕಳೆದ ಎರಡು ವರ್ಷಗಳಿಂದ ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿ ಜವಾಬ್ದಾರಿ ನಿಭಾಯಿಸುತ್ತಿದ್ದಾರೆ.
ಇದೀಗ ವಿಧಾನ ಪರಿಷತ್ ಸದಸ್ಯರಾಗಿ ಹೊಸ ಜವಾಬ್ದಾರಿ ವಹಿಸಿಕೊಂಡಿರುವ ಹಿನ್ನೆಲೆ, ಸದಸ್ಯತ್ವ ಜವಾಬ್ದಾರಿ ಜತೆ ಕ್ಷೇತ್ರದಲ್ಲಿಯೂ ಹೆಚ್ಚಾಗಿ ಓಡಾಡುವ ಅಗತ್ಯ ಎದುರಾಗಲಿದೆ. ಈ ಹಿನ್ನೆಲೆ ಧಾರವಾಡ ಕ್ಷೇತ್ರ ಸಂಚಾರ ಮತ್ತು ವಿಧಾನ ಪರಿಷತ್ ಸ್ಥಾನದ ನಿಭಾವಣೆ ಜತೆಗೆ ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿ ಮುಂದುವರೆಯುವುದು ಸಾಧ್ಯವಾಗಬಹುದು ಎಂಬ ಮಾತು ಕೇಳಿಬರುತ್ತಿದೆ.
ಆದರೆ, ಸದ್ಯ ಕಾರ್ಯಾಧ್ಯಕ್ಷರಾಗಿ ಇರುವ ಈಶ್ವರ್ ಖಂಡ್ರೆ, ರಾಮಲಿಂಗಾ ರೆಡ್ಡಿ ಹಾಗೂ ಸತೀಶ್ ಜಾರಕಿಹೊಳಿ ತಮ್ಮ ಶಾಸಕತ್ವದ ಜತೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸ್ಥಾನವನ್ನು ನಿಭಾಯಿಸುತ್ತಿದ್ದಾರೆ. ಅದೇ ರೀತಿ ಸಲೀಂ ಅಹ್ಮದ್ ಕೂಡ ಕಾರ್ಯ ನಿರ್ವಹಿಸಲಿದ್ದಾರೆ ಎಂಬ ಮಾತು ಪಕ್ಷದ ಅಲ್ಪಸಂಖ್ಯಾತ ನಾಯಕರ ಮೂಲದಿಂದ ಕೇಳಿ ಬರುತ್ತಿದೆ.
ಅಲ್ಲದೇ ಸತೀಶ್ ಜಾರಕಿಹೊಳಿ ಹಾಗೂ ಈಶ್ವರ್ ಖಂಡ್ರೆ ಬಹುತೇಕ ತಮ್ಮ ಕ್ಷೇತ್ರದಲ್ಲಿಯೇ ಓಡಾಡಿಕೊಂಡಿರುವ ಹಿನ್ನೆಲೆ ಪಕ್ಷ ಬಲವರ್ಧನೆಗೆ ನಗರ ಕೇಂದ್ರದಲ್ಲಿ ಕಾರ್ಯನಿರ್ವಹಿಸುವವರು ಕೊರತೆಯು ಎದುರಾಗಬಹುದು ಎಂಬ ಮಾತು ಕೇಳಿ ಬರುತ್ತಿದೆ. ಇದಲ್ಲದೇ ಧಾರವಾಡ ಕ್ಷೇತ್ರದಿಂದ ವಿಧಾನ ಪರಿಷತ್ ಟಿಕೆಟ್ ನಿರೀಕ್ಷೆಯಲ್ಲಿದ್ದ ಮಾಜಿ ಸಚಿವ ಮನೋಹರ್ ತಹಶೀಲ್ದಾರ್ ತಮಗೆ ಕಾರ್ಯಾಧ್ಯಕ್ಷ ಸ್ಥಾನ ನೀಡುವಂತೆ ಒತ್ತಡ ಹೇರುತ್ತಿದ್ದಾರೆ.
ಎಸ್.ಆರ್ ಪಾಟೀಲ್ ಅವರಿಗೆ ಬೇರೆ ಯಾವುದಾದರೂ ಜವಾಬ್ದಾರಿ ನೀಡುವಂತೆ ಕಾಂಗ್ರೆಸ್ನ ಕೆಲ ಹಿರಿಯ ನಾಯಕರು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರಿಗೆ ಸಲಹೆ ನೀಡಿದ್ದಾರೆ. ಈ ಹಿನ್ನೆಲೆ ಎಸ್ಆರ್ ಪಾಟೀಲ್ ಮುಂದಿನ ದಿನಗಳಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷರಾಗುತ್ತಾರಾ, ಅಥವಾ ಇಲ್ಲವಾ? ಎನ್ನುವುದು ಸಹ ಗೊಂದಲದಲ್ಲಿದೆ.
ಸದ್ಯದ ಪರಿಸ್ಥಿತಿಯಲ್ಲಿ ಸ್ವತಃ ಎಸ್. ಆರ್ ಪಾಟೀಲ್ ಸಹ ಈ ಹುದ್ದೆ ಮೇಲೆ ಅಷ್ಟೊಂದು ಆಸಕ್ತಿ ಹೊಂದಿಲ್ಲ. ಆದರೂ ಪಕ್ಷದ ಕೆಲ ನಾಯಕರು ಇವರಿಗೆ ಪರ್ಯಾಯ ಜವಾಬ್ದಾರಿ ವಹಿಸುವ ನಿಟ್ಟಿನಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸ್ಥಾನವೇ ಸೂಕ್ತ ಎಂದು ಮಾತನಾಡುತ್ತಿದ್ದಾರೆ.
ಸದ್ಯ ಮೇಕೆದಾಟು ಪಾದಯಾತ್ರೆ ಸಿದ್ಧತೆಯಲ್ಲಿರುವ ನಾಯಕರು ಇದಾದ ಬಳಿಕ ಪಕ್ಷ ಸಂಘಟನೆಗೆ ಅಗತ್ಯವಿರುವ ರೀತಿ ಕೆಪಿಸಿಸಿ ಸಂಘಟಿಸುವ ಸಾಧ್ಯತೆ ಹೆಚ್ಚಿದೆ. ಆ ಸಂದರ್ಭ ಎಸ್.ಆರ್ ಪಾಟೀಲ್ ಅವರಿಗೂ ಒಂದು ಜವಾಬ್ದಾರಿಯುತ ಹುದ್ದೆ ಕಲ್ಪಿಸುವ ಚಿಂತನೆ ನಡೆದಿದೆ ಎಂಬ ಮಾಹಿತಿ ಇದೆ.