700 ಕೋಟಿ ರೂ ವೆಚ್ಚದ ಮೇಜರ್ ಧ್ಯಾನ್ಚಂದ್ ಕ್ರೀಡಾ ವಿವಿಗೆ ಶಂಕುಸ್ಥಾಪನೆ ಮಾಡಲಿರುವ ಪ್ರಧಾನಿ ಮೋದಿ..
ಮೀರತ್: ಪ್ರಧಾನಿ ನರೇಂದ್ರ ಮೋದಿ ಜನವರಿ 2 ರಂದು ಮೀರತ್‌ನಲ್ಲಿ ಮೇಜರ್ ಧ್ಯಾನ್ ಚಂದ್ ಕ್ರೀಡಾ ವಿಶ್ವವಿದ್ಯಾಲಯಕ್ಕೆ ಶಂಕುಸ್ಥಾಪನೆ ಮಾಡಲಿದ್ದಾರೆ. ಈ ಕುರಿತು ಪ್ರಧಾನ ಮಂತ್ರಿ ಕಾರ್ಯಾಲಯವು ಶುಕ್ರವಾರ ಮಾಹಿತಿ ನೀಡಿದೆ. ‘ಮೀರತ್‌ನ ಸರ್ಧಾನ ಪಟ್ಟಣದ ಸಲಾವಾ ಮತ್ತು ಕೈಲಿ ಗ್ರಾಮಗಳಲ್ಲಿ ಸುಮಾರು 700 ಕೋಟಿ ರೂಪಾಯಿ ವೆಚ್ಚದಲ್ಲಿ ವಿಶ್ವವಿದ್ಯಾನಿಲಯವನ್ನು ಸ್ಥಾಪಿಸಲಾಗುವುದು. ಪ್ರಧಾನಮಂತ್ರಿಯವರು ಕ್ರೀಡಾ ಸಂಸ್ಕೃತಿ ಬೆಳೆಸಲು ವಿಶೇಷ ಒಲವು ತೋರಿದ್ದಾರೆ. ದೇಶದ ಎಲ್ಲಾ ಭಾಗಗಳಲ್ಲಿ ವಿಶ್ವ ದರ್ಜೆಯ ಕ್ರೀಡಾ ಮೂಲಸೌಕರ್ಯವನ್ನು ಸ್ಥಾಪಿಸುವುದು ಮತ್ತು ಮೀರತ್‌ನಲ್ಲಿ ಈ ವಿಶ್ವವಿದ್ಯಾಲಯವನ್ನು ಸ್ಥಾಪಿಸುವುದು ಅವರ ಆಶಯವನ್ನು ಈಡೇರಿಸುವ ಪ್ರಮುಖ ಹೆಜ್ಜೆಯಾಗಿದೆ’ ಎಂದು ಪಿಎಂಓ ಹೇಳಿದೆ.
ಮೇಜರ್ ಧ್ಯಾನ್ಚಂದ್ ಕ್ರೀಡಾ ವಿವಿಯ ವಿಶೇಷವೇನು?
ಮೇಜರ್ ಧ್ಯಾನ್ಚಂದ್ ಕ್ರೀಡಾ ವಿಶ್ವವಿದ್ಯಾಲಯವು ಸಿಂಥೆಟಿಕ್ ಹಾಕಿ ಮತ್ತು ಫುಟ್‌ಬಾಲ್ ಮೈದಾನಗಳು, ಬಾಸ್ಕೆಟ್‌ಬಾಲ್, ವಾಲಿಬಾಲ್, ಹ್ಯಾಂಡ್‌ಬಾಲ್ ಮತ್ತು ಕಬಡ್ಡಿ ಮೈದಾನ, ಲಾನ್ ಟೆನ್ನಿಸ್ ಕೋರ್ಟ್, ಜಿಮ್ನಾಷಿಯಂ ಹಾಲ್, ಸಿಂಥೆಟಿಕ್ ರನ್ನಿಂಗ್ ಸ್ಟೇಡಿಯಂ, ಈಜುಕೊಳ ಸೇರಿದಂತೆ ಆಧುನಿಕ ಮತ್ತು ಅತ್ಯಾಧುನಿಕ ಕ್ರೀಡಾ ಮೂಲಸೌಕರ್ಯಗಳನ್ನು ಹೊಂದಿದೆ. ಇದರೊಂದಿಗೆ ವಿವಿಧೋದ್ದೇಶಕ್ಕೆ ಬಳಸಬಹುದಾದ ಹಾಲ್ ಮತ್ತು ಸೈಕ್ಲಿಂಗ್ ವೆಲೋಡ್ರೋಮ್ ಕೂಡ ಇರಲಿದೆ.
ಇದು ಶೂಟಿಂಗ್, ಸ್ಕ್ವಾಷ್, ಜಿಮ್ನಾಸ್ಟಿಕ್ಸ್, ವೇಟ್‌ಲಿಫ್ಟಿಂಗ್, ಬಿಲ್ಲುಗಾರಿಕೆ, ಕ್ಯಾನೋಯಿಂಗ್ ಮತ್ತು ಕಯಾಕಿಂಗ್‌ಗೆ ಇತರ ಸೌಲಭ್ಯಗಳನ್ನು ಹೊಂದಿದೆ. ವಿಶ್ವವಿದ್ಯಾನಿಲಯವು 540 ಮಹಿಳೆಯರು ಮತ್ತು 540 ಪುರುಷ ಕ್ರೀಡಾಪಟುಗಳು ಸೇರಿದಂತೆ 1,080 ಕ್ರೀಡಾಪಟುಗಳಿಗೆ ತರಬೇತಿ ನೀಡುವ ಸಾಮರ್ಥ್ಯವನ್ನು ಹೊಂದಿರುತ್ತದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.