ಪುರಸಭೆ, ಪ.ಪಂ.ಯಲ್ಲಿ ಕಾಂಗ್ರೆಸ್ ಮೇಲುಗೈ, ನಗರಸಭೆಯಲ್ಲಿ ಅರಳಿದ ಕಮಲ..
ಬೆಂಗಳೂರು (ಡಿ. 30): ಸೋಮವಾರ 19 ಜಿಲ್ಲೆಗಳಲ್ಲಿ ನಡೆದ 58 ನಗರ ಸ್ಥಳೀಯ ಸಂಸ್ಥೆ ಚುನಾವಣೆಯ ಫಲಿತಾಂಶ(Karnataka ULB Election Results) ಇಂದು ಪ್ರಕಟವಾಗಿದೆ. ಹಾಗೆಯೇ ವಿವಿಧ ನಗರ ಸಂಸ್ಥೆಗಳ 9 ವಾರ್ಡ್ಗಳ ಉಪಚುನಾವಣೆ(Wards By election) ಹಾಗೂ 57 ಗ್ರಾಮ ಪಂಚಾಯಿತಿಗಳ ಚುನಾವಣೆಯ ಫಲಿತಾಂಶ(Result) ಕೂಡ ಇಂದು ಹೊರಬಿದ್ದಿದೆ. ಆಯಾ ತಾಲೂಕು ಕೇಂದ್ರಗಳಲ್ಲಿ ಬೆಳಗ್ಗೆ 8 ಗಂಟೆಗೆ ಮತ ಎಣಿಕೆ ಆರಂಭವಾಗಿ, ಎಣಿಕೆ ಮುಗಿದಿದೆ. ಅಂತಿಮ ಫಲಿತಾಂಶ ಹೊರಬಿದ್ದಿದೆ. ಅದರಂತೆ ಪುರಸಭೆ, ಪ.ಪಂ.ಯಲ್ಲಿ ಕಾಂಗ್ರೆಸ್ ಮೇಲುಗೈ ಸಾಧಿಸಿದರೆ, ನಗರಸಭೆಯಲ್ಲಿ ಕಮಲ ಅರಳಿದೆ. ಪುರಸಭೆ ಚುನಾವಣೆಯಲ್ಲಿ ಒಟ್ಟು 441 ಸ್ಥಾನಗಳಲ್ಲಿ ಕಾಂಗ್ರೆಸ್ 201 ಸ್ಥಾನಗಳನ್ನು ಪಡೆದು, ಗೆದ್ದು ಬೀಗಿದೆ. ಬಿಜೆಪಿ 176 ಸ್ಥಾನಗಳಿಗೆ ತೃಪ್ತಿಪಟ್ಟುಕೊಂಡಿದೆ. ಅಂತೆಯೇ ಜೆಡಿಎಸ್ 21 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಪಕ್ಷೇತರ 43 ಸ್ಥಾನಗಳಿಗೆ ಜಯ ಲಭಿಸಿದೆ. ಪ.ಪಂ. ಚುನಾವಣೆಯಲ್ಲಿಯೂ ಕಾಂಗ್ರೆಸ್ ಮೇಲುಗೈ ಸಾಧಿಸಿದೆ. ಒಟ್ಟು 557 ಸ್ಥಾನಗಳಲ್ಲಿ ಕಾಂಗ್ರೆಸ್ 236 ಸ್ಥಾನಗಳಲ್ಲಿ ಗೆದ್ದು, ಭರ್ಜರಿ ಜಯ ಸಾಧಿಸಿದೆ. ಬಿಜೆಪಿ 194 ಸ್ಥಾನಗಳಲ್ಲಿ ಗೆದ್ದರೆ, ಪಕ್ಷೇತರರು 135 ಸ್ಥಾನಗಲ್ಲಿ ಗೆಲುವು ಸಾಧಿಸಿದ್ದಾರೆ. ಪ್ರಾದೇಶಿಕ ಪಕ್ಷ ಜೆಡಿಎಸ್ ಕೇವಲ 12 ಸ್ಥಾನಗಳಿಗೆ ತೃಪ್ತಿ ಪಟ್ಟುಕೊಂಡಿದೆ. ಇನ್ನು, ನಗರಸಭೆ ಚುನಾವಣೆಯಲ್ಲಿ ಬಿಜೆಪಿ ಗೆಲುವಿನ ನಗೆ ಬೀರಿದೆ. ಒಟ್ಟು 166 ಸ್ಥಾನಗಳಲ್ಲಿ ಬಿಜೆಪಿ 67 ಸ್ಥಾನಗಳಲ್ಲಿ ಜಯಭೇರಿ ಬಾರಿಸಿದೆ. ಕಾಂಗ್ರೆಸ್ ಪಕ್ಷ 61ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಇನ್ನು ಪಕ್ಷೇತರ 26 ಸ್ಥಾನಗಳು ಸಿಕ್ಕರೆ, ಜೆಡಿಎಸ್ ಕೇವಲ 12 ಸ್ಥಾನಗಳನ್ನು ಪಡೆದುಕೊಂಡಿದೆ.