ಸುದ್ದಿ

ನಾರಾಯಣಗೌಡ ಯಾವ ಸೀಮೆ ಸಚಿವ..? ಶಾಸಕ ರವೀಂದ್ರ ವಾಗ್ದಾಳಿ

ಶ್ರೀರಂಗಪಟ್ಟಣ (ಮಂಡ್ಯ): ಶ್ರೀರಂಗಪಟ್ಟಣದಲ್ಲಿನ ಕೊರೊನಾ ವಿಚಾರಕ್ಕೆ ಸಂಬಂಧಿಸಿದಂತೆ ಶಾಸಕ ಹಾಗೂ ಜಿಲ್ಲಾ ಉಸ್ತುವಾರಿ ಮಂತ್ರಿ ನಡುವಿನ ಜಟಾಪಟಿ ಮುಂದುವರಿದಿದೆ. ಸೋಮವಾರ ಕೋವಿಡ್‌ ಕೇರ್‌ ಸೆಂಟರ್‌ಗೆ ಭೇಟಿ ನೀಡಿದ್ದ ಶಾಸಕ ರವೀಂದ್ರ ಶ್ರೀಕಂಠಯ್ಯ, ಸಚಿವ ನಾರಾಯಣಗೌಡರ ವಿರುದ್ಧ ಯಾವ ಸೀಮೆ ಸಚಿವ ಎಂದು ವಾಗ್ದಾಳಿ ನಡೆಸಿದರು. ಮೂರನೇ ಬಾರಿ ಗೆದ್ದ ಮಾತ್ರಕ್ಕೆ ನಿಮ್ಮ ತಲೆಯಲ್ಲಿ ಎಲ್ಲವೂ ಇದೆ ಎಂದರ್ಥವಲ್ಲ. ನನ್ನ ಬಗ್ಗೆ ಮಾತನಾಡುವ ಯೋಗ್ಯತೆ ನಿಮಗಿಲ್ಲ, ನಿಮ್ಮ ಯೋಗ್ಯತೆಯನ್ನು ಅಪ್ಪರ್‌ ಹೌಸ್‌ನಲ್ಲಿ ಹರಾಜು ಹಾಕಿದ್ದಾರೆ. ನೀವು ಮಂಡ್ಯ ಜಿಲ್ಲೆ ಗೌರವ ತೆಗೆದಿದ್ದೀರಿ. ರಾಜಕೀಯ ಮಾಡುವುದು ನನಗೆ ಗೊತ್ತು, ನಿಮ್ಮಿಂದ ನಾನು ರಾಜಕೀಯ ಕಲಿಯಬೇಕಿಲ್ಲ ಎಂದು ಸಚಿವ #ನಾರಾಯಣ ಗೌಡ ವಿರುದ್ಧ ಶಾಸಕ  #ರವೀಂದ್ರ ಶ್ರೀಕಂಠಯ್ಯ ವಾಗ್ದಾಳಿ ನಡೆಸಿದರು.

ಶ್ರೀರಂಗಪಟ್ಟಣ ಕೋವಿಡ್‌ ಕೇರ್‌ಗೆ ಭೇಟಿ ನೀಡಿದ್ದ ಸಚಿವ ನಾರಾಯಣಗೌಡ, ಕ್ಷೇತ್ರದ ಶಾಸಕನಿಂದ ನಾನು ಬುದ್ಧಿ ಕಲಿಯಬೇಕಿಲ್ಲ. ನಮ್ಮ ಸರಕಾರ ಎಲ್ಲವನ್ನೂ ಮಾಡಿದೆ. ಇವರಿಂದ ಹೇಳಿಸಿಕೊಂಡು ನಾನು ಕಲಿಯಬೇಕಿಲ್ಲ. ಅವನಿಗೆ ಅನುಭವವಿಲ್ಲ ಅಂತಾ ಶಾಸಕರ ವಿರುದ್ಧ ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದರು.

#ಮಂಡ್ಯ ಜಿಲ್ಲೆಯಲ್ಲಿ ವ್ಯವಸ್ಥೆ ಅಧ್ವಾನ ಆಗಿರೋದಕ್ಕೆ ನೀವೇ ಕಾರಣ ಎಂದೂ ಸಚಿವರ ವಿರುದ್ಧ ರವೀಂದ್ರ ಶ್ರೀಕಂಠಯ್ಯ ಆಕ್ರೋಶ ವ್ಯಕ್ತಪಡಿಸಿದರು. ಸಚಿವರು ಮಾನವೀಯತೆ ಕಲಿಯಬೇಕಿದೆ. ಅಧಿಕಾರಿಗಳು ಕೊಡುವ ಪುಸ್ತಕಕ್ಕೆ ಸಹಿ ಹಾಕಿದರೆ ಸಾಲದು. ನಿಮ್ಮ ಮನೆಯಲ್ಲಿಯೂ 50 ಮಂದಿ ಬಾತ್‌ ರೂಮ್‌ನಲ್ಲಿ ಸ್ನಾನ ಮಾಡುತ್ತಾರೆಯೆ? ಇವರ ಮನೆಯಲ್ಲಿ ಇದೇ ರೀತಿ ಆಗಿದ್ದರೆ ನೀವು ಅಡ್ಜೆಸ್ಟ್‌ ಮಾಡ್ಕೊಂಡು ಸುಮ್ಮನೆ ಇರುತ್ತಿದ್ದಿರಾ ಎಂಬುದಾಗಿ ತರಾಟೆಗೆ ತೆಗೆದುಕೊಂಡರು.

ಅವನು ಯಾವ ಸೀಮೆ ಮಂತ್ರಿ. ಬೆಳಗಾವಿಯ ಅಪ್ಪರ್‌ ಹೌಸ್‌ನಲ್ಲಿ ಕೋವಿಡ್‌ ಲೆಕ್ಕ ಕೇಳಿದ್ರೆ ಕದ್ದಾಡಿಕೊಂಡು ತಲೆ ತಗ್ಗಿಸಿಕೊಂಡು ಕುಂತಿದ್ರು. ಜಿಲ್ಲೆಯಲ್ಲಿ ಇಷ್ಟೆಲ್ಲಾ ಆಗ್ತಿದ್ರೂ ಇನ್ನೂ ಜಿಲ್ಲೆಯ ಜನಪ್ರತಿನಿಧಿಗಳ ಸಭೆ ಕರೆದಿಲ್ಲ ಅಂತಾ ಸಚಿವರು ಸೇರಿದಂತೆ ಜಿಲ್ಲಾಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಇನ್ನು ಅಧಿಕಾರಿಗಳಿಂದ ಕೆಲಸ ತೆಗೆದುಕೊಳ್ಳುವ ಯೋಗ್ಯತೆ ಜಿಲ್ಲೆಯ ಸಚಿವರಿಗೆ ಇಲ್ಲ. ಇನ್ನು ಪಾಂಡವಪುರದ ಉಪವಿಭಾಗಾಧಿಕಾರಿ ಇಲ್ಲಿಗೆ ಭೇಟಿ ನೀಡಿಲ್ಲ ಎಂದು ಎಸಿ ವಿರುದ್ಧವೂ ಗರಂ ಆದರು. ತಾ.ಪಂ ಇಒ ಭೈರಪ್ಪ, ತಾಲೂಕು ಆರೋಗ್ಯಾಧಿಕಾರಿ ಡಾ. ಎನ್‌. ಕೆ. ವೆಂಕಟೇಶ್‌, ಪುರಸಭೆ ಉಪಾಧ್ಯಕ್ಷ ಎಸ್‌. ಪ್ರಕಾಶ್‌ ಇತರರು ಹಾಜರಿದ್ದರು. ಇದಕ್ಕೂ ಮೊದಲು ಪಟ್ಟಣದ ತಾಲೂಕು ಆಸ್ಪತ್ರೆಯಲ್ಲಿ ಬೂಸ್ಟರ್‌ ಡೋಸ್‌ ಲಸಿಕೆಗೆ ಚಾಲನೆ ನೀಡಿದರು.

Related Articles

Leave a Reply

Your email address will not be published. Required fields are marked *

Back to top button