ಸುದ್ದಿ

ರಾಷ್ಟ್ರಕವಿ ಕುವೆಂಪು ಅವರ ಸೊಸೆ, ಲೇಖಕಿ ರಾಜೇಶ್ವರಿ ತೇಜಸ್ವಿ ಇನ್ನಿಲ್ಲ!

ಬೆಂಗಳೂರು: ಕನ್ನಡ ಅಗ್ರಮಾನ್ಯ ಸಾಹಿತಿ ಕೆಪಿ ಪೂರ್ಣಚಂದ್ರ ತೇಜಸ್ವಿ ಅವರ ಪತ್ನಿ ರಾಜೇಶ್ವರಿ ತೇಜಸ್ವಿ ಅವರು ಮಂಗಳವಾರ ಮುಂಜಾನೆ ನಿಧನರಾಗಿದ್ದಾರೆ. ರಾಜೇಶ್ವರಿ ತೇಜಸ್ವಿ ಅವರಿಗೆ 84 ವರ್ಷ ವಯಸ್ಸಾಗಿತ್ತು. ರಾಷ್ಟ್ರಕವಿ ಕುವೆಂಪು ಅವರ ಸೊಸೆಯಾಗಿರುವ ರಾಜೇಶ್ವರಿ ಅವರು ವಯೋ ಸಹಜ ಅನಾರೋಗ್ಯದ ಹಿನ್ನೆಲೆ ಕಳೆದ ಮೂರ್ನಾಲ್ಕು ದಿನಗಳಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆ ರಾಜಲಕ್ಷ್ಮಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ತೀವ್ರ ಜ್ವರದಿಂದ ಬಳಲುತ್ತಿದ್ದ ರಾಜೇಶ್ವರಿ ತೇಜಸ್ವಿ ಅವರು ಮೂಡಿಗೆರೆಯ ಹ್ಯಾಂಡ್ ಪೋಸ್ಟ್‌ನಲ್ಲಿ ವಾಸವಾಗಿದ್ದರು. ಸಾಹಿತಿ ಪೂರ್ಣಚಂದ್ರ ತೇಜಸ್ವಿ ನಿಧನದ ಬಳಿಕ ತೋಟದಲ್ಲಿ ಒಬ್ಬರೇ ಇದ್ದರು. ಕಳೆದ ಕೆಲ ದಿನದ ಹಿಂದೆ ಬೆಂಗಳೂರಿನ ಮಗಳ ಮನೆಗೆ ಹೋಗಿದ್ದರು. ಬಳಿಕ ಆರೋಗ್ಯದಲ್ಲಿ ಏರುಪೇರು ಉಂಟಾಗಿತ್ತು.

1937ರಲ್ಲಿ ಬೆಂಗಳೂರಿನ ಕಲಾಸಿಪಾಳ್ಯದ ಬಡಾವಣೆಯೊಂದರಲ್ಲಿ ಸಾಮಾನ್ಯ ಕುಟುಂಬದಲ್ಲಿ ಜನಿಸಿದ ರಾಜೇಶ್ವರಿ ಅವರು ತನ್ನ ತಂದೆಯ ಪ್ರೋತ್ಸಾಹದಿಂದ ಆ ಕಾಲದಲ್ಲಿ ಉತ್ತಮ ವಿದ್ಯಭ್ಯಾಸ ಮಾಡಿದ್ದರು. ತತ್ವಶಾಸ್ತ್ರದಲ್ಲಿ ಆನರ್ಸ್ ಮತ್ತು ಎಂಎ ಪದವಿ ಮಾಡಲು ಮೈಸೂರಿನ ಮಾನಸ ಗಂಗೋತ್ರಿಗೆ ಬಂದಾಗ ಅಲ್ಲಿ ರಾಷ್ಟ್ರಕವಿ ಕುವೆಂಪು ಅವರ ಪುತ್ರ ಸಾಹಿತಿ ಕೆಪಿ ಪೂರ್ಣಚಂದ್ರ ತೇಜಸ್ವಿ ಅವರ ಪರಿಚಯವಾಗಿ ಪರಸ್ಪರ ಪ್ರೀತಿಸಿದ್ದರು. ಬಳಿಕ 1966ರಲ್ಲಿ ಇವರ ವಿವಾಹ ಮಂತ್ರ ಮಾಂಗಲ್ಯ ಕಲ್ಪನೆಯಂತೆ ಮಾದರಿಯಾಗಿ ನಡೆದಿತ್ತು. ಇಲ್ಲಿಯವರೆಗೆ ಐದು ಮುದ್ರಣವನ್ನು ಕಂಡಿರುವ ‘ನನ್ನ ತೇಜಸ್ವಿ’ ರಾಜೇಶ್ವರಿ ಅವರ ಮೊದಲ ಕೃತಿಯಾಗಿದೆ. ಬಳಿಕ ‘ನಮ್ಮ ಮನೆಗೂ ಬಂದರು ಗಾಂಧೀಜಿ’ ಎಂಬ ಎರಡನೇ ಪುಸ್ತಕವನ್ನು ಬರೆದಿದ್ದರು. ಅಪರೂಪದ ಹವ್ಯಾಸವನ್ನು ಹೊಂದಿರುವ ರಾಜೇಶ್ವರಿ ತೇಜಸ್ವಿ ಅವರು ಮಾದರಿ ವ್ಯಕ್ತಿತ್ವವನ್ನು ಹೊಂದಿದ್ದರು. ಅವರಿಗೆ ಸುಶ್ಮಿತಾ ಮತ್ತು ಈಶಾನ್ಯೆ ಎಂಬ ಇಬ್ಬರು ಹೆಣ್ಣು ಮಕ್ಕಳಿದ್ದು, ಇಬ್ಬರೂ ಸಾಫ್ಟ್‌ವೇರ್ ಇಂಜಿನಿಯರ್‌ಗಳಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಅಂತಿಮ ದರ್ಶನ ಬೆಂಗಳೂರಿನಲ್ಲಿ
ಬೆಂಗಳೂರಿನ ಪುತ್ರಿಯ ಮನೆಯಲ್ಲಿ ಸಾರ್ವಜನಿಕರಿಗೆ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದ್ದು, ಮೃತದೇಹವನ್ನು ಆಸ್ಪತ್ರೆಗೆ ದೇಹದಾನ ಮಾಡಲು ಕುಟುಂಬಸ್ಥರು ನಿರ್ಧರಿಸಿದ್ದಾರೆ. ಮೂಡಿಗೆರೆಯಲ್ಲಿ ಅಂತಿಮ ಸಂಸ್ಕಾರದ ಯಾವುದೇ ವಿಧಿವಿಧಾನ ಇರುವುದಿಲ್ಲ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button