ವಿವಾದಕ್ಕೆ ತೆರೆ: “ತಮಿಳ್ ತಾಯ್ ವಾಳ್ತು”: ತಮಿಳುನಾಡಿನ ನಾಡಗೀತೆ ಎಂದು ಘೋಷಣೆ
ಚೆನ್ನೈ, ಡಿಸೆಂಬರ್ 17: “ತಮಿಳ್ ತಾಯ್ ವಾಳ್ತು” ಅನ್ನು ತಮಿಳುನಾಡಿನ ನಾಡಗೀತೆಯಾಗಿ ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಶುಕ್ರವಾರ ಘೋಷಿಸಿದ್ದಾರೆ. ಈ ನಾಡಗೀತೆಯನ್ನು ಹಾಡುವ ಸಂದರ್ಭದಲ್ಲಿ ಸ್ಥಳದಲ್ಲಿದ್ದವರು ನಿಂತಲ್ಲೇ ನಿಲ್ಲಬೇಕು, ನಾಡಗೀತೆಯ ಸ್ಥಾನಮಾನ ನೀಡುವಂತೆ ಸರ್ಕಾರದ ಆದೇಶದಲ್ಲಿ ಹೇಳಲಾಗಿದೆ.
“ತಮಿಳ್ ತಾಯ್ ವಾಳ್ತು” ಗೀತೆಗೆ ಸಂಬಂಧಿಸಿದಂತೆ ಇತ್ತೀಚಿಗಷ್ಟೇ ಮದ್ರಾಸ್ ಹೈಕೋರ್ಟ್ ಮಹತ್ವದ ಆದೇಶ ನೀಡಿತ್ತು. ಅದು ಕೇವಲ ಪ್ರಾರ್ಥನೆ ಗೀತೆಯಾಗಿದ್ದು, ರಾಷ್ಟ್ರಗೀತೆ ಏನಲ್ಲ. ಸಾರ್ವಜನಿಕವಾಗಿ ಅದನ್ನು ಹಾಡುವ ಸಂದರ್ಭದಲ್ಲಿ ಎಲ್ಲರೂ ಎದ್ದು ನಿಲ್ಲುವ ಅಗತ್ಯವಿಲ್ಲ ಎಂದು ಆದೇಶ ನೀಡಿತ್ತು. ಕಳೆದ 2018ರಲ್ಲಿ ರಾಮನಾಥಪುರಂ ಜಿಲ್ಲೆಯ ರಾಮೇಶ್ವರಂ ಪೊಲೀಸರು ‘ನಾಮ್ ತಮಿಳರ್ ಕಚ್ಚಿ’ (NTK) ಪದಾಧಿಕಾರಿಗಳ ವಿರುದ್ಧ ದಾಖಲಿಸಿದ್ದ ಎಫ್‌ಐಆರ್ ಅನ್ನು ರದ್ದುಗೊಳಿಸುವ ಸಂದರ್ಭದಲ್ಲಿ ಮದ್ರಾಸ್ ಹೈಕೋರ್ಟ್ ನ್ಯಾಯಮೂರ್ತಿ ಜಿ. ಆರ್. ಸ್ವಾಮಿನಾಥನ್ ಈ ತೀರ್ಪು ಪ್ರಕಟಿಸಿದ್ದರು. ಇದರ ಬೆನ್ನಲ್ಲೇ ರಾಜ್ಯ ಸರ್ಕಾರದಿಂದ ಈ ಘೋಷಣೆ ಹೊರ ಬಿದ್ದಿದೆ.
55 ಸೆಕೆಂಡ್ ಗೀತೆಯನ್ನು ಹಾಡುವ ಸಂದರ್ಭದಲ್ಲಿ ಎಲ್ಲರೂ ಎದ್ದು ನಿಲ್ಲುವುದು ಕಡ್ಡಾಯ ಎಂದು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಆದೇಶಿಸಿದ್ದಾರೆ. ರಾಜ್ಯದ ಎಲ್ಲಾ ಶೈಕ್ಷಣಿಕ ಸಂಸ್ಥೆಗಳು, ಶಾಲಾ-ಕಾಲೇಜುಗಳು, ಸರ್ಕಾರಿ ಕಚೇರಿಗಳು, ಸರ್ಕಾರೇತರ ಕೆಲವು ಸಂಸ್ಥೆಗಳ ಕಾರ್ಯಕ್ರಮಗಳನ್ನು ಆರಂಭಿಸುವುದಕ್ಕೂ ಪೂರ್ವದಲ್ಲಿ ಈ ನಾಡಗೀತೆಯನ್ನು ಹಾಡಬೇಕು ಎಂದು ಆದೇಶದಲ್ಲಿ ಹೇಳಲಾಗಿದೆ.
ತಮಿಳ್ ತಾಯ್ ವಾಳ್ತು ನಾಡಗೀತೆ ಸುತ್ತ ವಿವಾದ:
2018ರ ಜನವರಿ 24ರಂದು ತಮಿಳುನಾಡಿನಲ್ಲಿ ಚೆನ್ನೈನಲ್ಲಿ ಸಂಗೀತ ಅಕಾಡೆಮಿ ಕಾರ್ಯಕ್ರಮವೊಂದರಲ್ಲಿ ಈ “ತಮಿಳ್ ತಾಯ್ ವಾಳ್ತು” ಪ್ರಾರ್ಥನೆಯನ್ನು ಹಾಡಲಾಯಿತು. ರಾಜ್ಯಪಾಲ ಬನ್ವಾರಿಲಾಲ್ ಪುರೋಹಿತ್ ಭಾಗಿಯಾಗಿದ್ದ ಕಾರ್ಯಕ್ರಮದಲ್ಲಿ ತಮಿಳು-ಸಂಸ್ಕೃತಿ ನಿಘಂಟು ಬಿಡುಗಡೆ ಮಾಡಿದ್ದು, ಕಂಚಿ ಕಾಮಕೋಟಿ ಪೀಠದ ವಿಜಯೇಂದ್ರ ಸರಸ್ವತಿ ಸ್ವಾಮಿಗಳು ಹಾಜರಾಗಿದ್ದರು. ಈ ವೇಳೆ ಪ್ರಾರ್ಥನೆಯನ್ನು ಹಾಡುತ್ತಿದ್ದ ವೇಳೆ ಶ್ರೀಗಳು ಎದ್ದು ನಿಲ್ಲಲಿಲ್ಲ ಎನ್ನುವುದು ಸಾಕಷ್ಟು ವಿವಾದಕ್ಕೆ ಕಾರಣವಾಗಿತ್ತು.
ಮದ್ರಾಸ್ ಹೈಕೋರ್ಟ್ ಹೇಳಿದ್ದೇನು?
ಮದ್ರಾಸ್ ಹೈಕೋರ್ಟ್ ನ್ಯಾಯಮೂರ್ತಿ ಜಿ ಆರ್ ಸ್ವಾಮಿನಾಥನ್ ನೇತೃತ್ವದ ಏಕಸದಸ್ಯ ಪೀಠವು “ತಮಿಳ್ ತಾಯ್ ವಾಳ್ತು” ಒಂದು ಪ್ರಾರ್ಥನೆಯಾಗಿದೆಯೇ ಹೊರತೂ ರಾಷ್ಟ್ರಗೀತೆಯಲ್ಲ. ಈ ಪ್ರಾರ್ಥನೆಯನ್ನು ಸಲ್ಲಿಸುತ್ತಿರುವ ಸಂದರ್ಭದಲ್ಲಿ ಸಾರ್ವಜನಿಕವಾಗಿ ಎಲ್ಲರೂ ಎದ್ದು ನಿಲ್ಲುವುದು ಕಡ್ಡಾಯವಲ್ಲ. ಮಧುರೈ ಪೀಠ ಕೂಡ ಆದೇಶದ ಕುರಿತು ಸ್ಪಷ್ಟನೆ ನೀಡಿತ್ತು. ತಮಿಳ್ ತಾಯ್ ವಾಳ್ತು ಹಾಡುವ ಸಂದರ್ಭದಲ್ಲಿ ಸ್ಥಳದಲ್ಲಿ ಇರುವ ಎಲ್ಲರೂ ಕಡ್ಡಾಯವಾಗಿ ಎದ್ದು ನಿಲ್ಲಬೇಕು ಎಂಬುದರ ಕುರಿತು ಯಾವುದೇ ಶಾಸನಬದ್ಧ ಷರತ್ತುಗಳಿಲ್ಲ, ಅದು ಕಡ್ಡಾಯವೂ ಅಲ್ಲ ಎಂದಿತ್ತು. ಆದಾಗ್ಯೂ, ಬೈಂಡಿಂಗ್ ಆದೇಶಗಳ ಕೊರತೆಯನ್ನು ಲೆಕ್ಕಿಸದೆ, ಪ್ರಾರ್ಥನಾ ಗೀತೆಗೆ ಅತ್ಯಂತ ಗೌರವವನ್ನು ತೋರಿಸಬೇಕು ಎಂದು ನ್ಯಾಯಾಲಯ ಹೇಳಿತ್ತು.
ನ್ಯಾಯಾಲಯಕ್ಕೆ ನೀಡಿದ ಹೇಳಿಕೆಯಲ್ಲಿ ಏನಿತ್ತು?
“ಒಬ್ಬ ಸನ್ಯಾಸಿ ಆಗಿರುವವರು, ಮನುಷ್ಯ ಧರ್ಮದಿಂದ ವಿಮುಕ್ತಿ ಹೊಂದಿ ಪುನರ್ ಜನ್ಮವನ್ನು ಪಡೆದುಕೊಳ್ಳಬೇಕು. ಸನ್ಯಾಸಿಯು ಪ್ರಾಥಮಿಕವಾಗಿ ಧರ್ಮನಿಷ್ಠೆಯನ್ನು ಹೊಂದಿರುತ್ತಾರೆ. ಪ್ರಾರ್ಥನೆ ಸಲ್ಲಿಸುವ ಸಂದರ್ಭದಲ್ಲಿ ಅವರು, ಧ್ಯಾನವನ್ನು ಮಾಡುತ್ತಾರೆ. ತಮಿಳ್ ತಾಯ್ ವಾಳ್ತು ಪ್ರಾರ್ಥನಾ ಗೀತೆಯನ್ನು ಹಾಡುತ್ತಿರುವ ಸಂದರ್ಭದಲ್ಲಿಯೂ ಸಹ ಕಂಚಿ ಮಠದ ಶ್ರೀಗಳು ತಮ್ಮ ಕಣ್ಣುಗಳನ್ನು ಮುಚ್ಚಿಕೊಂಡು ಧ್ಯಾನಸ್ಥರಾಗಿದ್ದರು. ಅದೂ ಕೂಡಾ ಮಾತೃ ಭಾಷೆಗೆ ಸಲ್ಲಿಸುವ ಗೌರವವಾಗಿರುತ್ತದೆ,” ಎಂದು ನ್ಯಾಯಾಲಯಕ್ಕೆ ಸಲ್ಲಿಸಿದ ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ. ತಮಿಳುನಾಡು ಸರ್ಕಾರದ ಆದೇಶವನ್ನು ಉಲ್ಲೇಖಿಸಿ ಇಡೀ ವಿವಾದವನ್ನು ಮೊದಲ ಹಂತದಲ್ಲಿ ಸಮರ್ಥಿಸಲಾಗಿದೆಯೇ ಎಂದು ಕೇಳಲು ಸಹಾಯ ಮಾಡಲಾರೆ,” ಎಂದು ನ್ಯಾಯಾಲಯದ ಆದೇಶದಲ್ಲಿ ಹೇಳಲಾಗಿದೆ. ಅಲ್ಲದೇ ‘ತಮಿಳು ಥಾಯ್ ವಾಳ್ತು’ ಅನ್ನು ಸರ್ಕಾರಿ ಇಲಾಖೆಗಳು, ಸ್ಥಳೀಯ ಸಂಸ್ಥೆಗಳು ಮತ್ತು ಶಿಕ್ಷಣ ಸಂಸ್ಥೆಗಳಿಂದ ಆಯೋಜಿಸಲಾದ ಎಲ್ಲಾ ಕಾರ್ಯಕ್ರಮಗಳ ಆರಂಭದಲ್ಲಿ ಪ್ರಾರ್ಥನಾ ಗೀತೆಯಾಗಿ ಹಾಡಬೇಕು ಎಂದು ಸ್ಪಷ್ಟಪಡಿಸಿದೆ.