ಇತ್ತೀಚಿನ ಸುದ್ದಿ

ರಾಯಚೂರು ಜಿಲ್ಲೆಯಲ್ಲಿ | ಕೋಳಿ ಜ್ವರ: ಮುಂಜಾಗ್ರತೆಗೆ ಜಿಲ್ಲಾಡಳಿತ ಸೂಚನೆ

ರಾಯಚೂರು : ಕೋಳಿ ಶೀತ ಜ್ವರದ ಪ್ರಯುಕ್ತ ಸಾರ್ವಜನಿಕರು ಮತ್ತು ಕೋಳಿ ಸಾಕಾಣಿಕೆದಾರರು ಮುಂಜಾಗ್ರತೆ ಕ್ರಮ ವಹಿಸಬೇಕು ಎಂದು ಜಿಲ್ಲಾ ಮಟ್ಟದ ಪ್ರಾಣಿಜನ್ಯ ರೋಗಗಳ ತುರ್ತು ನಿರ್ವಹಣಾ ಸಮಿತಿ ಅಧ್ಯಕ್ಷರೂ ಆದ ಜಿಲ್ಲಾಧಿಕಾರಿ ನಿತೀಶ್ ಕೆ. ಸೂಚನೆ ನೀಡಿದ್ದಾರೆ.

ಹಕ್ಕಿ-ಜ್ವರವು ನಾಟಿ ಕೋಳಿ, ಫಾರಂ ಕೋಳಿ, ಟರ್ಕಿ ಕೋಳಿ, ಕೌಜುಗ, ನವಿಲು, ಹಂಸ , ಬಾತುಕೋಳಿ ಇತ್ಯಾದಿ ಹಕ್ಕಿ ಪ್ರಬೇದಗಳಲ್ಲಿ ಕಂಡು ಬರುತ್ತದೆ.

ಮನುಷ್ಯನೊಳಗೊಂಡಂತೆ ಎಲ್ಲ ಬಿಸಿ ರಕ್ತ ಪ್ರಾಣಿಗಳಲ್ಲಿ ಕಂಡುಬರುವ ಕಾರಣ ಮುನ್ನೆಚ್ಚರಿಕೆ ವಹಿಸಬೇಕು ಎಂದು ಹೇಳಿದ್ದಾರೆ.ಕೋಳಿ ಅಥವಾ ಪಕ್ಷಿಗಳಲ್ಲಿ ಹಠಾತ್ ಸಾವು, ಸತ್ತ ಕೋಳಿಗಳ ಮೂಗು, ಬಾಯಿ ಮತ್ತು ಕಣ್ಣಿನಿಂದ ನೀರು ಸುರಿಯುವುದು. ಕೋಳಿಗಳ ಮೊಣಕಾಲು ಮತ್ತು ಪಾದಗಳು ನೀಲಿ ಬಣ್ಣಕ್ಕೆ ತಿರುಗುವುದು ಹಕ್ಕಿಜ್ವರದ ಲಕ್ಷಣಗಳಾಗಿವೆ.

ಸರಿಯಾಗಿ ಬೇಯಿಸದ ಕೋಳಿ ಮಾಂಸ ಮತ್ತು ಮೊಟ್ಟೆಗಳ ಸೇವನೆಯಿಂದ, ರಕ್ಷಕ ಕವಚಗಳನ್ನು ಧರಿಸದೇ ರೋಗ ಪೀಡಿತ ಕೋಳಿ ಮತ್ತು ಕುಲುಷಿತ ಸಲಕರಣೆಗಳ ಸಂಪರ್ಕದಿಂದ ಕಳೆದ ವಾರ ಪಕ್ಕದ ತೆಲಂಗಾಣ ರಾಜ್ಯದಲ್ಲಿ ಕೋಳಿ ಶೀತ ಜ್ವರ ಕಂಡು ಬಂದಿದೆ.ಕೋಳಿ ಫಾರಂ ಮಾಲೀಕರು ಜಿಲ್ಲೆಗೆ ಪ್ರವೇಶಿಸುವ ಸೋಂಕಿತ ಕೋಳಿ, ಕೋಳಿ ಉತ್ಪನ್ನಗಳು, ಕೋಳಿ ಆಹಾರ, ಸಂಬಂಧಿತ ಪರಿಕರಗಳು ಹಾಗೂ ಸಾಗಾಣಿಕೆ ವಾಹನಗಳನ್ನು ಸೋಂಕು ನಿವಾರಿಕಗಳಿಂದ ಸಿಂಪಡಿಸಿದ ನಂತರವೇ ಚಲನ-ವಲನಕ್ಕೆ ಕ್ರಮವಹಿಸುವುದು. ತಮ್ಮ ಫಾರಂ ಪ್ರದೇಶವನ್ನು ಶುಚಿಯಾಗಿಟ್ಟುಕೊಳ್ಳುವುದು ಹಾಗೂ ನಿಯಮಿತವಾಗಿ ಸೋಂಕು ನಿವಾರಕ ದ್ರಾವಣ ಸಿಂಪಡಿಸಬೇಕು.. ವಲಸೆ ಬರುವ ಅಥವಾ ಅಲ್ಲಿಯೇ ವಾಸಿಸುವ ಹಕ್ಕಿ ಪಕ್ಷಿಗಳು ಫಾರಂ ಪ್ರವೇಶಿಸದಂತೆ ಹಾಗೂ ಫಾರಂನಲ್ಲಿನ ಕೋಳಿ, ಕೋಳಿ ಆಹಾರ, ಕುಡಿಯುವ ನೀರಿನ ಸಂಪರ್ಕಕ್ಕೆ ಬರದಂತೆ ಕ್ರಮವಹಿಸುವುದು ಎಂದು ಸೂಚಿಸಿದ್ದಾರೆ.

ಒಡೆದ ಕೋಳಿ ಮೊಟ್ಟೆ ಹಾಗೂ ಸತ್ತ ಕೋಳಿಗಳನ್ನು ಸುಡಬೇಕು. ಕೋಳಿಗಳು ಅಸಹಜ ರೀತಿಯಲ್ಲಿ ಮೃತಪಟ್ಟರೆ ಸಮೀಪದ ಪಶುವೈದ್ಯಕೀಯ ಸಂಸ್ಥೆಯ ಅಧಿಕಾರಿ, ಸಿಬ್ಬಂದಿಗೆ ಮಾಹಿತಿ ನೀಡಬೇಕು. ಮಾದರಿಗಳನ್ನು ಸಂಗ್ರಹಿಸಲು ಸಹಕರಿಸಬೇಕು ಎಂದು ಹೇಳಿದ್ದಾರೆ.ಹೆಚ್ಚಿನ ಸಂಖ್ಯೆಯಲ್ಲಿ ಕೋಳಿಗಳು ಅಸಹಜ ಸಾವನ್ನಪ್ಪಿದರೆ, ತಕ್ಷಣವೇ ಹತ್ತಿರದ ಪಶುವೈದ್ಯರು ಅಥವಾ ಸಿಬ್ಬಂದಿಯವರ ಗಮನಕ್ಕೆ ತರಬೇಕು. ರೋಗ ನಿಯಂತ್ರಣ ಹಾಗೂ ಆರೋಗ್ಯ ರಕ್ಷಣೆಯ ಹಿತದೃಷ್ಠಿಯಿಂದ ಕೋಳಿ ಫಾರಂಗಳಿಗೆ ಅನುಮತಿಯಿಲ್ಲದೇ ಪ್ರವೇಶಿಸಬಾರದು ಎಂದು ತಿಳಿಸಿದ್ದಾರೆ.ಕೆರೆ, ಕಟ್ಟೆ, ನೀರಿನ ತೋರೆ, ನದಿ ಮತ್ತು ಇತರೇ ನೀರಿನ ಜಾಗಕ್ಕೆ ವಲಸೆ ಬರುವ ಅಥವಾ ಅಲ್ಲಿಯೇ ವಾಸಿಸುವ ಹಕ್ಕಿ ಪಕ್ಷಿಗಳು ಅಸಹಜವಾಗಿ ಸತ್ತರೆ ತಕ್ಷಣವೇ ಪಶುವೈದ್ಯಕೀಯ ಇಲಾಖೆಯ ಗಮನಕ್ಕೆ ತರಬೇಕು. 70 ಡಿಗ್ರಿ ಸೇಂಟಿಗ್ರೇಡ್ ನಲ್ಲಿ ಹತ್ತು ನಿಮಿಷ ಕೋಳಿ ಮಾಂಸ ಮತ್ತು ಮೊಟ್ಟೆಯನ್ನು ಬೇಯಿಸಿ ಸೇವಿಸುವುದು ಒಳ್ಳೆಯದು ಎಂದು ಸಲಹೆ ನೀಡಿದ್ದಾರೆ.ಹೆಚ್ಚಿನ ಮಾಹಿತಿಗಾಗಿ ಪಶು ಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯ ಆಯಾ ತಾಲ್ಲೂಕಿನಲ್ಲಿರುವ ಪಶು ವೈದ್ಯಾಧಿಕಾರಿಗಳನ್ನುಸಂಪರ್ಕಿಸಬೇಕು ಎಂದು ತಿಳಿಸಿದ್ದಾರೆ.

ವರದಿ: ವಿಶ್ವನಾಥ್ ಸಾಹುಕಾರ್ tv8kannada ರಾಯಚೂರು

Related Articles

Leave a Reply

Your email address will not be published. Required fields are marked *

Back to top button