ಅತಿಥಿ ಉಪನ್ಯಾಸಕರ ಸಮಸ್ಯೆ ಪರಿಹರಿಸಲು ಸಮಿತಿ ರಚನೆ..
ಬೆಳಗಾವಿ,ಡಿ.17-ಅತಿಥಿ ಉಪನ್ಯಾಸಕರ ಸಮಸ್ಯೆ ಪರಿಹರಿಸಲು ಉನ್ನತ ಅಧಿಕಾರಿಗಳ ಸಮಿತಿ ರಚಿಸಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವಥ್ ನಾರಾಯಣ ವಿಧಾನಸಭೆಗೆ ತಿಳಿಸಿದರು.ಶೂನ್ಯವೇಳೆಯಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಜೆಡಿಎಸ್ ಶಾಸಕ ಲಿಂಗೇಶ್ ಅವರು ಮಾಡಿದ ಪ್ರಸ್ತಾಪಕ್ಕೆ ಉತ್ತರಿಸಿದ ಸಚಿವರು, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಕುಮಾರ್ ನಾಯಕ್, ಆರ್ಥಿಕ ಇಲಾಖೆ, ಕಾನೂನು ಇಲಾಖೆ ಕಾರ್ಯದರ್ಶಿಗಳು ಹಾಗೂ ಕಾಲೇಜು ಶಿಕ್ಷಣ ಇಲಾಖೆಯ ಆಯುಕ್ತರನ್ನೊಳಗೊಂಡ ಸಮಿತಿ ರಚಿಸಲಾಗಿದೆ.
ಆ ಸಮಿತಿಯು ಒಂದು ತಿಂಗಳೊಳಗೆ ವರದಿ ನೀಡಲಿದ್ದು, ವರದಿ ಬಂದ ನಂತರ ಸೂಕ್ತ ತೀರ್ಮಾನ ಕೈಗೊಳ್ಳಲಾಗುವದು ಎಂದರು. ಕಾಲಕಾಲಕ್ಕೆ ಉಪನ್ಯಾಸಕರನ್ನು ನೇಮಕ ಮಾಡಿಕೊಳ್ಳದ ಹಿನ್ನೆಲೆಯಲ್ಲಿ ಅತಿಥಿ ಉಪನ್ಯಾಸಕರ ಸಂಖ್ಯೆ ಹೆಚ್ಚಾಗಿದೆ. ಅವರ ಸಮಸ್ಯೆಗಳ ಬಗ್ಗೆ ಸಹಾನೂಭೂತಿಯಿಂದ ಸರ್ಕಾರ ಸ್ಪಂದಿಸಲಿದೆ.
ತರಗತಿಗಳು ನಡೆಯುವಾಗ ಮಾತ್ರ ಅತಿಥಿ ಉಪನ್ಯಾಸಕರ ಸೇವೆ ಬಳಸಿಕೊಳ್ಳಲಾಗುತ್ತದೆ. ರಜೆ ಇದ್ದಾಗ ಅವರ ಸೇವೆ ಬಳಸಿಕೊಳ್ಳಲಾಗುವುದು. ಅವರು ಸೇವೆ ಸಲ್ಲಿಸಿದ ಅವಗೆ ಮಾತ್ರ ಸಂಬಳ ನೀಡಲಾಗುತ್ತದೆ ಎಂದರು.
ಇದಕ್ಕೂ ಮುನ್ನ ಮಾತನಾಡಿದ ಸಿದ್ದರಾಮಯ್ಯ, ಅತಿಥಿ ಉಪನ್ಯಾಸಕರನ್ನು ಖಾಯಂಗೊಳಿಸಬೇಕು. ವರ್ಷದ 12 ತಿಂಗಳು ಅವರಿಗೆ ಸಂಬಳ ನೀಡಬೇಕು ಎಂದರು. ಇದಕ್ಕೆ ದನಿಗೂಡಿಸಿದ ಜೆಡಿಎಸ್ ಶಾಸಕ ಲಿಂಗೇಶ್, ಒಂದು ವಾರದಿಂದ ಅತಿಥಿ ಉಪನ್ಯಾಸಕರ ಮುಷ್ಕರ ನಡೆಸುತ್ತಿದ್ದಾರೆ. ಮಾನವೀಯತೆಯಿಂದ ಪರಿಗಣಿಸಿ ಅವರನ್ನು ಖಾಯಂ ಮಾಡಬೇಕೆಂದು ಒತ್ತಾಯಿಸಿದರು.