ಸುದ್ದಿ

ರಾಜ್ಯ ಒಕ್ಕಲಿಗರ ಸಂಘದ ಚುನಾವಣೆ: ಗೆದ್ದವರಾರು?

ಬೆಂಗಳೂರು: ರಾಜ್ಯ ಒಕ್ಕಲಿಗರ ಸಂಘದ 35 ನಿರ್ದೇಶಕ ಸ್ಥಾನಗಳಿಗೆ ನಡೆದ ಚುನಾವಣೆಯ ಮತ ಎಣಿಕೆ ಬುಧವಾರ ನಡೆದಿದ್ದು, ಎಲ್ಲಾ ಸ್ಥಾನಗಳ ಫಲಿತಾಂಶ ತಡರಾತ್ರಿ ಪ್ರಕಟವಾಗಿದೆ.

ಪ್ರತಿಷ್ಠೆಯ ಕಣವಾಗಿದ್ದ ಈ ಚುನಾವಣೆಯಲ್ಲಿ ಕೆಂಪೇಗೌಡ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ವೈದ್ಯ ಡಾ. ಆಂಜನಪ್ಪ ಮತ್ತು ಕೆಂಚಪ್ಪ ಗೌಡ ಅವರ ಗುಂಪಿನ ಅಭ್ಯರ್ಥಿಗಳೇ ಹೆಚ್ಚಿನ ಸಂಖ್ಯೆಯಲ್ಲಿ ಜಯಗಳಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ವಿಧಾನ ಪರಿಷತ್‌ ಬಿಜೆಪಿ ಸದಸ್ಯ ಅ. ದೇವೇಗೌಡ, ನಿವೃತ್ತ ಕುಲಪತಿ ಕೆ. ನಾರಾಯಣಗೌಡ,   ಡಾ. ಆಂಜನಪ್ಪ, ಒಕ್ಕಲಿಗರ ಸಂಘದ ಮಾಜಿ ಅಧ್ಯಕ್ಷ ಕೆಂಚಪ್ಪಗೌಡ, ಸಂಘದ ಮಾಜಿ ನಿರ್ದೇಶಕ ಪ್ರೊ. ನಾಗರಾಜ್‌, ನಿವೃತ್ತ ಪೊಲೀಸ್‌ ಅಧಿಕಾರಿ ಎಸ್‌.ಕೆ. ಉಮೇಶ್‌, ವಕೀಲ ಎನ್‌.ಎಂ. ಸೊಣ್ಣೇಗೌಡ ಮೊದಲಾದವರು ತಮ್ಮದೇ ಗುಂಪು ಕಟ್ಟಿಕೊಂಡು ಸ್ಪರ್ಧೆಯಲ್ಲಿದ್ದರು.

ಬೆಂಗಳೂರು ನಗರ, ಗ್ರಾಮಾಂತರ ಮತ್ತು ರಾಮನಗರ ಜಿಲ್ಲೆ ಹಾಗೂ ತಮಿಳುನಾಡಿನ ಹೊಸೂರು ಜಿಲ್ಲಾ ಕ್ಷೇತ್ರಗಳನ್ನು ಒಳಗೊಂಡ 15 ಸ್ಥಾನಗಳಿಗೆ ಡಾ. ಎಚ್‌.ಟಿ. ಅಂಜನಪ್ಪ(68,398 ಮತ), ಎಚ್.ಎನ್. ಅಶೋಕ್(61,892), ಬಿ.ಕೆಂಚಪ್ಪಗೌಡ(58,‌066), ಆರ್.ಪ್ರಕಾಶ್(56,694), ಎಚ್‌ಸಿ. ಜಯಮುತ್ತು (56,254), ಸಿ.ದೇವರಾಜು ಹಾಪ್‌ಕಾಮ್ಸ್‌(55,903), ಶ್ರೀನಿವಾಸ್‌(49,217), ಸಿ.ಎಂ. ಮಾರೇಗೌಡ(48,492), ಬಿ.ವಿ. ರಾಜಶೇಖರಗೌಡ(46,180), ಕೆ.ಎಸ್. ಸುರೇಶ್‌(45,601), ಎಂ.ಎಸ್.ಉಮಾಪತಿ(44,709), ವೆಂಕಟರಾಮೇಗೌಡ(43,022), ಡಿ. ಹನುಮಂತಯ್ಯ ಚೋಳನಾಯಕನಹಳ್ಳಿ(41,687), ಎಂ. ಪುಟ್ಟಸ್ವಾಮಿ (41,165), ಡಾ. ವಿ. ನಾರಾಯಣಸ್ವಾಮಿ(40,728) ಆಯ್ಕೆಯಾಗಿದ್ದಾರೆ.

ಈ ಮೂರೂ ಜಿಲ್ಲೆಗಳಿಂದ ಒಟ್ಟು 141 ಅಭ್ಯರ್ಥಿಗಳು ಕಣದಲ್ಲಿದ್ದರು. ಈ ಹಿಂದಿನ ಅವಧಿಯಲ್ಲಿ 3–4 ಬಾರಿ ಸಮಿತಿಯಲ್ಲಿ ಇದ್ದವರ ಜೊತೆಗೆ, ಈ ಬಾರಿ ಹೊಸಬರು, ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಸ್ಪರ್ಧಿಸಿದ್ದರು. ಅನೇಕ ಬಣಗಳಿದ್ದುದರಿಂದ ಭಾರಿ ಜಿದ್ದಾಜಿದ್ದಿ ಏರ್ಪಟ್ಟಿತ್ತು. ಅಭ್ಯರ್ಥಿಗಳು ಮತದಾರರ ಮನಗೆಲ್ಲಲು ನಾನಾ ತಂತ್ರಗಳ ಮೊರೆ ಹೋಗಿದ್ದರು. ಆರೋಪ– ಪ್ರತ್ಯಾರೋಪಗಳ ಸುರಿಮಳೆಗೂ ಈ ಚುಣಾವಣೆ ಸಾಕ್ಷಿಯಾಗಿತ್ತು.

ಉಳಿದ ಜಿಲ್ಲೆಗಳ ಫಲಿತಾಂಶ
ಮೈಸೂರು; ಕೆ.ವಿ.ಶ್ರೀಧರ್, ಎಂ.ಬಿ.ಮಂಜೇಗೌಡ, ಸಿ.ಜಿ. ಗಂಗಾಧರ್
ಮಂಡ್ಯ; ಅಶೋಕ್ ಜಯರಾಮ್, ಮೂಡ್ಯಾ ಚಂದ್ರು, ರಾಘವೇಂದ್ರ, ನಲ್ಲಿಗೆರೆ ಬಾಲು
ಹಾಸನ; ಸಿ.ಎನ್. ಬಾಲಕೃಷ್ಣ, ಬಾಗೂರು ಮಂಜೇಗೌಡ, ರಘುಗೌಡ
ತುಮಕೂರು; ಹನುಮಂತರಾಯಪ್ಪ, ಲೋಕೇಶ್ ನಾಗರಾಜಯ್ಯ
ಕೋಲಾರ; ಡಾ.ರಮೇಶ್, ಕೋನಪ್ಪರೆಡ್ಡಿ, ಯಲವಳ್ಳಿ ರಮೇಶ್
ಕೊಡಗು; ಹರಪಳ್ಳಿ ರವೀಂದ್ರ
ಚಿಕ್ಕಮಗಳೂರು; ಪೂರ್ಣೇಶ್
ದಕ್ಷಿಣ ಕನ್ನಡ; ಡಾ. ರೇಣುಕಾಪ್ರಸಾದ್
ಶಿವಮೊಗ್ಗ; ಸಿರಿಬೈಲ್ ಧರ್ಮೇಶ್
ಚಿತ್ರದುರ್ಗ; ಜೆ. ರಾಜು

Related Articles

Leave a Reply

Your email address will not be published. Required fields are marked *

Back to top button