ಕತ್ರಿಗುಪ್ಪೆಯಲ್ಲಿ ಯುವತಿ ಆತ್ಮಹತ್ಯೆಗೆ ಯತ್ನ..
ಬೆಂಗಳೂರು: ಫೇಸ್ಬುಕ್ನಲ್ಲಿ ಅವಹೇಳನ ಮಾಡಿದ ಮಹಿಳೆ ಮನೆ ಮುಂದೆ ಯುವತಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಬನಶಂಕರಿ 3ನೇ ಹಂತದ ಕತ್ರಿಗುಪ್ಪೆಯಲ್ಲಿ ನಡೆದಿದೆ.
ಯುವತಿಯೋರ್ವಳು ಕತ್ರಿಗುಪ್ಪೆಯ ಉಷಾರಾಣಿ ಎನ್ನುವವರ ಮನೆ ಮುಂದೆ ಮಾತ್ರೆ ಸೇವಿಸಿ ಆತ್ಮಹತ್ಯೆ ಯತ್ನಿಸಿದ್ದಳು.
ಯುವತಿ ತಾಯಿ ಗೀತಾದೇವಿ ,ಉಷಾರಾಣಿ ಮತ್ತು ಉಮಾದೇವಿ ಒಂದೇ ಮಹಿಳಾ ಸಂಘಟನೆಯಲ್ಲಿ ಇದ್ದವರು. ವೈಯಕ್ತಿಕ ಕಾರಣಗಳಿಂದ ಈಗ ಬೇರೆ ಬೇರೆಯಾಗಿದ್ದಾರೆ. ಹಾಗಾಗಿ ಸದ್ಯ ಉಮಾದೇವಿ ಮತ್ತು ಉಷಾರಾಣಿ ಒಟ್ಟಿಗೆ ಇದ್ದು, ಗೀತಾದೇವಿ ಮಾತ್ರ ಇಬ್ಬರಿಂದ ದೂರವಾಗಿ ಪ್ರತ್ಯೇಕವಾಗಿದ್ದರು.
ಈ ಮೂವರ ಮಧ್ಯೆ ಆಗಾಗ ಆರೋಪ, ಪ್ರತ್ಯಾರೋಪದ ಫೇಸ್ಬುಕ್ ವಿಡಿಯೋ ವಾರ್ ನಡೆಯುತ್ತಲೇ ಇರುತಿತ್ತು. ಇತ್ತೀಚೆಗೆ ಯುವತಿ ತಾಯಿ ಗೀತಾದೇವಿ ವಿರುದ್ಧ ಅವಹೇಳನ ವಿಡಿಯೋ ಮಾಡಿ ಫೇಸ್ಬುಕ್ನಲ್ಲಿ ಹರಿಬಿಟ್ಟಿದ್ದ ಉಷಾರಾಣಿ, ಗೀತಾದೇವಿ ಹಾಗೂ ಆಕೆಯ ಮಗಳ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದಾಳೆ.
ಇದರಿಂದ ಮನನೊಂದ ಯುವತಿ ಸ್ನೇಹಿತರಿಗೆ, ನೆರೆಹೊರೆಯವರಿಗೆ ಹೇಗೆ ಮುಖ ತೋರಿಸಲಿ ಎಂದು ಮನನೊಂದು, ಉಷಾರಾಣಿಯ ಕತ್ರಿಗುಪ್ಪೆ ಮನೆ ಬಳಿ ಬಂದು ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಕೂಡಲೇ ಸ್ಥಳೀಯರು ಯುವತಿಯನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಘಟನೆ ಸಂಬಂಧ ಉಮಾದೇವಿ, ಉಷಾರಾಣಿ, ಶಿವಣ್ಣ, ಚಾಯಾದೇವಿ, ಶರ್ಮಾ ಸೇರಿದಂತೆ ಐವರ ವಿರುದ್ಧ ಸಿ.ಕೆ.ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಇನ್ನು ಯುವತಿ ತಾಯಿಯ ಮೇಲೂ ಹಲವು ದೂರುಗಳಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.