ದೇಶ

ಸಂಸತ್ತಿನಲ್ಲಿ ಬಿಜೆಪಿ ವಿರುದ್ಧ ಧ್ವನಿ ಎತ್ತಲು ಸಿದ್ಧತೆ…

ನವದೆಹಲಿ: ಮುಂಬರುವ ಸಂಸತ್ತಿನ ಅಧಿವೇಶನದಲ್ಲಿ ಒಗ್ಗಟ್ಟಿನ ಧ್ವನಿ ಎತ್ತುವ ಉದ್ದೇಶದಿಂದ ಕಾಂಗ್ರೆಸ್ ಪಕ್ಷವು ತೃಣಮೂಲ ಕಾಂಗ್ರೆಸ್ ಸೇರಿದಂತೆ ಸಮಾನ ಮನಸ್ಕ ವಿರೋಧ ಪಕ್ಷಗಳನ್ನು ಸಂಪರ್ಕಿಸಿ ಮೋದಿ ನೇತೃತ್ವದ ಸರ್ಕಾರದ ಮೇಲೆ ದಾಳಿ ಮಾಡಲು ತಯಾರಿ ಮಾಡಿಕೊಳ್ಳುತ್ತಿದೆ.

ಪಕ್ಷದ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ನಿವಾಸದಲ್ಲಿ ನಡೆದ ಕಾಂಗ್ರೆಸ್ ಸಂಸದೀಯ ಕಾರ್ಯತಂತ್ರ ಸಮಿತಿ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

ಸಂಸತ್ತಿನಲ್ಲಿ ಈ ವಿಷಯಗಳ ಬಗ್ಗೆ ವಿರೋಧ ಪಕ್ಷಗಳನ್ನು ಒಗ್ಗೂಡಿಸುವ ಪ್ರಯತ್ನದ ಭಾಗವಾಗಿ ನಾವು ವಿವಿಧ ಪಕ್ಷಗಳ ನಾಯಕರನ್ನು ಕರೆದಿದ್ದೇವೆ ಎಂದು ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಮಾಹಿತಿ ನೀಡಿದ್ದಾರೆ.

ಕುತೂಹಲಕಾರಿ ವಿಷಯ ಎಂದರೆ ಮೇಘಾಲಯದಲ್ಲಿ 12 ಶಾಸಕರು ಸೇರಿದಂತೆ ಹಲವಾರು ಕಾಂಗ್ರೆಸ್ ಸದಸ್ಯರು ಟಿಎಂಸಿ ಸೇರಿಕೊಂಡ ನಂತರ ಇದು ಎರಡು ಪಕ್ಷಗಳ ನಡುವಿನ ಸಂಬಂಧವನ್ನು ಸ್ವಲ್ಪ ಹದಗೆಡಿಸಿದಂತೆ ಆಗಿದೆ.

ಇನ್ನು ಅಧಿವೇಶನದ ಮೊದಲ ದಿನವೇ ಮೂರು ವಿವಾದಾತ್ಮಕ ಕೃಷಿ ಕಾನೂನುಗಳನ್ನು ಹಿಂಪಡೆಯಲು ಒತ್ತಾಯಿಸಲು ಸಮಿತಿಯು ನಿರ್ಧರಿಸಿದೆ ಮತ್ತು ಪ್ರತಿಭಟನಾ ನಿರತ ರೈತರ ಬೇಡಿಕೆಯಂತೆ ಬೆಳೆಗಳಿಗೆ ಎಂಎಸ್‌ಪಿ ಖಾತರಿಗಾಗಿ ಪ್ರತ್ಯೇಕ ಕಾನೂನನ್ನು ರಚಿಸುವಂತೆ ಕೇಂದ್ರವನ್ನು ಕೋರಲಿದೆ.

ಲಖೀಂಪುರ ಖೇರಿ ಹಿಂಸಾಚಾರದ ವಿಷಯವನ್ನು ಸಂಸತ್ತಿನಲ್ಲಿ ಪ್ರಸ್ತಾಪಿಸಲು ಹೊರಟಿರುವ ಕಾಂಗ್ರೆಸ್, ಈ ಪ್ರಕರಣದಲ್ಲಿ ಅವರ ಪುತ್ರನ ಕೈವಾಡದ ಆರೋಪದ ಮೇಲೆ ಗೃಹ ಖಾತೆ ರಾಜ್ಯ ಸಚಿವ ಅಜಯ್ ಕುಮಾರ್ ಮಿಶ್ರಾ ಅವರನ್ನು ವಜಾಗೊಳಿಸುವಂತೆ ಒತ್ತಾಯಿಸಲಿದೆ.

ಮೂಲಗಳ ಪ್ರಕಾರ ಮುಂಬರುವ ಸಂಸತ್ತಿನ ಅಧಿವೇಶನದಲ್ಲಿ ಪಕ್ಷವು 18 ವಿಷಯಗಳನ್ನು ಪ್ರಸ್ತಾಪಿಸಲಿದೆ. ಹಣದುಬ್ಬರ, ಕೋವಿಡ್ ದುರುಪಯೋಗ, ರೈತರ ಪ್ರತಿಭಟನೆ, ಪೆಗಾಸಸ್, ರಫೇಲ್ ಮತ್ತು ಇಂಡೋ-ಚೀನಾ ಗಡಿ ಸಮಸ್ಯೆಗಳು ಪ್ರಮುಖವಾದ ವಿಷಯಗಳಾಗಿವೆ.

ಹಾಗೆ ಕೋವಿಡ್ ನಿಂದಾಗಿ ಸಾವಿಗೀಡಾದ ಮೃತರ ಕುಟುಂಬಗಳಿಗೆ 4 ಲಕ್ಷ ರೂಪಾಯಿ ಪರಿಹಾರದ ಬೇಡಿಕೆಯನ್ನು ಕಾಂಗ್ರೆಸ್ ಎತ್ತಲಿದೆ. ಇದೆಲ್ಲದರ ನಡುವೆ ಈಗ ಸಂಸತ್ತಿನ ಸೆಂಟ್ರಲ್ ಹಾಲ್‌ನಲ್ಲಿ ನಡೆಯುವ ಸಂವಿಧಾನ ದಿನಾಚರಣೆಯಲ್ಲಿ ಕಾಂಗ್ರೆಸ್ ಸಂಸದರು ಭಾಗವಹಿಸುತ್ತಿಲ್ಲ ಎಂದು ಮೂಲಗಳು ಹೇಳಿವೆ.

Related Articles

Leave a Reply

Your email address will not be published. Required fields are marked *

Back to top button