ರಾಜ್ಯ

ನವೆಂಬರ್ 27ರವರೆಗೆ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮಳೆ

ಬೆಂಗಳೂರು, ನವೆಂಬರ್ 23: ಮುಂದಿನ ನಾಲ್ಕು ದಿನ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ.

ಬಾಗಲಕೋಟೆ, ಬೆಳಗಾವಿ, ಧಾರವಾಡ, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ, ಉತ್ತರ ಕನ್ನಡ, ದಕ್ಷಿಣ ಕನ್ನಡ,ಉಡುಪಿ, ಬಳ್ಳಾರಿ, ಬೆಂಗಳೂರು ಗ್ರಾಮಾಮತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಹಾಸನ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ಶಿವಮೊಗ್ಗ, ತುಮಕೂರಿನಲ್ಲಿಇ ಮಳೆಯಾಗಲಿದೆ.

ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತವಾದ ಹಿನ್ನೆಲೆಯಲ್ಲಿ ಕಳೆದೊಂದು ವಾರದಿಂದ ರಾಜ್ಯದ ವಿವಿಧೆಡೆ ನಿರಂತರವಾಗಿ ಸುರಿಯುತ್ತಿದ್ದ ಮಳೆ ಸೋಮವಾರವೂ ಬಹುತೇಕ ಜಿಲ್ಲೆಗಳಲ್ಲಿ ಕಡಿಮೆಯಾಗಿದೆ.

ಆದರೆ ಮಳೆ ಹಾನಿ ಮಾತ್ರ ಮುಂದುವರಿಯುವುದರೊಂದಿಗೆ ಅಸ್ತವ್ಯಸ್ತವಾಗಿರುವ ಜನಜೀವನ ಸಹಜಸ್ಥಿತಿಗೆ ಮರಳಲು ವಿಳಂಬವಾಗಿದೆ. ರಕ್ಷಣಾ ಕಾರ್ಯಗಳು ಮುಂದುವರಿದಿವೆ. ಈ ನಡುವೆ ವ್ಯಕ್ತಿಯೊಬ್ಬ ನೀರುಪಾಲಾದ ಘಟನೆ ಚಿತ್ರದುರ್ಗ ಜಿಲ್ಲೆಯ ಹಿರಿಯೂರಿನಿಂದ ವರದಿಯಾಗಿದೆ.

ಭಾರೀ ಮಳೆಗೆ ತತ್ತರಿಸಿರುವ ಬಳ್ಳಾರಿ, ಹಾವೇರಿ, ಚಿಕ್ಕಮಗಳೂರು, ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು ಜಿಲ್ಲೆಗಳಲ್ಲಿ ಭಾನುವಾರ ಮಳೆಯಾಗಲಿಲ್ಲ. ಗದಗ ಜಿಲ್ಲೆಯಲ್ಲಿ ಮಾತ್ರ 1 ಗಂಟೆಗೂ ಅಧಿಕ ಕಾಲ ಜಡಿಮಳೆಯಾಗಿದೆ. ದಕ್ಷಿಣ ಕನ್ನಡ, ಕೊಡಗು ಸೇರಿ ಕೆಲವೆಡೆ ತುಂತುರು ಮಳೆಯಾಗಿದ್ದು ದಿನವಿಡೀ ಮೋಡ ಕವಿದ ವಾತಾವರಣವಿತ್ತು. ಹೀಗಾಗಿ ಮತ್ತೆ ಎಲ್ಲಿ ಮಳೆ ಅಬ್ಬರಿಸುವುದೋ ಎಂಬ ಆತಂಕ ಮಾತ್ರ ದೂರವಾಗಿಲ್ಲ.

ತುಂಗಭದ್ರಾ ಜಲಾಶಯದ ಒಳಹರಿವಿನಲ್ಲಿ ಭಾರಿ ಏರಿಕೆಯಾಗಿರುವ ಹಿನ್ನೆಲೆ ಜಲಾಶಯದಿಂದ ನದಿಗೆ ಒಂದು ಲಕ್ಷಕ್ಕೂ ಅಧಿಕ ಕ್ಯುಸೆಕ್‌ ನೀರನ್ನು ನದಿಗೆ ಹರಿಸಲಾಯಿತು. ಇದರಿಂದಾಗಿ ಹಂಪಿಯ ಸ್ಮಾರಕಗಳು ಜಲಾವೃತವಾಗಿವೆ. ಸ್ನಾನಘಟ್ಟ, ರಾಮ-ಲಕ್ಷ್ಮಣರ ದೇಗುಲ, ಚಕ್ರತೀರ್ಥ, ಕೋಟಿಲಿಂಗ, ಕಂಪಭೂಪ ಮಾರ್ಗಕ್ಕೆ ನೀರು ನುಗ್ಗಿದ್ದು, ಪುರಂದರದಾಸರ ಮಂಟಪ ಸಂಪೂರ್ಣ ಮುಳುಗಡೆಯಾಗಿದೆ.

ಬಳ್ಳಾರಿಯಲ್ಲಿ 17,190 ಹೆಕ್ಟೇರ್‌ ಕೃಷಿ ಮತ್ತು ತೋಟಗಾರಿಕೆ ಬೆಳೆಹಾನಿಯಾಗಿದ್ದು 118 ಮನೆಗಳು ಭಾಗಶಃ ಜಖಂಗೊಂಡಿವೆ. ಕೊಟ್ಟೂರು ತಾಲೂಕಿನಲ್ಲಿ 2 ದಿನಗಳಿಂದ ಸುರಿದ ಮಳೆಗೆ ನೆನೆದು ಶೆಟೆರೋಗದಿಂದ ಅಂದಾಜು 50ಕ್ಕೂ ಅಧಿಕ ಕುರಿಗಳು ಮತ್ತು ಮೇಕೆಗಳು ಸಾವಿಗೀಡಾಗಿವೆ. ಹಾವೇರಿ ಜಿಲ್ಲೆಯಲ್ಲಿ ಒಟ್ಟು 1153 ಮನೆಗಳು ಹಾನಿಯಾಗಿವೆ.

ತಗ್ಗು ಪ್ರದೇಶದಲ್ಲಿ ಮನೆಗಳಿಗೆ ನೀರು ನುಗ್ಗಿದ ಕಾರಣ ಏಳು ಕಾಳಜಿ ಕೇಂದ್ರಗಳನ್ನು ತೆರೆದು 137 ಕುಟುಂಬಗಳ 750 ಸಂತ್ರಸ್ತರು, ನಾಲ್ಕು ಜಾನುವಾರುಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. 18 ಜಾನುವಾರುಗಳ ಜೀವಹಾನಿಯಾಗಿದೆ. 15 ರಸ್ತೆ ಸಂಪರ್ಕಗಳು ಕಡಿತಗೊಂಡಿವೆ. 125 ಅಂಗನವಾಡಿ ಕಟ್ಟಡಗಳಿಗೆ ಹಾನಿಯಾಗಿದೆ.

ದಾವಣಗೆರೆ ಜಿಲ್ಲಾದ್ಯಂತ 97 ಮನೆಗಳು ಧರೆಗುರುಳಿದ್ದು, 5 ದನದ ಕೊಟ್ಟಿಗೆ ನಾಶವಾಗಿದೆ. ದೇವರ ಬೆಳಕೆರೆ ಪಿಕಪ್‌ ಡ್ಯಾಂನ ಹಿನ್ನೀರಿನಲ್ಲಿ ತೋಟದ ಮನೆಯಲ್ಲಿ ಸಿಲುಕಿದ್ದ ಮೂವರನ್ನು ರಕ್ಷಿಸುವಲ್ಲಿ ಆಡಳಿತ ಯಂತ್ರ ಯಶಸ್ವಿಯಾಗಿದೆ.

ಮಳೆಯಾಗಿರುವ ಪ್ರದೇಶಗಳು

ಮಾಗಡಿ, ಹೆಸರಘಟ್ಟ, ಬೇಲೂರು, ಹೊಸಕೋಟೆ, ಸುಬ್ರಹ್ಮಣ್ಯ, ನೆಲಮಂಗಲ, ಕುಂದಾಪುರ, ಸಿದ್ದಾಪುರ, ಮುದಗಲ್, ಕುಷ್ಟಗಿ, ಶಿಕಾರಿಪುರ, ಹೊಳೆನರಸೀಪುರ, ಹಾಸನ, ಜ್ಷಾನಭಾರತಿ, ಕುಣಿಗಲ್, ದೊಡ್ಡಬಳ್ಳಾಪುರ, ಕೊಲ್ಲೂರು, ಕೋಟ, ಮಂಗಳೂರು, ಇಳಕಲ್, ಜಯಪುರ, ಐಟಿಸಿ ಜಾಲ, ಹೊಸದುರ್ಗ, ಅರಕಲಗೂಡು, ಕುಡತಿನಿಯಲ್ಲಿ ಮಳೆಯಾಗಿದೆ.

Related Articles

Leave a Reply

Your email address will not be published. Required fields are marked *

Back to top button