ದೇಶ

ಗುಜರಾತ್ ವಿಧಾನಸಭೆಯ ಮೊದಲ ಮಹಿಳಾ ಸ್ಪೀಕರ್ ಆಗಲು ಬಿಜೆಪಿ ಶಾಸಕಿ ನಿಮಬೆನ್ ಆಚಾರ್ಯ ಸಜ್ಜು

ಅಹಮದಾಬಾದ್: ಬಿಜೆಪಿಯ ಹಿರಿಯ ಶಾಸಕಿ ನಿಮಬೆನ್ ಆಚಾರ್ಯ ಅವರು ಗುಜರಾತ್ ವಿಧಾನಸಭೆಯ ಮೊದಲ ಮಹಿಳಾ ಸ್ಪೀಕರ್ ಆಗಲು ಸಜ್ಜಾಗಿದ್ದಾರೆ. ಏಕೆಂದರೆ ವಿರೋಧ ಪಕ್ಷ ಕಾಂಗ್ರೆಸ್ ಸಹ ಆಚಾರ್ಯ ಅವರನ್ನು ಬೆಂಬಲಿಸಿದೆ.

ಮುಂಗಾರು ಅಧಿವೇಶನಕ್ಕು ಮುನ್ನ ಸೆಪ್ಟೆಂಬರ್ 27 ಮತ್ತು 28 ರಂದು ನಡೆಯುವ ಎರಡು ದಿನಗಳ ವಿಶೇಷ ಅಧಿವೇಶನದಲ್ಲಿ ಗುಜರಾತ್ ವಿಧಾನಸಭೆಯ ಮೊದಲ ಮಹಿಳಾ ಸ್ಪೀಕರ್ ಆಗಿ ನಿಮಬೆನ್ ಅವರು ಅವಿರೋಧವಾಗಿ ಆಯ್ಕೆಯಾಗುವ ಸಾಧ್ಯತೆಯಿದೆ.

ರಾಜೇಂದ್ರ ತ್ರಿವೇದಿ ಅವರು ಸೆಪ್ಟೆಂಬರ್ 16 ರಂದು ಸ್ಪೀಕರ್ ಹುದ್ದೆಗೆ ರಾಜೀನಾಮೆ ನೀಡಿ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರ ಹೊಸ ಸಂಪುಟದಲ್ಲಿ ಸಚಿವರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಅವರಿಂದ ತೆರವಾದ ಸ್ಥಾನಕ್ಕೆ ಆಚಾರ್ಯ ಅವರನ್ನು ಆಯ್ಕೆ ಮಾಡಲಾಗುತ್ತಿದೆ.

ತ್ರಿವೇದಿ ಅವರು ಈಗ ಬಿಜೆಪಿ ಸರ್ಕಾರದಲ್ಲಿ ಕಂದಾಯ ಹಾಗೂ ಸಂಸದೀಯ ವ್ಯವಹಾರಗಳ ಸಚಿವರಾಗಿದ್ದಾರೆ.

ಅಧಿವೇಶನಕ್ಕೆ ಮುಂಚಿತವಾಗಿ, ಅಸೆಂಬ್ಲಿ ಸೆಕ್ರೆಟರಿಯೇಟ್ ಹೊಸ ಸ್ಪೀಕರ್ ಮತ್ತು ಡೆಪ್ಯುಟಿ ಸ್ಪೀಕರ್ ಚುನಾವಣೆಗೆ ನಾಮಪತ್ರಗಳನ್ನು ಆಹ್ವಾನಿಸಿತ್ತು.

ಇಂದು ಪಕ್ಷದ ಮುಖ್ಯ ಸಚೇತಕ ಪಂಕಜ್ ದೇಸಾಯಿ ಅವರೊಂದಿಗೆ ತ್ರಿವೇದಿ ಅವರು ಸ್ಪೀಕರ್ ಹುದ್ದೆಗೆ ನಿಮಬೆನ್ ಆಚಾರ್ಯ ಮತ್ತು ಡೆಪ್ಯುಟಿ ಸ್ಪೀಕರ್ ಹುದ್ದೆಗೆ ಜೇಠಾ ಭರ್ವಾಡ್ ಅವರ ನಾಮಪತ್ರಗಳನ್ನು ಸಲ್ಲಿಸಿದರು.

ಪ್ರತಿಪಕ್ಷ ನಾಯಕ ಪರೇಶ್ ಧನಾನಿ ಕೂಡ ನಿಮಬೆನ್ ಅವರನ್ನು ಬೆಂಬಲಿಸಿದ್ದಾರೆ ಎಂದು ತ್ರಿವೇದಿ ಅವರು ಗಾಂಧಿನಗರದಲ್ಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button