faರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್(Reliance Industries Limited) ಮುಖ್ಯಸ್ಥ ಮುಖೇಶ್ ಅಂಬಾನಿ(Mukesh Ambani) ಹಾಗೂ ಅವರ ಕುಟುಂಬ ಲಂಡನ್(London)ಗೆ ವಲಸೆ ಹೋಗಲಿದ್ದಾರೆ ಎಂಬ ವದಂತಿಗಳು ಹರಡಿತ್ತು. ಇದಕ್ಕೆಲ್ಲ ಈಗ ರಿಲಯನ್ಸ್ ಸಂಸ್ಥೆ(Reliance Company) ತೆರೆ ಎಳೆದಿದೆ. ಈ ಬಗ್ಗೆ ಪತ್ರಿಕಾ ಪ್ರಕಟಣೆ(Press Note) ಹೊರಡಿಸಿದೆ. ರಿಲಿಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್, ಮುಖೇಶ್ ಅಂಬಾನಿ ಮತ್ತವರ ಕುಟುಂಬ ಭಾರತದಿಂದ ಹೊರಗೆ ವಾಸ್ತವ್ಯ ಹೂಡುವ ಯಾವುದೇ ಉದ್ದೇಶ ಹೊಂದಿಲ್ಲ ಎಂದು ಸ್ಪಷ್ಟಪಡಿಸಿದೆ. ಇತ್ತೀಚೆಗೆಷ್ಟೇ ಕೆಲವು ಸುದ್ದಿ ಮಾಧ್ಯಮಗಳಲ್ಲಿ ಮುಖೇಶ್ ಅಂಬಾನಿ ಹಾಗೂ ಅವರ ಕುಟುಂಬಸ್ಥರು ಲಂಡನ್ನ ಸ್ಟೋಕ್ ಪಾರ್ಕ್ಗೆ(Stoke Park, London) ಶಿಫ್ಟ್ ಆಗಲಿದ್ದಾರೆ ಎಂಬ ವಂದತಿ ಹಬ್ಬಿತ್ತು. ಈ ವದಂತಿಗಳ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಭಾರಿ ಚರ್ಚೆಯಾಗಿತ್ತು. ಈ ಕುರಿತಾಗಿ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಸ್ಪಷ್ಟೀಕರಣ ನೀಡಿದ್ದು ತಮ್ಮ ಸಂಸ್ಥೆಯ ಮುಖ್ಯಸ್ಥರು ಹಾಗೂ ಅವರ ಕುಟುಂಬ ಭಾರತ ಬಿಟ್ಟು ವಿಶ್ವದ ಇನ್ಯಾವುದೇ ರಾಷ್ಟಕ್ಕಾಗಲೀ ಸ್ಥಳಾಂತರ ಹೊಂದುವ ಇರಾದೆ ಹೊಂದಿಲ್ಲ ಎಂದು ತಿಳಿಸಿದೆ.
ರಿಲಯನ್ಸ್ ಮಾಧ್ಯಮ ಪ್ರಕಟಣೆಯಲ್ಲಿ ಏನಿದೆ?
ರಿಲಯನ್ಸ್ ಇಂಡಸ್ಟ್ರೀಸ್ ಸಮೂಹದ ಮುಖ್ಯಸ್ಥ ಮುಖೇಶ್ ಅಂಬಾನಿ ಮತ್ತು ಅವರ ಕುಟುಂಬದ ಸದಸ್ಯರು ಲಂಡನ್ನ ಸ್ಟೋಕ್ ಪಾರ್ಕ್ನಲ್ಲಿ ಭಾಗಶಃ ವಾಸಿಸುವ ಯೋಜನೆ ಕುರಿತಾದ ವರದಿ ಅಧಾರ ರಹಿತವಾದದ್ದು ಎಂದು ರಿಲಯನ್ಸ್ ಇಂಡಸ್ಟ್ರೀಸ್ ಸಮೂಹವು ಸ್ಪಷ್ಟ ಪಡಿಸಿದೆ. ಆಧಾರ ರಹಿತ ವರದಿಯು ಸಾಮಾಜಿಕ ಮಾಧ್ಯಮದಲ್ಲಿ ಊಹಾಪೋಹಗಳಿಗೆ ಕಾರಣವಾಗಿದೆ. ರಿಲಯನ್ಸ್ ಇಂಡಸ್ಟ್ರೀಸ್ ಸಮೂಹದ ಮುಖ್ಯಸ್ಥರು ಮತ್ತು ಅವರ ಕುಟುಂಬದ ಸದಸ್ಯರು ಲಂಡನ್ ನಲ್ಲಾಗಲೀ ಅಥವಾ ವಿಶ್ವದ ಬೇರೆ ಯಾವ ದೇಶಕ್ಕೂ ಸ್ಥಳಾಂತರಗೊಳ್ಳುವ ಅಥವಾ ವಾಸಿಸುವ ಉದ್ದೇಶ ಹೊಂದಿಲ್ಲ ಎಂದು ರಿಲಯನ್ಸ್ ಇಂಡಸ್ಟ್ರೀಸ್ ಸಮೂಹ ಸ್ಪಷ್ಟಪಡಿಸಿದೆ.
ಇತ್ತೀಚೆಗೆ ಸ್ಟೋಕ್ ಪಾರ್ಕ್ ಎಸ್ಟೇಟ್ ಅನ್ನು ಸ್ವಾಧೀನಪಡಿಸಿಕೊಂಡಿರುವ ರಿಲಯನ್ಸ್ ಸಮೂಹದ ಕಂಪನಿ ಅಗಿರುವ ಆರ್ ಐಐಎಚ್ಎಲ್, ತಾನು ಸ್ವಾಧೀನ ಪಡಿಸಿಕೊಳ್ಳುವಾಗ ಯೋಜನಾ ಮಾರ್ಗಸೂಚಿಗಳು ಮತ್ತು ಸ್ಥಳೀಯ ನಿಯಮಗಳನ್ನು ಸಂಪೂರ್ಣವಾಗಿ ಪಾಲಿಸಿ ಪಾರಂಪರಿಕ ಆಸ್ತಿಯನ್ನು ಸ್ವಾಧೀನಪಡಿಸಿಕೊಂಡಿರುವುದಾಗಿ ಸ್ಪಷ್ಟಪಡಿಸಿದೆ. ಸ್ವಾಧೀನ ಪಡಿಸಿಕೊಂಡಿರುವ ಆಸ್ತಿಯನ್ನು ಪ್ರಮುಖ ಗಾಲ್ಫ್ ಮತ್ತು ಕ್ರೀಡಾ ರೆಸಾರ್ಟ್ ಆಗಿ ಉನ್ನತೀಕರಿಸುವ ಉದ್ದೇಶ ಹೊಂದಿದೆ ಎಂದೂ ಸ್ಪಷ್ಟಪಡಿಸಿದೆ. ಸ್ಟೋಕ್ ಪಾರ್ಕ್ ಎಸ್ಟೇಟ್ ಸ್ವಾಧೀನವು ರಿಲಯನ್ಸ್ ಇಂಡಸ್ಟ್ರೀಸ್ ಸಮೂಹದ ತ್ವರಿತವಾಗಿ ಬೆಳೆಯುತ್ತಿರುವ ಗ್ರಾಹಕವಲಯದ ವ್ಯಾಪಾರ ವರ್ಗಕ್ಕೆ ಸೇರಿಸುತ್ತದೆ. ಈ ಬೆಳವಣಿಗೆಯು ಜಾಗತಿಕ ಐಷಾರಾಮಿ ಆತಿಥ್ಯ ಉದ್ಯಮದಲ್ಲಿ ಭಾರತದ ಹೆಜ್ಜೆಗುರುತನ್ನು ವಿಸ್ತರಿಸುತ್ತದೆ ಎಂದೂ ತಿಳಿಸಿದೆ.