ಸೋನಿ ಜೊತೆ ಕೈ ಸೇರಿಸಿದ ಜೀ: ಕುತೂಹಲ ಮೂಡಿಸಿದ ವಿಲೀನ
ಭಾರತೀಯ ಮನೊರಂಜನಾ ಕ್ಷೇತ್ರದ ಎರಡು ದಿಗ್ಗಜ ಸಂಸ್ಥೆಗಳಾದ ಸೋನಿ ಹಾಗೂ ಜೀ ಒಂದಾಗಿವೆ. ಸೋನಿ ಜೊತೆ ಜೀ ವಿಲೀನವಾಗಿದ್ದು, ಸೋನಿಯ ವ್ಯವಸ್ಥಾಪಕ ನಿರ್ದೇಶಕರೇ ಮುಂದೆಯೂ ವ್ಯವಸ್ಥಾಪಕ ನಿರ್ದೇಶಕರಾಗಿ ಕಾರ್ಯ ಮುಂದುವರೆಸಲಿದ್ದಾರೆ.
ಇದೊಂದು ಬಹಳ ಕುತೂಹಲ ಮೂಡಿಸಿರುವ, ಭವಿಷ್ಯದಲ್ಲಿ ಕಣ್ಣಿಟ್ಟಿರಬೇಕಾದ ಒಡಂಬಡಿಕೆ ಆಗಿದೆ. ಒಡಂಬಡಿಕೆ ಪ್ರಕಾರ ಸಂಸ್ಥೆಯ ಹೆಚ್ಚಿನ ಪಾಲುದಾರಿಕೆ ಸೋನಿ ಬಳಿ ಇರಲಿದೆ. ಜೀ ಸಂಸ್ಥೆ ಸೋನಿ ಸಂಸ್ಥೆಯ ಒಳಗೆ ವಿಲೀನವಾಗಿದ್ದು, ಜೀ 47.07 ಪಾಲುದಾರಿಕೆ ಹೊಂದಿದ್ದರೆ, ಸೋನಿ ಸಂಸ್ಥೆಯು 53.93 ಪಾಲುದಾರಿಕೆ ಹೊಂದಿದೆ. ಸಂಸ್ಥೆಯ ವ್ಯವಸ್ಥಾಪಕ ಮಂಡಳಿಯನ್ನು ಆಯ್ಕೆ ಮಾಡುವ ಹಾಗೂ ಇತರೆ ಕೆಲವು ಪ್ರಮುಖ ನಿರ್ಣಯವನ್ನು ತೆಗೆದುಕೊಳ್ಳುವ ಹಕ್ಕು ಸೋನಿ ಬಳಿಯೇ ಇದೆ.
ಸೋನಿ ಮೂಲತಃ ಅಮೆರಿಕದ ಸಂಸ್ಥೆಯಾಗಿದ್ದು ಭಾರತದಲ್ಲಿ ಬಹುದೊಡ್ಡ ಮಾರುಕಟ್ಟೆಯನ್ನು ಹೊಂದಿದೆ. ಜೀ ಭಾರತದಲ್ಲೇ ಸಂಸ್ಥೆಯಾಗಿದೆ ಅದೂ ಸಹ ದೊಡ್ಡ ಮಾರುಕಟ್ಟೆಯನ್ನು ಹೊಂದಿದೆ. ಈ ಎರಡೂ ದಿಗ್ಗಜ ಸಂಸ್ಥೆಗಳು ಪರಸ್ಪರ ಸೇರುತ್ತಿರುವುದರಿಂದ ಭಾರತದ ಮನೊರಂಜನಾ ಉದ್ಯಮದಲ್ಲಿ ಹೊಸ ಗಾಳಿ ಬೀಸುವ ಸಾಧ್ಯತೆ ದಟ್ಟವಾಗಿದೆ ಎಂದು ಊಹಿಸಲಾಗುತ್ತಿದೆ.
ಜೀ ಎಂಟರ್ಟೈನ್‌ಮೆಂಟ್ ಲಿಮಿಟೆಡ್ ಸಂಸ್ಥೆಯ 50 ಟಿವಿ ಚಾನೆಲ್‌ಗಳು ಭಾರತದಲ್ಲಿ ಪ್ರಸಾರವಾಗುತ್ತಿವೆ. ವಿದೇಶದಲ್ಲಿ 12 ಚಾನೆಲ್‌ಗಳು ಪ್ರಸಾರವಾಗುತ್ತಿದೆ. ಜೀನದ್ದು ಸ್ವಂತ ಪ್ರೊಡಕ್ಷನ್ ಹೌಸ್ ಸಹ ಇದ್ದು ಹಲವು ಸಿನಿಮಾಗಳನ್ನು ನಿರ್ಮಾಣವೂ ಮಾಡಿದೆ. ಜೊತೆಗೆ ಜೀ 5 ಹೆಸರಿನ ಒಟಿಟಿ ಇದ್ದು ಇದು ಸಹ ದೊಡ್ಡ ಸಂಖ್ಯೆಯ ಸಬ್‌ಸ್ಕ್ರೈಬರ್‌ಗಳನ್ನು ಹೊಂದಿದೆ. 32,000 ಕೋಟಿಗೂ ಹೆಚ್ಚಿನ ಮಾರುಕಟ್ಟೆ ಮೌಲ್ಯವನ್ನು ಹೊಂದಿರುವ ಜೀ ಸಂಸ್ಥೆಯು ವಾರ್ಷಿಕ ಅಂದಾಜು 800 ಕೋಟಿ ಲಾಭ ಗಳಿಸುತ್ತಿದೆ.
ಸೋನಿ ಸಂಸ್ಥೆ ಜಪಾನ್ ಸಂಸ್ಥೆಯಾಗಿದ್ದು ಸ್ಥಾಪನೆಯಾಗಿ ಕೇವಲ 9 ವರ್ಷದಲ್ಲಿ ದೊಡ್ಡ ಮಟ್ಟದ ಯಶಸ್ಸು ಗಳಿಸಿದೆ. ಕೊಲಂಬಿಯಾ ಸೇರಿದಂತೆ ಹಲವು ಪ್ರೊಡಕ್ಷನ್ ಸಂಸ್ಥೆಯನ್ನು ಹೊಂದಿರುವ ಸೋನಿ ವಿಶ್ವದ ಅತ್ಯುತ್ತಮ ಸಿನಿಮಾ ಹಾಗೂ ಸಂಗೀತ ನಿರ್ಮಾಣ ಸಂಸ್ಥೆಗಳಲ್ಲಿ ಒಂದಾಗಿದೆ. ಸೋನಿಯ ಷೇರುಗಳು ಅಮೆರಿಕದ ಷೇರು ಮಾರುಕಟ್ಟೆಯಲ್ಲಿ ಲಿಸ್ಟೆಡ್ ಆಗಿದ್ದು ದೊಡ್ಡ ಮೌಲ್ಯವನ್ನು ಕಂಪೆನಿ ಹೊಂದಿದೆ.
ಸೋನಿ ಸಂಸ್ಥೆಯ ಜೊತೆ ಜೀ ಸಂಸ್ಥೆಯು ವಿಲೀನವಾದ ಸುದ್ದಿ ಹೊರಬೀಳುತ್ತಿದ್ದಂತೆ ಇಂದು ಜೀ ಸಂಸ್ಥೆಯ ಶೇರುಗಳು 24% ಹೆಚ್ಚಾಗಿದೆ. ಹೂಡಿಕೆದಾರರು ಉತ್ಸಾಹದಿಂದ ಜೀ ಷೇರುಗಳನ್ನು ಖರೀದಿಸಿದ್ದಾರೆ. ಜೀ ಮತ್ತು ಸೋನಿ ಸಂಸ್ಥೆಯ ವಿಲೀನದ ಬಗ್ಗೆ ಮಾತನಾಡಿರುವ ಜೀ ಸಂಸ್ಥೆಯ ಚೇರ್‌ಮನ್ ಗೋಪಾಲನ್, ”ಈ ವಿಲೀನವು ನಮ್ಮ ಸಂಸ್ಥೆಯ ವ್ಯವಹಾರವನ್ನು ವಿಸ್ತರಿಸಲಿದೆ ಹಾಗೂ ನಮ್ಮ ಸಂಸ್ಥೆಯ ಹೂಡಿಕೆದಾರರಿಗೆ ದೊಡ್ಡ ಮೊತ್ತದ ಲಾಭವನ್ನು ತಂದುಕೊಡಲಿದೆ” ಎಂದಿದ್ದಾರೆ.
ಈ ವಿಲೀನದಿಂದ ಎರಡೂ ಕಂಪೆನಿಗಳ ಸ್ಯಾಟಲೈಟ್ ಉತ್ಪನ್ನಗಳು, ಡಿಜಿಟಲ್ ಉತ್ಪನ್ನಗಳು, ನಿರ್ಮಾಣ ಕಾರ್ಯಗಳು, ಈಗಾಗಲೇ ಇರುವ ಉತ್ಪನ್ನಗಳ ಮೇಲೆ ಎರಡೂ ಸಂಸ್ಥೆಗಳಿಗೆ ಪರಸ್ಪರ ಹಕ್ಕಿದೆ. ಆದರೆ ಮಾರುಕಟ್ಟೆ ನಿರ್ಧಾರಗಳನ್ನು ತೆಗೆದುಕೊಳ್ಳುವ ಹೆಚ್ಚಿನ ಹಕ್ಕು ಸೋನಿ ಸಂಸ್ಥೆಯ ಬಳಿಯೇ ಇದೆ. ಸೋನಿ ಜೊತೆ ವಿಲೀನವಾಗಿರುವ ಕಾರಣ ಜೀ 5 ಒಟಿಟಿಯಲ್ಲಿ ಸೋನಿ ಸಂಸ್ಥೆಯ ಹಲವು ಹಾಲಿವುಡ್ ಸಿನಿಮಾಗಳು ಸಿಗುವ ಸಾಧ್ಯತೆ ಇದೆ. ಜೀ 5 ಒಟಿಟಿ ಇನ್ನಷ್ಟು ದೊಡ್ಡದಾಗಿ ಬೆಳೆಯುವ ಸಾಧ್ಯತೆಯೂ ಇದೆ.