RIP Puneeth Rajkumar: ಕಳೆದ ಒಂದೂವರೆ ವರ್ಷದಲ್ಲಿ ಕನ್ನಡ ಚಿತ್ರರಂಗ ಎರಡು ಅತಿ ದೊಡ್ಡ ಆಘಾತಗಳನ್ನು ಕಂಡಿದ್ದಾರೆ. ಒಂದು ಕಳೆದ ವರ್ಷ ಜನವರಿಯಲ್ಲಿ ಕೇವಲ 39 ವರ್ಷಕ್ಕೆ ಉಸಿರು ಚೆಲ್ಲಿದ ಚಿರಂಜೀವಿ ಸರ್ಜಾ (Chiranjeevi Sarja) ಸಾವು…ಮತ್ತೊಂದು ಅಕ್ಟೋಬರ್ನಲ್ಲಿ ಧಿಡೀರನೆ ಮರೆಯಾದ ಪವರ್ ಸ್ಟಾರ್ (Power Star) ಪುನೀತ್ ರಾಜ್ಕುಮಾರ್ ಅಂತ್ಯ. ಈ ಎರಡೂ ಬಹುಶಃ ಬಹು ದೀರ್ಘಕಾಲದವರಗೆ ಜನರನ್ನು ಕಾಡುವ ನೋವುಗಳು. ಅಭಿಮಾನಿಗಳಿಗೆ, ಈ ನಟರ ಪರಿಚಯವೇ ಇಲ್ಲದವರನ್ನೇ ಅವರ ಸಾವು ಇಷ್ಟರಮಟ್ಟಿಗೆ ತಟ್ಟಿರುವಾಗ ಅವರ ಕುಟುಂಬಸ್ಥರ ಪಾಡು ಹೇಗಿರಬೇಡ. ಅಪ್ಪು ವಯಸ್ಸು ಕೇವಲ 46.. ಇದು ಸಾಯುವ ವಯಸ್ಸಾ? (Age of death) ಎನ್ನುವ ಪ್ರಶ್ನೆ ಇನ್ನೂ ಹರಿದಾಡುತ್ತಲೇ ಇದೆ. ಸಣ್ಣ ವಯಸ್ಸಿನಲ್ಲೇ ಧಿಡೀರನೆ ಎದ್ದು ಹೋದ ಈ ಇಬ್ಬರೂ ಕಲಾವಿದರು ಬಹು ದೊಡ್ಡ ಪಾಠ ಕಲಿಸಿ ಹೋಗಿದ್ದಾರೆ. ಆ ಬದುಕಿನ ಪಾಠವನ್ನು (Life’s Lessons) ನಾವು ಕಲಿಯಬೇಕಿದೆ..ಹೀಗಂದಿದ್ದು ನಟಿ ಮೇಘನಾ ರಾಜ್ (Meghana Raj).
ಅಭಿಮಾನಿಯೊಬ್ಬರು ಕಳಿಸಿದ ಪುನೀತ್ ರಾಜ್ಕುಮಾರ್ ಮತ್ತು ಚಿರಂಜೀವಿ ಸರ್ಜಾ ಜೊತೆಗಿರುವ ಚಿತ್ರವೊಂದನ್ನು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡ ಮೇಘನಾ ಈ ಇಬ್ಬರೂ ನಮಗೆ ಬದುಕಿನ ಪಾಠ ಕಲಿಸಿಕೊಟ್ಟು ಹೋಗಿದ್ದಾರೆ ಎಂದಿದ್ದಾರೆ. ಚಿರಂಜೀವಿ ಸರ್ಜಾ ಕೂಡಾ ಯಾವುದೇ ಪೂರ್ವ ಅನಾರೋಗ್ಯ ಇಲ್ಲದೇ ಕೇವಲ 39 ವರ್ಷ ವಯಸ್ಸಿಗೆ ಧಿಡೀರ್ ಹೃದಯಾಘಾತವಾಗಿ ಅಸುನೀಗಿದ್ದರು. ಆಗ ಮೇಘನಾ 5 ತಿಂಗಳ ಗರ್ಭಿಣಿ. ನಾವು ಇಂದಿನಲ್ಲಿ ಈ ಕ್ಷಣದಲ್ಲಿ ಬದುಕಬೇಕು, ನಾಳೆ ಎನ್ನುವುದು ಬಹಳ ಅನಿರೀಕ್ಷಿತ ಎನ್ನುವ ಪಾಠ ಈ ಯುವನಟರ ಸಾವು ಕಲಿಸಿದೆ ಎಂದಿದ್ದಾರೆ ಮೇಘನಾ.
ಈ ಮಾತನ್ನು ಎಲ್ಲರೂ ಒಪ್ಪಿಕೊಳ್ಳುತ್ತಾರೆ
ಇದು ಖಂಡಿತಾ ಸತ್ಯ ಎಂದು ಅಭಿಮಾನಿಗಳೆಲ್ಲಾ ಒಪ್ಪಿಕೊಂಡಿದ್ದಾರೆ. ಚಿರಂಜೀವಿ ಸರ್ಜಾ ಮತ್ತು ಪುನೀತ್ ರಾಜ್ಕುಮಾರ್ ಇಬ್ಬರೂ ಚಿತ್ರರಂಗದ ಹಿನ್ನೆಲೆ ಇರುವ ಕುಟುಂಬಗಳಿಂದ ಬಂದವರು. ಆದರೆ ಇಬ್ಬರೂ ತಂತಮ್ಮ ಪ್ರತಿಭೆಯಿಂದಲೇ ಗುರುತಿಸಿಕೊಂಡವರು. ಇದ್ದಷ್ಟು ದಿನವೂ ಖುಷಿ ಖುಷಿಯಾಗಿ ಎಲ್ಲರೊಂದಿಗೆ ಮಾತನಾಡುತ್ತಾ, ಆರಾಮಾಗಿ ಓಡಾಡಿಕೊಂಡಿದ್ದವರು. ಅವರನ್ನು ಭೇಟಿ ಮಾಡಿದವರೆಲ್ಲಾ ಇವತ್ತಿಗೂ ಅವರನ್ನು ನೆನೆಯುವುದು ಅವರ ಸರಳತೆಯಿಂದಲೇ.