ಹಿಟ್ಲರ್ ಆಡಳಿತ ನಡೆಯಲ್ಲ: ಕೇಂದ್ರಕ್ಕೆ ಬಿಗ್‌ಬಾಸ್ ಶಶಿ ಚಾಟಿ

ಕೇಂದ್ರದ ಹೊಸ ಕೃಷಿ ಕಾಯ್ದೆಗಳನ್ನು ವಿರೋಧಿಸಿ ಸಂಯುಕ್ತ ಕಿಸಾನ್ ಮೋರ್ಚಾ ಭಾರತ್ ಬಂದ್‌ಗೆ ಕರೆ ನೀಡಿದ್ದು, ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ರೈತರು ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ.
ಬೆಂಗಳೂರಿನ ಟೌನ್‌ಹಾಲ್ ಬಳಿ ನೂರಾರು ಮಂದಿ ಪ್ರತಿಭಟನಾಕಾರರು ಸೇರಿ ಕೇಂದ್ರದ ಕೃಷಿ ಕಾಯ್ದೆ ವಿರುದ್ಧ ಪ್ರತಿಭಟನೆ ನಡೆಸಿದ್ದು, ಈ ಪ್ರತಿಭಟನೆಯಲ್ಲಿ ಮಾಜಿ ಬಿಗ್‌ಬಾಸ್ ವಿನ್ನರ್ ಶಶಿ ಸಹ ಪಾಲ್ಗೊಂಡಿದ್ದರು. ಸ್ವತಃ ಕೃಷಿಕರೂ ಆಗಿರುವ ಶಶಿ ರೈತ ಪರ ಹೊರಾಟಗಳಲ್ಲಿ ತಪ್ಪದೇ ಪಾಲ್ಗೊಂಡು ರೈತರ ಪರ ದನಿ ಎತ್ತುತ್ತಾ ಬಂದಿದ್ದಾರೆ.
ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಬಿಗ್‌ಬಾಸ್ ಶಶಿ, ಮಾಧ್ಯಮದವರೊಟ್ಟಿಗೆ ಮಾತನಾಡಿ, ಕೇಂದ್ರದ ಕೃಷಿ ಕಾಯ್ದೆಗಳನ್ನು ವಿರೋಧಿಸಿದರು, ಅಲ್ಲದೆ ಕೇಂದ್ರ ಸರ್ಕಾರವು ಕೃಷಿಕರನ್ನು ನಡೆಸಿಕೊಳ್ಳುತ್ತಿರುವ ರೀತಿಯ ಬಗ್ಗೆಯೂ ಆಕ್ರೋಶ ವ್ಯಕ್ತಪಡಿಸಿದರು.
”ನಾವು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿದ್ದಾಗ ಪ್ರತಿಯೊಬ್ಬರ ಅಭಿಪ್ರಾಯವನ್ನು ನಾವು ಗೌರವಿಸಬೇಕಾಗುತ್ತದೆ. ಏಕಾ-ಏಕಿ ಮಸೂದೆ ತಂದು ಅದನ್ನು ಕಾಯ್ದೆ ಮಾಡಿ ದೇಶದ ಜನರ ಮೇಲೆ ಹೇರುವುದು ಸೂಕ್ತವಲ್ಲ. ಕಾಯ್ದೆ ಮಾಡುವ ಮುಂಚೆ ಸಾಕಷ್ಟು ಚರ್ಚೆ ನಡೆಯಬೇಕಾಗುತ್ತದೆ. ಕಾಯ್ದೆ ಸರಿಯಿದೆಯೇ, ಇಲ್ಲವೆ, ಸರಿಯಿಲ್ಲವಾದರೆ ಸರಿ ಮಾಡಲು ಏನು ಮಾಡಬೇಕು, ಅದನ್ನು ಬಿಟ್ಟು ಹಿಟ್ಲರ್ ಆಡಳಿತದ ರೀತಿ, ನೀವು ಅಂದುಕೊಂಡಿದ್ದೇ ನಿಯಮ ಎಂದು ಕಾಯ್ದೆ ಮಾಡುತ್ತಾ ಹೋದರೆ ಮುಂದಿನ ಪೀಳಿಗೆಗೆ ಕಷ್ಟವಾಗುತ್ತದೆ” ಎಂದಿದ್ದಾರೆ ಶಶಿ.”ರೈತರು ತೆರೆದ ಮಾರುಕಟ್ಟೆಯಲ್ಲಿ ಎಲ್ಲಿ ಬೇಕಾದರು ಮಾರಬಹುದು ಎಂದು ಕೇಂದ್ರ ಸರ್ಕಾರ ಹೇಳುತ್ತದೆ. ರಾಗಿಯ ಕನಿಷ್ಟ ಬೆಂಬಲ ಬೆಲೆ 3371 ರು ನೀಡುತ್ತೇವೆ ಎಂದಿದ್ದರು, ಆದರೆ ಇಂದು ಮಾರುಕಟ್ಟೆಯಲ್ಲಿ ಬೆಲೆ 2000 ಅಷ್ಟೆ ಇದೆ. ಇದರ ಬಗ್ಗೆ ಯಾರೂ ಕೇಳುತ್ತಿಲ್ಲ. ಕಬ್ಬಿನ ಬೆಲೆ ಬಗ್ಗೆ ಮಾತನಾಡುವುದಾದರೆ, ಕಬ್ಬಿನ ಬೆಳೆಗಾರರಿಂದ ನೇರವಾಗಿ ಕರ್ಖಾನೆಗಳು ಖರೀದಿ ಮಾಡುತ್ತಿವೆ. ಒಮ್ಮೆ ಮಂಡ್ಯದ ರೈತರನ್ನು ಕೇಳಿ, ಅವರಿಗೆ ಎಷ್ಟು ತಿಂಗಳಿಗೊಮ್ಮೆ ಹಣ ಖಾತೆಗೆ ಬರುತ್ತದೆ ಎಂದು. ಒಂದು ವರ್ಷ, ಎರಡು ವರ್ಷಕ್ಕೆ ಬಿಲ್ ಪಾವತಿ ಆಗುತ್ತದೆ” ಎಂದಿದ್ದಾರೆ ಶಶಿ.”ಕಾಯ್ದೆಗಳು ನಿಜಕ್ಕೂ ರೈತರಿಗೆ ಉಪಯೋಗ ಆಗುತ್ತವೆ ಎನ್ನುವುದೇ ಆದರೆ ಅದನ್ನು ನಿರೂಪಿಸಲು ಸರ್ಕಾರಕ್ಕೆ ಕಳೆದ ಒಂದು ವರ್ಷಕ್ಕೂ ಹೆಚ್ಚು ಕಾಲ ಅವಕಾಶ ಇತ್ತು. ಈ ಅವಧಿಯಲ್ಲಿ ಆನ್‌ಲೈನ್ ಮಾರುಕಟ್ಟೆ ಮತ್ತಿತರೆಗಳನ್ನು ಅವರು ಮಾಡಿ ತೋರಿಸಬಹುದಿತ್ತು. ರೈತರ ಜೀವನ ಚೆನ್ನಾಗಿ ಆಗಬೇಕು, ಅವರಿಗೆ ದುಡ್ಡು ಬರಬೇಕು ಎಂದೇ ಎಲ್ಲರು ಇಲ್ಲಿ ಬಂದಿರುವುದು, ಕಾಯ್ದೆ ಇಂದ ರೈತರ ಜೀವನ ಚೆನ್ನಾಗಿ ಆಗಿ, ಅವರಿಗೆ ದುಡ್ಡು ಬಂದಿದ್ದರೆ ಅವರೇಕೆ ಪ್ರತಿಭಟನೆ ಮಾಡುತ್ತಿದ್ದರು. ಹಲವು ಕೃಷಿ ಕಾಲೇಜುಗಳಿವೆ, ವಿಶ್ವವಿದ್ಯಾಲಯಗಳಿವೆ ಕಾರ್ಯಕ್ರಮಗಳನ್ನು ಮಾಡಿ, ಕಾಯ್ದೆ ಸರಿಯಾಗಿಯೇ ಇದೆ ಎಂದು ಸಾಕ್ಷಿ ಸಮೇತ ಸಾಬೀತು ಮಾಡಿ. ರೈತರಿಗೆ ಮನದಟ್ಟು ಮಾಡಿ” ಎಂದಿದ್ದಾರೆ ಶಶಿ.
”ವ್ಯವಸ್ಥೆಯಲ್ಲಿ ರೈತರು ಬಹಳ ಕೆಳ ಸ್ಥರದಲ್ಲಿದ್ದಾರೆ. ಎಲ್ಲ ರಾಜಕೀಯ ನಾಯಕರಿಗೂ, ರಾಜಕೀಯ ಪಕ್ಷಕ್ಕೂ ರೈತರು ಕೇವಲ ಸಿಂಪತಿ ಗಿಟ್ಟಿಸಿಕೊಳ್ಳುವ ಸರಕಷ್ಟೆ. ಯಾವುದೇ ಪಕ್ಷ ಅಧಿಕಾರಕ್ಕೆ ಬಂದರೂ ರೈತರ ಹೆಸರಲ್ಲಿ ಪ್ರಮಾಣ ವಚನ ಸ್ವೀಕರಿಸುತ್ತಾರೆ. ಕಾಂಗ್ರೆಸ್ ಸರ್ಕಾರವೂ ಸಹ ರೈತರ ಸಾಲ ಮನ್ನಾ ಮಾಡುತ್ತೇವೆ ಎಂದು ಹೇಳಿತ್ತು. ರಾಜಕೀಯ ಪಕ್ಷಗಳಿಗೆ ರೈತರು ಚುನಾವಣೆ ಗೆಲ್ಲಲು ಸಾಧನಗಳಷ್ಟೆ. ರೈತರಿಗೆ ಸಹಾಯ ಮಾಡಬೇಕು ಎಂಬ ಕನಿಷ್ಟ ಆಸಕ್ತಿ ಯಾರಿಗೂ ಇಲ್ಲ” ಎಂದಿದ್ದಾರೆ ಶಶಿ.
ರೈತರಿಗೆ ಪಂಗನಾಮ ಹಾಕಿದರೆ ಏನು ಮಾಡುವುದು: ಶಶಿ
”ಕೃಷಿ ಕಾಯ್ದೆಗಳನ್ನು ಕೇಂದ್ರ ಸರ್ಕಾರ ಹಿಂಪಡೆಯುತ್ತದೆ ಎಂಬ ವಿಶ್ವಾಸ ನನಗಂತೂ ಇಲ್ಲ. ಆದರೆ ರೈತರು ಈ ಕಾಯ್ದೆಯಲ್ಲಿರುವ ಹುಳುಕುಗಳನ್ನು ಅರಿತುಕೊಳ್ಳಬೇಕು. ಅಗ್ರಿಗೋಲ್ಡ್ ಅವರು ಬಂದರು ಜನಕ್ಕೆ ಟೋಪಿ ಹಾಕಿ ಹೋದರು, ಐಎಂಎ ಸಹ ಹಾಗೆಯೇ ಮಾಡಿತು. ಈ ಕಾಯ್ದೆ ದೆಸೆಯಿಂದ ಕಾರ್ಪೊರೇಟ್ ಸಂಸ್ಥೆಯವರು ಬಂದು ರೈತರಿಗೆ ಪಂಗನಾಮ ಹಾಕಿದರೆ ಏನು ಮಾಡುವುದು. ನಿಜವಾಗಿಯೂ ಕಾಯ್ದೆ ರೈತರ ಹಿತಕ್ಕಾಗಿ ಆಗಿದ್ದಿದ್ದರೆ ನೀವು ಮೊದಲು ರೈತರ ಬಳಿ ಚರ್ಚೆ ಮಾಡಿ ಕಾಯ್ದೆ ಮಾಡುತ್ತಿದ್ದಿರಿ” ಎಂದಿದ್ದಾರೆ ಬಿಗ್‌ಬಾಸ್ ವಿನ್ನರ್ ಶಶಿ.