ಅದಾನಿ ಲಂಚ ಪ್ರಕರಣ: ಸಂಸತ್ತು ಆವರಣದಲ್ಲಿ ಇಂಡಿಯಾ ಬ್ಲಾಕ್ ಸಂಸದರಿಂದ ಪ್ರತಿಭಟನೆ

ಉದ್ಯಮಿ ಗೌತಮ್ ಅದಾನಿ ವಿರುದ್ಧ ಅಮೆರಿಕದಲ್ಲಿ ಲಂಚ ಪ್ರಕರಣಕ್ಕೆ ಸಂಬಂಧಿಸಿ ದೋಷಾರೋಪಣೆ ಪಟ್ಟಿ ಸಲ್ಲಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂಡಿಯಾ ಬ್ಲಾಕ್ ಒಕ್ಕೂಟದ ಸಂಸದರು ಇಂದು ಮಂಗಳವಾರ ಸಂಸತ್ ಆವರಣದಲ್ಲಿ ಪ್ರತಿಭಟನೆ ನಡೆಸಿ ಈ ಬಗ್ಗೆ ಜಂಟಿ ಸಂಸದೀಯ ತನಿಖೆಗೆ ತಮ್ಮ ಬೇಡಿಕೆಯನ್ನು ಪುನರುಚ್ಚರಿಸಿದರು.
ಕಾಂಗ್ರೆಸ್, ಎಎಪಿ, ಆರ್‌ಜೆಡಿ, ಶಿವಸೇನೆ (ಯುಬಿಟಿ), ಡಿಎಂಕೆ ಮತ್ತು ಎಡಪಕ್ಷಗಳ ಸಂಸದರು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಘೋಷಣೆಗಳನ್ನು ಕೂಗಿದರು ಅದಾನಿ ಬಂಧನಕ್ಕೆ ಒತ್ತಾಯಿಸಿದರು.
ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಎಎಪಿಯ ಸಂಜಯ್ ಸಿಂಗ್, ಆರ್‌ಜೆಡಿಯ ಮಿಸಾ ಭಾರತಿ ಮತ್ತು ಶಿವಸೇನೆಯ (ಯುಬಿಟಿ) ಅರವಿಂದ್ ಸಾವಂತ್ ಅವರು ಸಂಸತ್ತಿನ ಮಕರ ದ್ವಾರದ ಮೆಟ್ಟಿಲುಗಳ ಮೇಲೆ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಲಂಚ ಮತ್ತು ವಂಚನೆ ಆರೋಪದ ಮೇಲೆ ಅದಾನಿ ಗ್ರೂಪ್ ಅಧ್ಯಕ್ಷ ಗೌತಮ್ ಅದಾನಿ ಮತ್ತು ಕಂಪನಿಯ ಇತರ ಅಧಿಕಾರಿಗಳ ವಿರುದ್ಧ ಯುಎಸ್ ಪ್ರಾಸಿಕ್ಯೂಟರ್‌ಗಳು ದೋಷಾರೋಪಣೆ ಮಾಡಿದ ನಂತರ ಕಾಂಗ್ರೆಸ್ ಮತ್ತು ಇತರ ಕೆಲವು ಪ್ರತಿಪಕ್ಷಗಳು ಜಂಟಿ ಸಂಸದೀಯ ಸಮಿತಿಯ ತನಿಖೆಗೆ ಒತ್ತಾಯಿಸುತ್ತಿವೆ.
ಯುಎಸ್‌ನಲ್ಲಿ ಅದಾನಿ ಗ್ರೂಪ್‌ನ ದೋಷಾರೋಪಣೆಯು ಸಂಸ್ಥೆಯ ವ್ಯವಹಾರಗಳ ಬಗ್ಗೆ ಜಂಟಿ ಸಂಸದೀಯ ಸಮಿತಿಯ ತನಿಖೆಗೆ ಒತ್ತಾಯಿಸಲು ವಿರೋಧ ಪಕ್ಷಗಳಿಗೆ ಹೊಸ ಅಸ್ತ್ರ ನೀಡಿದೆ. ಅದಾನಿಯನ್ನು ತಕ್ಷಣ ಬಂಧಿಸುವಂತೆ ರಾಹುಲ್ ಗಾಂಧಿಒತ್ತಾಯಿಸಿದ್ದರು. ಅದಾನಿ ಸಮೂಹವು ಎಲ್ಲಾ ಆರೋಪಗಳನ್ನು ಆಧಾರರಹಿತ ಎಂದು ನಿರಾಕರಿಸಿದೆ.