ಲಖ್ನೋ (ಅಕ್ಟೋಬರ್ 09); 9 ಜನರ ಸಾವಿಗೆ ಕಾರಣವಾದ ಲಖೀಪುರ್ ಖೇರಿ ಹತ್ಯಾಕಾಂಡದಲ್ಲಿ ಸಚಿವ ಅಜಯ್ ಮಿಶ್ರಾ ಮತ್ತು ಅವರ ಮಹ ಆಶೀಶ್ ಮಿಶ್ರಾ ಪಾತ್ರ ಪ್ರಮುಖವಾದದ್ದು. ಇದೇ ಕಾರಣಕ್ಕೆ ಇವರ ವಿರುದ್ಧ ಕಠಿಣ ಕ್ರಮಕ್ಕೆ ವರುಣ್ ಗಾಂಧಿ ಸೇರಿದಂತೆ ಹಿರಿಯ ಬಿಜೆಪಿ ನಾಯಕರೇ ಆಗ್ರಹಿಸಿದ್ದಾರೆ.
ಆದರೆ, ಈ ಬಗ್ಗೆ ಸ್ಪಷ್ಟನೆ ನೀಡಿರುವ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, “ಪ್ರಕರಣದಲ್ಲಿ ಯಾವುದೇ ಒತ್ತಡದಿಂದ ಯಾರ ವಿರುದ್ಧವೂ ಕ್ರಮ ಕೈಗೊಳ್ಳುವುದಿಲ್ಲ. ಸಾಕ್ಷಿ ಸಿಕ್ಕ ಬಳಿಕ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ” ಎಂದು ತಿಳಿಸಿದ್ದಾರೆ. ಕೇಂದ್ರ ಸಚಿವ ಅಜಯ್ ಮಿಶ್ರಾ ಮತ್ತು ಅವರ ಮಗ ಆಶಿಶ್ ಮಿಶ್ರಾನನ್ನು ಬಂಧಿಸುವಂತೆ ಪ್ರತಿಪಕ್ಷಗಳು ಆಗ್ರಹಿಸಿದ ಹಿನ್ನೆಲೆಯಲ್ಲಿ, ಹತ್ಯಾಕಾಂಡ ನಡೆದು ಆರು ದಿನಗಳ ಬಳಿಕ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಪ್ರತಿಕ್ರಿಯೆ ನೀಡಿದ್ದಾರೆ.
“ಲಖೀಂಪುರ್ ಖೇರಿ ಹತ್ಯಾಕಾಂಡದಲ್ಲಿ ನಾಲ್ವರು ರೈತರು ಸೇರಿದಂತೆ ಒಟ್ಟು 9 ಜನರು ಮೃತಪಟ್ಟಿದ್ದಾರೆ. ಈ ಘಟನೆ ದುರದೃಷ್ಟಕರ ಎಂದಿರುವ ಯೋಗಿ ಆದಿತ್ಯನಾಥ್, ಸರ್ಕಾರವು ಘಟನೆಯ ವಿವರಗಳನ್ನು ಆಳವಾಗಿ ಪರಿಶೀಲಿಸುತ್ತಿದೆ. ಅಲ್ಲದೆ, ಘಟನೆಯನ್ನು ನ್ಯಾಯಾಂಗ ತನಿಖೆಗೂ ಒಳಪಡಿಸಲಾಗಿದೆ” ಎಂದು ತಿಳಿಸಿದ್ದಾರೆ.