ಸಾಮಾನ್ಯವಾಗಿ ಎಲ್ಲಾ ರೈಲುಗಳು(Train) ತಮ್ಮ ಪ್ರಯಾಣ ಶುರುಮಾಡುವ ಸಂದರ್ಭದಲ್ಲಿ ಸರಿಯಾದ ಸಮಯಕ್ಕೆ ರೈಲ್ವೆ ನಿಲ್ದಾಣದಿಂದ ಹೊರಡುವುದನ್ನು ನಾವೆಲ್ಲಾ ನೋಡುತ್ತೇವೆ. ಆದರೆ ಇಲ್ಲೊಂದು ರೈಲು ಆರಂಭದ ನಿಲ್ದಾಣದಿಂದಲೇ ಸುಮಾರು 26 ನಿಮಿಷಗಳು ತಡವಾಗಿ(Late Departure) ಹೊರಟಿದೆ.ಇದಕ್ಕೆ ಕಾರಣವೇನು ಅಂತ ನೀವು ತಿಳಿದುಕೊಳ್ಳಬೇಕೇ..? ಈ ವಿಶೇಷ ರೈಲು ತಡವಾಗಿ ಹೊರಟಿದ್ದು ಒಂದು ಒಳ್ಳೆಯ ಕಾರಣಕ್ಕೆ ಅಂತ ಹೇಳಿದರೆ ತಪ್ಪಾಗುವುದಿಲ್ಲ. ಹೌರಾ ಡುರಾಂಟೊ ವಿಶೇಷ ರೈಲು ಭಾನುವಾರದಂದು ತನ್ನ ಆರಂಭದ ನಿಲ್ದಾಣವಾದ ಯಶವಂತಪುರದಿಂದ(Yashwanthpura) 26 ನಿಮಿಷಗಳು ತಡವಾಗಿ ಹೊರಟಿದೆ.
ಇತ್ತೀಚೆಗೆ ಬ್ರೈನ್ ಟ್ಯೂಮರ್‌ನಿಂದ ಚೇತರಿಸಿಕೊಂಡ 6 ವರ್ಷದ ಬಾಲಕಿಯು ಉಸಿರಾಟವನ್ನು ಬೆಂಬಲಿಸುವ ಯಂತ್ರದಲ್ಲಿದ್ದ ಕಾರಣ ಪ್ರಯಾಣದ ಸಮಯದಲ್ಲಿ ಯಾವುದೇ ತೊಂದರೆ ಆಗಬಾರದು ಎಂದು ಎಲ್ಲಾ ರೀತಿಯ ವ್ಯವಸ್ಥೆಯನ್ನು ಆ ಮಗುವಿನ ಪೋಷಕರು ಮಾಡಿಕೊಳ್ಳಲಿ ಎಂದು ಡುರಾಂಟೊ ವಿಶೇಷ ರೈಲು ತಡವಾಗಿ ಹೊರಟಿತು.

ಈ ವಿಶೇಷ ರೈಲಿನ ಸಂಖ್ಯೆಯು 02246 ಆಗಿದ್ದು, ಭಾನುವಾರ ಬೆಳಗ್ಗೆ 11 ಗಂಟೆಗೆ ಸರಿಯಾಗಿ ಯಶವಂತಪುರದಿಂದ ಹೊರಡಬೇಕಿದ್ದ ರೈಲು 11.26 ಕ್ಕೆ ಹೊರಟಿದೆ ಎಂದು ನೈಋತ್ಯ ರೈಲ್ವೆಯ ಅಧಿಕಾರಿಗಳು ತಿಳಿಸಿದ್ದಾರೆ.