ಕೊಡಗು : ನಿನ್ನೆಯಷ್ಟೇ 21 ವಿದ್ಯಾರ್ಥಿಗಳಿಗೆ (Students) ಕೋವಿಡ್ ಪಾಸಿಟಿವ್ (Corona Positive) ಬಂದಿದ್ದ ಕೊಡಗಿನ ಜವಹಾರ್ ನವೋದಯ ಶಾಲೆಯಲ್ಲೇ (Navoday School) ಮತ್ತೇ 10 ವಿದ್ಯಾರ್ಥಿಗಳಿಗೆ ಇಂದು ಕೋವಿಡ್ ಸೋಂಕು ದೃಢಪಟ್ಟಿದೆ. 270 ವಿದ್ಯಾರ್ಥಿಗಳಿರುವ ಶಾಲೆಯಲ್ಲಿ ಮೊನ್ನೆ 131 ವಿದ್ಯಾರ್ಥಿಗಳಿಗೆ ಗಂಟಲು ದ್ರವ ಪರೀಕ್ಷೆ ಮಾಡಲಾಗಿತ್ತು. ಆ ವೇಳೆ 21 ವಿದ್ಯಾರ್ಥಿಗಳಿಗೆ ಕೋವಿಡ್ ಸೋಂಕು ಇರುವುದು ದೃಢಪಟ್ಟಿತ್ತು. ಅಷ್ಟು ವಿದ್ಯಾರ್ಥಿಗಳಿಗೆ ಪಾಸಿಟಿವ್ ಬಂದಿದ್ದರಿಂದ ನಿನ್ನೆ ಉಳಿದ 140 ವಿದ್ಯಾರ್ಥಿಗಳ ಗಂಟಲು ದ್ರವದ ಮಾದರಿಯನ್ನು ಸಂಗ್ರಹಿಸಲಾಗಿತ್ತು. 140 ವಿದ್ಯಾರ್ಥಿಗಳಲ್ಲಿ 10 ವಿದ್ಯಾರ್ಥಿನಿಯರಿಗೆ ಪಾಸಿಟಿವ್ ಬಂದಿದೆ.

ಇದುವರೆಗೂ 33 ವಿದ್ಯಾರ್ಥಿಗಳಿಗೆ ಸೋಂಕು ದೃಢ
ಅಕ್ಟೋಬರ್ 23 ರಂದು 2 ವಿದ್ಯಾರ್ಥಿಗಳಿಗೆ ಸೋಂಕು ದೃಢಪಟ್ಟಿತ್ತು. ಹೀಗಾಗಿ ಕಳೆ ಒಂದು ತಿಂಗಳ ಹಿಂದೆ ಶಾಲೆ ಆರಂಭವಾದ ಬಳಿಕ ಜವಾಹರ್ ನವೋದಯ ವಿದ್ಯಾಲಯದ ಒಟ್ಟು 33 ವಿದ್ಯಾರ್ಥಿಗಳಿಗೆ ಸೋಂಕು ದೃಢಪಟ್ಟಂತೆ ಆಗಿದೆ. ಸದ್ಯ ಎಲ್ಲಾ ವಿದ್ಯಾರ್ಥಿಗಳನ್ನು ಮಡಿಕೇರಿ ಜಿಲ್ಲಾ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ವಿದ್ಯಾರ್ಥಿಗಳಿಗೆ ಸೋಂಕು ತಗುಲಿದ್ದು ಹೇಗೆ?
ಸೋಂಕು ದೃಢಪಟ್ಟಿರುವ ಯಾವುದೇ ವಿದ್ಯಾರ್ಥಿಗಳಿಗೆ ಯಾವುದೇ ರೋಗ ಲಕ್ಷಣಗಳು ಇಲ್ಲ. ಆದರೂ ಮುಂಜಾಗ್ರತಾ ಕ್ರಮವಾಗಿ ಎಲ್ಲಾ ವಿದ್ಯಾರ್ಥಿಗಳನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ ಎಂದಿದ್ದಾರೆ. ವಿದ್ಯಾರ್ಥಿಗಳು ಶಾಲೆಗೆ ಬರುವಾಗ ಎಲ್ಲರಿಗೂ ಕೋವಿಡ್ ನೆಗೆಟಿವ್ ವರದಿಯನ್ನು ಕಡ್ಡಾಯ ಮಾಡಲಾಗಿತ್ತು. ಹೀಗಾಗಿ ಎಲ್ಲಾ ವಿದ್ಯಾರ್ಥಿಗಳು ಕೋವಿಡ್ ನೆಗೆಟಿವ್ ವರದಿ ನೀಡಿಯೇ ಶಾಲೆಗೆ ಬಂದಿದ್ದರು. ಆದರೂ ಆ ವಿದ್ಯಾರ್ಥಿಗಳಿಗೆ ಕೋವಿಡ್ ಸೋಂಕು ಎಲ್ಲಿಂದ ಬಂತು ಎನ್ನೋದು ಗೊತ್ತಾಗಿಲ್ಲ.
ವಿದ್ಯಾರ್ಥಿಗಳು ರಜೆ ದಿನಗಳಲ್ಲಿ ಪ್ರಾಂಶುಪಾಲರ ಅನುಮತಿ ಪಡೆದು ಮನೆಗೆ ಹೋಗಿ ಬರುತ್ತಿದ್ದರು ಎನ್ನೋದು ಗೊತ್ತಾಗಿದೆ. ಹೀಗಾಗಿ ಅಲ್ಲಿಂದಲೂ ಹರಡಿರುವ ಸಾಧ್ಯತೆ ಇದೆ. ಅಲ್ಲದೆ ಅಕ್ಟೋಬರ್ 23 ರಂದು ಇಬ್ಬರು ವಿದ್ಯಾರ್ಥಿಗಳಿಗೆ ಜ್ವರವಿತ್ತು ಎಂದು ಅವರು ಜಿಲ್ಲಾಸ್ಪತ್ರೆಯಲ್ಲಿ ಗಂಟಲು ದ್ರವ ನೀಡಿ ಮನೆಗೆ ಹೋಗಿದ್ದರು. ಬಳಿಕ ವರದಿಯಲ್ಲಿ ಅವರಿಗೆ ಸೋಂಕು ಇರುವುದು ದೃಢಪಟ್ಟಿತ್ತು. ಹೀಗಾಗಿ ಅವರಿಂದಲೂ ಉಳಿದ ವಿದ್ಯಾರ್ಥಿಗಳಿಗೆ ಸೋಂಕು ಹರಡಿರಬಹುದುು ಎಂಬ ಅನುಮನ ಇದೆ.