ಕೋಲಾರ: ನಾನು ಸತ್ತ ಮೇಲೆ ನನ್ನ ಫೋಟೋ ಇರೋ ಬ್ಯಾನರ್ ಹಾಕಿ. ನಾನು ಸಾಯಲು ಹೋಗುತ್ತಿದ್ದೇನೆ ಎಂದು ಮೆಸೇಜ್ ಹಾಕಿ 17 ವರ್ಷದ ವಿದ್ಯಾರ್ಥಿ (PU Student) ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೋಲಾರ ಜಿಲ್ಲೆಯ ಶ್ರೀನಿವಾಸಪುರ (Srinivasapur, Kolar)ಪಟ್ಟಣದ ಹೊರವಲಯದ ಕಾಲೋನಿಯಲ್ಲಿ ನಡೆದಿದೆ. ಮೆಸೇಜ್ ಕಳಿಸಿದ ವಿದ್ಯಾರ್ಥಿ ಕೆರೆಗೆ ಹಾರಿ ಪ್ರಾಣ ಕಳೆದುಕೊಂಡಿದ್ದಾನೆ. ಇಂದು ಬೆಳಗ್ಗೆ ಅಗ್ನಿಶಾಮಕದಳದ ಸಿಬ್ಬಂದಿ ವಿದ್ಯಾರ್ಥಿಯ ಶವ ಹೊರ ತೆಗೆದಿದ್ದಾರೆ. ಮಗನನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಕಿಶೋರ್ ಕುಮಾರ್ ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿ.
ವಾಟ್ಸಪ್ ಗ್ರೂಪ್ ನಲ್ಲಿ ಕೆರೆ ಫೋಟೋ ಕಳಿಸಿದ

ಮೃತ ಕಿಶೋರ್ ಕುಮಾರ್ ಶ್ರೀನಿವಾಸಪುರದ ಗಂಗೋತ್ರಿ ಕಾಲೇಜಿನಲ್ಲಿ ಪ್ರಥಮ ಪಿಯು ಓದುತ್ತಿದ್ದನು. ಮಂಗಳವಾರ ಸಂಜೆ ಸುಮಾರು 4 ಗಂಟೆಗೆ ಕಿಶೋರ್ ತನ್ನ ಎಲ್ಲ ಗೆಳೆಯರಿಗೂ ಕೊನೆಯ ಸಂದೇಶ ಕಳುಹಿಸಿದ್ದಾನೆ. ವಾಟ್ಸಪ್ ಗ್ರೂಪ್ ನಲ್ಲಿ ತಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಫೋಟೋ ಸಹ ಹಾಕಿಕೊಂಡಿದ್ದನು. ಕಿಶೋರ್ ಕುಮಾರ್ ಮೆಸೇಜ್ ನೋಡುತ್ತಿದ್ದಂತೆ ಕುಟುಂಬಸ್ಥರು ಮತ್ತು ಸ್ನೇಹಿತರು ಕೆರೆಯ ವ್ಯಾಪ್ತಿಯಲ್ಲಿ ಹುಡುಕಾಟ ನಡೆಸಿದ್ದಾರೆ.
ಕಿಶೋರ್ ಪತ್ತೆಯಾಗದಿದ್ದಾಗ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು ಇಂದು ಬೆಳಗ್ಗೆ ಕಿಶೋರ್ ಕುಮಾರ್ ಶವ ಹೊರ ತೆಗೆದು ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ಸಾರ್ವಜನಿಕ ಆಸ್ಪತ್ರೆಗೆ ರವಾನಿಸಿದ್ದಾರೆ.