ಚಿತ್ರದುರ್ಗ: ನಟ ಶಶಿಕುಮಾರ್ (Actor Shashikumar) ಮತ್ತೆ ರಾಜಕೀಯಕ್ಕೆ ಕಮ್ ಬ್ಯಾಕ್ ಮಾಡುವ ಸಾಧ್ಯತೆಗಳಿವೆ. ಮುಂದಿನ ವಿಧಾನಸಭಾ ಚುನಾವಣೆಗೆ (Assembly Election) ಹದಿನೈದು ತಿಂಗಳು ಇರುವಾಗಲೇ ಮತ್ತೆ ತಮ್ಮ ಹಳೆ ಲಯಕ್ಕೆ ಮರಳಲು ಶಶಿಕುಮಾರ್ ತಯಾರಿ ನಡೆಸುತ್ತಿದ್ದಾರೆ. ಚಿತ್ರದುರ್ಗ (Chitradurga) ಜಿಲ್ಲೆಯ ಎರಡು ಕ್ಷೇತ್ರಗಳ ಮೇಲೆ ಕಾಲಿಟ್ಟಿರುವ ಶಶಿಕುಮಾರ್, ಚುನಾವಣೆಗೆ ಸ್ಪರ್ಧಿಸುವ ಸಾಧ್ಯತೆಗಳಿವೆ. ಆದರೆ ಯಾವ ಕ್ಷೇತ್ರ? ಯಾವ ಪಕ್ಷ ಎಂಬ ಪ್ರಶ್ನೆಗೆ ಉತ್ತರ ಅಸ್ಪಷ್ಟ. ಸದ್ಯದಲ್ಲಿಯೇ ತಮ್ಮ ಮುಂದಿನ ರಾಜಕೀಯ ನಡೆಯ ಕುರಿತು ಅಧಿಕೃತ ಹೇಳಿಕೆ ನೀಡೋದಾಗಿ ನಟ ಶಶಿಕುಮಾರ್ ತಿಳಿಸಿದ್ದಾರೆ. ಕಳೆದ ಬಾರಿ ಹೊಸದುರ್ಗದಿಂದ ಸ್ಪರ್ಧೆ ಮಾಡಿದ ಶಶಿಕುಮಾರ್ ಸೋಲು ಕಂಡಿದ್ದರು.

ಎರಡು ಕ್ಷೇತ್ರಗಳ ಮೇಲೆ ಕಣ್ಣಿಟ್ಟ ಶಶಿಕುಮಾರ್?
ಪರಿಶಿಷ್ಠ ವರ್ಗಕ್ಕೆ ಮೀಸಲಾಗಿರುವ ಮೊಳಕಾಲ್ಮೂರು ಮತ್ತು ಚಳ್ಳಕೆರೆ ವಿಧಾನಸಭಾ ಕ್ಷೇತ್ರಗಳಲ್ಲಿ ಶಶಿಕುಮಾರ್ ಕಣ್ಣಿಟ್ಟಿದ್ದಾರೆ. ಸೋಮವಾರ ಎರಡೂ ಕ್ಷೇತ್ರಗಳಿಗೆ ಭೇಟಿ ನೀಡಿದ್ದ ಶಶಿಕುಮಾರ್ ಗೆ ಅಭಿಮಾನಿಗಳು ಸಾಥ್ ನೀಡಿದರು. ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿ ತಿಪ್ಪೇರುದ್ರಸ್ವಾಮಿ ದೇಗುಲ ಮತ್ತು ಮೊಳಕಾಲ್ಮೂರು ಕ್ಷೇತ್ರದ ಸಾಯಿಬಾಬ ಮಂದಿರಕ್ಕೆ ಭೇಟಿ ನೀಡಿದ ಶಶಿಕುಮಾರ್ ವಿಶೇಷ ಪೂಜೆ ಸಲ್ಲಿಸಿದರು. ಶಶಿಕುಮಾರ್ ಕ್ಷೇತ್ರಕ್ಕೆ ಹಿಂದಿರುಗಿರೋದಕ್ಕೆ ಸ್ಥಳೀಯ ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದಾರೆ.
ಚುನಾವಣೆ ಸ್ಪರ್ಧೆ ಖಚಿತ ಪಡಿಸಿದ ಶಶಿಕುಮಾರ್
ಚಳ್ಳಕೆರೆಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಶಶಿಕುಮಾರ್, ಚುನಾವಣೆಗೆ ಸ್ಪರ್ಧೆ ಮಾಡೋದು ಖಚಿತ. ಆದ್ರೆ ಯಾವ ಕ್ಷೇತ್ರ ಮತ್ತು ಪಕ್ಷ ಅಂತ ಅಂತಿಮಗೊಂಡಿಲ್ಲ. ಶೀಘ್ರದಲ್ಲಿಯೇ ಈ ಕುರಿತು ಅಧಿಕೃತವಾಗಿ ತಿಳಿಸುತ್ತೇನೆ. ಜಿಲ್ಲೆಯ ಎಸ್ ಟಿ ಮೀಸಲು ಕ್ಷೇತ್ರದಿಂದ ಸ್ಪರ್ಧೆ ಮಾಡಲಿದ್ದೇನೆ. ಕಳೆದ ಬಾರಿ ಟಿಕೆಟ್ ಸಿಗದ ಕಾರಣ ಹೊಸದುರ್ಗಕ್ಕೆ ಹೋಗಿದ್ದೆ. ಆದ್ರೆ ಈ ಬಾರಿ ಚಿತ್ರದುರ್ಗ ಜಿಲ್ಲೆಯ ಕ್ಷೇತ್ರದಿಂದಲೇ ಚುನಾವಣೆಗೆ ಸ್ಪರ್ಧಿಸೋದು ಖಚಿತ ಅಂತ ಹೇಳಿದ್ದಾರೆ.